ಆಲೆಮನೆ-ಕೃಷಿಕ ಸಂಸ್ಕೃತಿಯ ಹಬ್ಬ: ತಹಸೀಲ್ದಾರ್ ಎಂ. ಗುರುರಾಜ

KannadaprabhaNewsNetwork |  
Published : Jan 11, 2024, 01:30 AM ISTUpdated : Jan 11, 2024, 01:21 PM IST
ಫೋಟೋ ಜ.೧೦ ವೈ.ಎಲ್.ಪಿ. ೦೫ | Kannada Prabha

ಸಾರಾಂಶ

ಈ ವರ್ಷ ನಮ್ಮ ರೈತರಿಗೆ ತೀವ್ರ ಮಳೆಯ ಕೊರತೆಯಿಂದಾಗಿ ಕೃಷಿಗೆ ಹಿನ್ನಡೆಯಾಗಿದೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ರೈತರು ಸಮೃದ್ಧಿಗೊಂಡಾಗ, ಎಲ್ಲರು ನೆಮ್ಮದಿ ಪಡೆಯುವುದಕ್ಕೆ ಸಾಧ್ಯ.

ಯಲ್ಲಾಪುರ: ನಾಡಿನ ಕೃಷಿಕರ ಹೆಮ್ಮೆಯ ಸಂಸ್ಕೃತಿಯ ಹಬ್ಬ ಆಲೆಮನೆ. ಇದು ಕೆಲವು ವರ್ಷಗಳ ಹಿಂದೆ ಪ್ರತಿ ಮನೆಗಳಲ್ಲೂ ಕಾಣಬಹುದಾಗಿತ್ತು. ಇಂದು ಇಂತಹ ಸಂಘ-ಸಂಸ್ಥೆಗಳು ಈ ಆಲೆಮನೆ ಹಬ್ಬ ಆಚರಿಸುವ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ ಎಂದು ತಹಸೀಲ್ದಾರ ಎಂ. ಗುರುರಾಜ ಹೇಳಿದರು.

ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಟಿಎಂಎಸ್ ಸೂಪರ್‌ ಮಾರ್ಟ್‌ ಆವಾರದಲ್ಲಿ ಹಮ್ಮಿಕೊಂಡಿದ್ದ ಆಲೆಮನೆ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಪರಂಪರೆಯಲ್ಲಿ ಕೃಷಿಗೆ ಅತ್ಯಂತ ಪ್ರಾಧಾನ್ಯ ಇತ್ತು. ನಮ್ಮ ಭವಿಷ್ಯದ ಯುವಜನಾಂಗ ಇಂತಹ ಹಬ್ಬಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಪರಂಪರೆಯ ವಿಶೇಷತೆಯನ್ನು ಮನಗಾಣಬೇಕಾಗಿದೆ ಎಂದು ಹೇಳಿದರು.

ಈ ವರ್ಷ ನಮ್ಮ ರೈತರಿಗೆ ತೀವ್ರ ಮಳೆಯ ಕೊರತೆಯಿಂದಾಗಿ ಕೃಷಿಗೆ ಹಿನ್ನಡೆಯಾಗಿದೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ರೈತರು ಸಮೃದ್ಧಿಗೊಂಡಾಗ, ನಾವೆಲ್ಲರೂ ನೆಮ್ಮದಿ ಪಡೆಯುವುದಕ್ಕೆ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಪ್ರತಿಯೊಬ್ಬ ರೈತನೂ ತನ್ನ ಭೂಮಿಯಲ್ಲಿ ತನ್ನ ಮನೆಗೆ ಬೇಕಾದ ಊಟಕ್ಕೆ ಅಗತ್ಯವಾದ ಅಕ್ಕಿ, ತಿನ್ನಲು ಬೆಲ್ಲ ಬೆಳೆಯುವ ಮನಸ್ಸು ಮಾಡಬೇಕು. ಇದು ನಮ್ಮ ಪರಂಪರೆಯಿಂದ ನಡೆದು ಬಂದ ಕ್ರಮ. ಅದನ್ನು ಮುಂದುವರಿಸಬೇಕು ಎಂದರು.

ನಾವು ನಮ್ಮ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲ ವಸ್ತುಗಳನ್ನು ನೀಡುತ್ತಿದ್ದೇವೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುವುದು. ಗ್ರಾಹಕರ ಪ್ರೀತಿ, ವಿಶ್ವಾಸ ಇದ್ದಾಗ ಮಾತ್ರ ನಮ್ಮ ಸಂಸ್ಥೆಯೂ ಬೆಳೆದು ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ನೀಡಲು ಸಾಧ್ಯ ಎಂದರು.

ತಾಲೂಕಿನ ಅತಿಹೆಚ್ಚು ಕಬ್ಬು ಬೆಳೆಯುವ ರೈತರಾದ ಗೋಪಾಲಕೃಷ್ಣ ಭಟ್ಟ ಹುಲಗೋಡ, ಮೋಹನ ಭಟ್ಟ ಹೊನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು. ರವೀಂದ್ರನಗರದ ಆದರ್ಶ ಮಹಿಳಾ ಮಂಡಳಿಯವರು ಭಗವದ್ಗೀತೆ ಪಠಿಸಿದರು.

ಉಪಾಧ್ಯಕ್ಷ ನರಸಿಂಹ ಕೋಣೆಮನೆ, ನಿರ್ದೇಶಕ ಸುಬ್ಬಣ್ಣ ಬೋಳ್ಮನೆ, ಮುಖ್ಯ ಕಾರ್ಯನಿರ್ವಾಹಕ ಸಿ.ಎಸ್. ಹೆಗಡೆ ಉಪಸ್ಥಿತರಿದ್ದರು. ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ ಸ್ವಾಗತಿಸಿದರು. ವಿ.ಟಿ. ಹೆಗಡೆ ತೊಂಡೆಕೇರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ