ಕನ್ನಡ ರಾಜ್ಯೋತ್ಸವ ಮತ್ತು ಕಾರ್ತೀಕ ಬೆಳಕು ಉಪನ್ಯಾಸ ಮಾಲಿಕೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಅಕ್ಕ ಮತ್ತು ಅಯ್ಯ ಎಂಬ ಸಂಸ್ಕೃತಿಯನ್ನು ಹುಟ್ಟುಹಾಕಿದ್ದು ಶರಣರು ಎಂದು ಬೀರೂರು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿ ಭಾಗ್ಯ ಮಲ್ಲೇಶ್ ಹೇಳಿದ್ದಾರೆ.
ಸೋಮವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆಯಿಂದ ಪಟ್ಟಣದ ಕಂಬದ ಬೀದಿ ಶಿಕ್ಷಕರಾದ ಮಾನಸ ಮತ್ತು ನಾಗರಾಜ್ ಮನೆಯಂಗಳದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕಾರ್ತೀಕ ಬೆಳಕು ಉಪನ್ಯಾಸ ಮಾಲಿಕೆ ಅಂಗವಾಗಿ ನಡೆದ ಕನ್ನಡ ಭಾಷೆಗೆ ವಚನ ಸಾಹಿತ್ಯ ಕೊಡುಗೆ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು. ವಚನ ಸಾಹಿತ್ಯ ಯಾವುದೇ ಒಂದು ವರ್ಗ ಮತ್ತು ಪಂಗಡಕ್ಕೆ ಸೀಮಿತ ವಾಗಿಲ್ಲ. ಎಲ್ಲ ವರ್ಗದ ಎಲ್ಲ ಕಾಯಕಗಳ ವ್ಯಕ್ತಿಗಳು ಶರಣ ಸಂಸ್ಕೃತಿ ಒಪ್ಪಿಕೊಂಡರು. ವಚನ ಸಾಹಿತ್ಯದ ಒಂದೊಂದು ಸಾಲಿನ ಮೇಲೆ ಇಂದು ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇಂದು ಶರಣರ ಚಿಂತನ-ಮಂಥನ ಕಾರ್ಯಕ್ರಮ ಹೆಚ್ಚಾಗಬೇಕು.ತರೀಕೆರೆ ನೆಲವು ಶರಣೆ ಅಕ್ಕನಾಗಮ್ಮ ಮತ್ತು ಶರಣರಾದ ನುಲಿಯ ಚಂದಯ್ಯ ಅವರಿಗೆ ಆಶ್ರಯ ನೀಡಿದೆ. ನಾಡೋಜ ಗೊ.ರು.ಚನ್ನಬಸಪ್ಪ ಶರಣ ಸಾಹಿತ್ಯವನ್ನು ನಾಡಿಗೆ ಪ್ರಸಾರ ಮಾಡಿದವರು. ಈ ತರೀಕೆರೆ ನೆಲದಲ್ಲಿ ಶರಣ ಸಾಹಿತ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಅಫ್ ಘಾನಿಸ್ಥಾನ ಮತ್ತು ಕಾಶ್ಮೀರದಿಂದ ಬಂದ ಅರಸರು ಕನ್ನಡ ಭಾಷೆ ಕಲಿತು ಶರಣ ಸಂಸ್ಕೃತಿಯನ್ನು ಒಪ್ಪಿ ವಚನ ಸಾಹಿತ್ಯ ರಚಿಸಿದರು. ಮೋಳಿಗೆ ಮಾರಯ್ಯ, ಮರುಳಶಂಕರ, ಮಾದಾರ ಚೆನ್ನಯ್ಯ ದೋಹರ ಕಕ್ಕಯ್ಯ ಅನೇಕ ಶರಣರು ವಚನ ಸಾಹಿತ್ಯಕ್ಕೆ ಕೊಟ್ಟಂತಹ ಕೊಡುಗೆ ಸ್ಮರಿಸಿದರು.ಪುರಸಭಾ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ವಚನಗಳ ಬಿತ್ತರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವನ್ನು ಶರಣ ಸಾಹಿತ್ಯ ಪರಿಷತ್ತು ಮಾಡಿಸಲಿ. ಶರಣರು ದಾಸ ಶ್ರೇಷ್ಠರು ಜಗತ್ತಿಗೆ ಒಳಿತನ್ನು ಸಾರಿದ್ದಾರೆ. ಅವರ ಆದರ್ಶಗಳನ್ನು ಸಮಾಜ ಇಂದು ಪಾಲಿಸ ಬೇಕಿದೆ. ವಚನ ಸಾಹಿತ್ಯ ಕಾಯಕ ಮತ್ತು ದಾಸೋಹದ ಮಹತ್ವ ಸಾರುತ್ತದೆ ಎಂದು ತಿಳಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ನಾಡಿನ ಸಂಸ್ಕೃತಿಯನ್ನು ಮತ್ತೆ ಕಟ್ಟುವಲ್ಲಿ ಶರಣರ ಬದುಕಿನ ಅರಿವು ನಮ್ಮೆಲ್ಲರಿಗೂ ಅಗತ್ಯವಾಗಿದೆ. ಸಮಾಜದ ಇಂದಿನ ಸಮಸ್ಯೆಗಳಿಗೆ ಶರಣರ ಬದುಕು ಅವರ ನೆಡೆ-ನುಡಿ ಮತ್ತು ವಚನ ಸಾಹಿತ್ಯ ದಿವ್ಯ ಔಷಧವಾಗಿದೆ. ತಾಲೂಕು ಶರಣ ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ ಶಾಲೆ ಹಟ್ಟಿ ಕೇರಿಗಳಲ್ಲಿ ವಚನ ಸಾಹಿತ್ಯ ಕೊಂಡೊಯ್ಯುವ ಮೂಲಕ ಶರಣ ಆಶಯಗಳನ್ನು ನಿಜಗೊಳಿಸಲಿದೆ. ಶರಣರು ಮತ್ತು ದಾಸರನ್ನು ಇಂದಿನ ಸಮಾಜಕ್ಕೆ ಮುಖಾ ಮುಖಿ ಯಾಗಿಸುವ ಕೆಲಸವನ್ನುಪರಿಷತ್ತು ಮಾಡಲಿದೆ ಎಂದು ಹೇಳಿದರು.ಪುರಸಭೆ ಮಾಜಿ ಸದಸ್ಯರಾದ ಒಗ್ಗಪ್ಪಾರವರ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ವಿರೇಶ ಹಿರೇಮಠ ಮಾತನಾಡಿದರು.
ಶಿಕ್ಷಕರಾದ ಟಿ.ಎಸ್.ನಾಗರಾಜ್ , ಮಾನಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕನ್ನಡ ಶ್ರೀ ಬಿ.ಎಸ್.ಭಗವಾನ್, ಕಸಾಪ ಅದ್ಯಕ್ಷ ರವಿ ದಳವಾಯಿ, ಶಿಕ್ಷಕ ಚೇತನ್, ಸಾಹಿತಿ ಮೋಹನ್ ಕುಮಾರ್, ಲೇಖಕ ತ.ಮ.ದೇವಾನಂದ್, ಸ.ನೌ.ಸಂಘದ ನಿರ್ದೇಶಕ ಎಂ.ಬಿ.ರಾಮಚಂದ್ರಪ್ಪ, ಅನಂತಪ್ಪ, ತಿಪ್ಪೇಶಪ್ಪ, ಟಿ.ಜಿ.ಸದಾನಂದ, ಪದ್ಮ, ಮದುಸೂದನ್ ಕಕ್ರಿ ಮತ್ತಿತರರು ಭಾಗವಹಿಸಿದ್ದರು.4ಕೆಟಿಆರ್.ಕೆ.15ಃತರೀಕೆರೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆಯಿಂದ ಶಿಕ್ಷಕರಾದ ಮಾನಸ ಮತ್ತು ನಾಗರಾಜ್, ಮನೆಯಂಗಳದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕಾರ್ತೀಕ ಬೆಳಕು ಉಪನ್ಯಾಸ ಮಾಲಿಕೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬೀರೂರು ಸರ್ಕಾರಿ ಪಿ.ಯು.ಕಾಲೇಜಿನ ಉಪನ್ಯಾಸಕಿ ಭಾಗ್ಯ ಮಲ್ಲೇಶ್ ಅವರು ಮಾತನಾಡಿದರು
----------------------