ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಅರಸೊತ್ತಿಗೆಯ ವಿಲಾಸಿ ಜೀವನ ಧಿಕ್ಕರಿಸಿ, ಅಧ್ಯಾತ್ಮಿಕ ಸೋಪಾನ ತುಳಿಯುವ ಮೂಲಕ ಕನ್ನಡದ ಆದ್ಯ ವಚನಕಾರ್ತಿ ಅಕ್ಕಮಹಾದೇವಿ ಇಂದಿಗೂ ಜ್ಞಾನ ಮತ್ತು ವೈರಾಗ್ಯದ ಸಾಕ್ಷಿ ಮೂರ್ತಿಯಾಗಿದ್ದಾರೆಂದು ತಹಸೀಲ್ದಾರ್ ವಿಜಯಕುಮಾರ ಕಡಕೋಳ ಹೇಳಿದರು.ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಿಸರ್ಗದ ಮೂಲಸೆಲೆ ಉಡುತಡಿಯಲ್ಲಿ ಜನಿಸಿದ ಅಕ್ಕಮಹಾದೇವಿ ವಚನಗಳಲ್ಲಿ ನಿಸರ್ಗದ ಪ್ರಾಣಿ-ಪಕ್ಷಿಗಳ ಬಗ್ಗೆ ಅಪಾರ ಜ್ಞಾನ, ದೃಷ್ಟಾಂತ, ಉಪಮಾನ, ಉಪಮೇಯ, ಅಲಂಕಾರಗಳಾಗಿ ಬಳಕೆಯಾಗಿವೆ. ಅಧ್ಯಾತ್ಮಿಕ ಭಾವಗೀತೆಗಳನ್ನು ವಚನಗಳಲ್ಲಿ ಅಳವಡಿಸುವ ಮೂಲಕ ಅದ್ಭುತ ಅನುಭಾವಿ ದಾರ್ಶನಿಕೆಯಾಗಿ ರೂಪುಗೊಂಡರು. ಅರಸೊತ್ತಿಗೆಯ ವೈಭೋಗ ತೊರೆದು, ಸುಂದರತೆಯ ಸಾಕಾರವೇ ಆಗಿದ್ದ ಅಕ್ಕಮಹಾದೇವಿ ಸರಳತೆ, ಸಹಜತೆ, ಕರುಣೆ ಮೊದಲಾದ ಗುಣಗಳ ಧಾರಣಮಾಡಿ ಅಧ್ಯಾತ್ಮಿಕತೆಯ ಮೇರುಪಂಕ್ತಿಗೇರಿದ ಮೊಟ್ಟಮೊದಲ ಕನ್ನಡ ವಚನಗಾರ್ತಿ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ. ಶರಣರ ವಿಚಾರ ಮತ್ತು ನಡೆಗಳು ನಮಗೆಲ್ಲ ಆದರ್ಶವಾಗಿದ್ದು, ನಿತ್ಯದ ಬದುಕಿನಲ್ಲಿ ಅಳವಡಿಕೆಗೆ ಯೋಗ್ಯವಾಗಿವೆಯೆಂದು ಕಡಕೋಳ ಹೇಳಿದರು.
ಬಣಜಿಗ ಸಮಾಜದ ರಬಕವಿ ಘಟಕದ ಅಧ್ಯಕ್ಷ ಗಿರೀಶ ಮುತ್ತೂರ ಬಸವಾದಿ ಶರಣರ ಬದುಕೇ ನಮಗೆ ಸಂದೇಶ. ಅವರಲ್ಲಿನ ಕಾಯಕನಿಷ್ಠೆ, ದಾಸೋಹ ಪ್ರೇಮ ಮತ್ತು ಸಾಮಾಜಿಕ ಸಮಾನತೆ, ಸಾಮರಸ್ಯಯುತ ಜೀವನಕ್ರಮ ಅನುಕರಣಯೋಗ್ಯವೆಂದರು.ರಬಕವಿ-ಬನಹಟ್ಟಿ ಬಣಜಿಗ ಸಮಾಜದ ಧುರೀಣರಾದ ಗುರುಸಿದ್ದಪ್ಪಾ ಚನಾಳ, ಚಂದ್ರಶೇಖರ ಹುಲಗಬಾಳಿ, ಬಸವರಾಜ ತೆಗ್ಗಿ, ಬಸವರಾಜ ಕುಂಚನೂರ, ಸೋಮಶೇಖರ ಕೊಟ್ರಶೆಟ್ಟಿ, ಈಶ್ವರ ಜಿಗಜಿನ್ನಿ, ಪ್ರಕಾಶ ಟೆಂಗಿನಕಾಯಿ, ವಿಜಯಕುಮಾರ ನಾಶಿ, ಶ್ರೀಶೈಲ ಪಾನಶೆಟ್ಟರ, ಉದಯಕುಮಾರ ಜಿಗಜಿನ್ನಿ, ಮಹಾಶಾಂತ ಶೆಟ್ಟಿ, ಗಜಾನನ ತೆಗ್ಗಿ, ವಿಜಯಕುಮಾರ ಹಲಕುರ್ಕಿ, ಮಲ್ಲಿಕಾರ್ಜುನ ಗಡೆನ್ನವರ, ಉಪತಹಸೀಲ್ದಾರ್ ಆರ್.ಎಸ್.ಸಾತಿಹಾಳ, ಸದಾಶಿವ ಕುಂಬಾರ ಸೇರಿದಂತೆ ಕಚೇರಿ ಸಿಬ್ಬಂದಿ, ಪ್ರಮುಖರಿದ್ದರು.