ದೇಶದ ಎಲ್ಲ ಸಹಕಾರಿ ಸಂಘಗಳಿಗೆ ಏಕರೂಪಿ ತಂತ್ರಜ್ಞಾನದ ಅಗತ್ಯ: ಸುರೇಶ್ ಪ್ರಭು

KannadaprabhaNewsNetwork | Published : Aug 11, 2024 1:35 AM

ಸಾರಾಂಶ

ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಡಿಜಿಟಲ್ ಬ್ಯಾಂಕಿಂಗ್ ಯುಪಿಐ ವ್ಯವಸ್ಥೆಗೆ ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಸಹಕಾರಿ ನೀತಿ ಆಯೋಗ ಅಧ್ಯಕ್ಷ ಸುರೇಶ್ ಪಿ. ಪ್ರಭು ಅವರು ಶನಿವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರತಿಷ್ಠಿತ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಡಿಜಿಟಲ್ ಬ್ಯಾಂಕಿಂಗ್ ಯುಪಿಎ ವ್ಯವಸ್ಥೆಗೆ ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಸಹಕಾರಿ ನೀತಿ ಆಯೋಗ ಅಧ್ಯಕ್ಷ ಸುರೇಶ್ ಪಿ. ಪ್ರಭು ಅವರು ಶನಿವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ದೇಶದ ಸಣ್ಣ ಸಹಕಾರಿ ಸಂಘಗಳು ನೂತನ ತಂತ್ರಜ್ಞಾನವನ್ನು ಹೊಂದಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಎಲ್ಲ ಸಹಕಾರಿ ಸಂಘಗಳು ಹೊರಗುತ್ತಿಗೆ ಆಧಾರದಲ್ಲಿ ಬಳಸಲು ಸಾಧ್ಯವಾಗುವಂತಹ ಏಕರೂಪಿ ತಂತ್ರಜ್ಞಾನವೊಂದನ್ನು ಜಾರಿಗೊಳಿಸಬೇಕಾದ ಅವಶ್ಯಕತೆ ಇದೆ ಎಂದರು.ಸಹಕಾರಿ ಸಂಘಗಳು ಸಮಾಜದ ಆರ್ಥಿಕ ಅಭಿವೃದ್ಧಿಯ ಗುರುತರ ಸಾಧನಗಳಾಗಿವೆ. ಇಂದು ನಮ್ಮ ದೇಶ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಆದರೆ ಜನರ ತಲಾ ಆದಾಯ ಮಾತ್ರ ಹೆಚ್ಚುತ್ತಿಲ್ಲ. ಇದಕ್ಕೆ ಸಹಕಾರಿ ಸಂಘಗಳಿಂದ ಮಾತ್ರ ಪರಿಹಾರ ಸಾಧ್ಯ ಎಂದವರು ಅಭಿಪ್ರಾಯಪಟ್ಟರು.ಸಹಕಾರಿ ಸಂಘಗಳಿಂದ ರೈತರಿಗೆ, ಮೀನುಗಾರರಿಗೆ, ಮಹಿಳೆಯರಿಗೆ, ಯುವಕರಿಗೆ, ರಸ್ತೆಬದಿ ವ್ಯಾಪಾರಿಗಳಿಗೆ ಸುಲಭವಾಗಿ ಸಾಲ ಸಿಗುವುದರಿಂದ ಅವರ ತಲಾ ಆದಾಯ ಹೆಚ್ಚುತ್ತದೆ. ಜೊತೆಗೆ ದೇಶದ ಜಿಡಿಪಿ ಕೂಡ ಹೆಚ್ಚುತ್ತದೆ ಎಂದವರು ವಿಶ್ಲೇಷಿಸಿದರು.ಸಹಕಾರಿ ಸಂಘಗಳು ಸ್ಥಳೀಯ ಆದ್ಯತೆ, ಜಾಗತಿಕ ದೃಷ್ಟಿಕೋನ (ಲೋಕಲ್ ಫೋಕಸ್, ಗ್ಲೋಬಲ್ ವಿಶನ್)ದಿಂದ ಕೆಲಸ ಮಾಡಬೇಕಾದ ಅಗತ್ಯವಿದೆ. ಇಂತಹ ದೃಷಿಕೋನ ಹೊಂದಿರುವ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಯುಪಿಐ ತಂತ್ರಜ್ಞಾನವನ್ನು ಬಳಸಿಕೊಂಡು, ದೇಶಕ್ಕೆ ಮಾದರಿಯಾಗಿದೆ. ಈ ಮೂಲಕ ಮಹಾಲಕ್ಷ್ಮೀ ಬ್ಯಾಂಕ್ ದೇಶದ ಯುಪಿಐ ಬಳಸುವ ಪ್ರಮುಖ ಬ್ಯಾಂಕ್‌ಗಳ ಸಾಲುಗಳಿಗೆ ಸೇರಿದೆ ಎಂದವರು ಶ್ಲಾಘಿಸಿದರು.ನೂತನ ಮಹಾಲಕ್ಷ್ಮೀ ಪವರ್ ಲೋನ್ ಮಂಜೂರಾತಿ ಪತ್ರಗಳನ್ನು ವಿತರಿಸಿದ ಮೀನುಗಾರಿಕಾ ಸಚಿವ ಮಾಂಕಳ ಎಸ್. ವೈದ್ಯ ಮಾತನಾಡಿ, ಮೀನುಗಾರರ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿರುವ ಮಹಾಲಕ್ಷ್ಮೀ ಬ್ಯಾಂಕಿನ ಶಾಖೆಗಳನ್ನು ಉತ್ತರ ಕನ್ನಡ ಜಿಲ್ಲೆ ಮತ್ತು ರಾಜ್ಯಾದ್ಯಂತ ಆರಂಭಿಸುವಂತೆ ಆಹ್ವಾನ ನೀಡಿದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕಿನ ಡಿಜಿಟಲ್ ಸೌಲಭ್ಯಗಳನ್ನು ಉದ್ಘಾಟಿಸಿ, ಅಪೆಕ್ಸ್ ಬ್ಯಾಂಕ್ ಕೂಡ ಹೊಂದಿರದಿರುವ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯವನ್ನು ಮಹಾಲಕ್ಷ್ಮೀ ಬ್ಯಾಂಕು ಹೊಂದಿದೆ ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಉದ್ಯಮಿಗಳಾದ ಡಾ.ಜಿ.ಶಂಕರ್, ರೋಹನ್ ಮೊಂತೆರೋ, ಆನಂದ್ ಪಿ. ಸುವರ್ಣ, ಪುರುಷೋತ್ತಮ್ ಶೆಟ್ಟಿ, ಆನಂದ್ ಪಿ. ಸುವರ್ಣ, ಮೋಹನ್ ಬೆಂಗ್ರೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರ ಸಂಘ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಊರ್ವ ಮಾರಿಯಮ್ಮ ದೇವಸ್ಥಾನದ ಟ್ರಸ್ಟಿ ಲಕ್ಷ್ಮಣ್ ಅಮೀನ್, ಮಹಾಲಕ್ಷ್ಮೀ ಬ್ಯಾಂಕಿನ ಉಪಾಧ್ಯಕ್ಷ ವಾಸುದೇವ್ ಸಾಲ್ಯಾನ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ ಶಾಸಕ, ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷ ಯಶ್ಪಾಲ್ ಸುವರ್ಣ ಸ್ವಾಗತಿಸಿದರು.---

ಸನ್ಮಾನ ಕಾರ್ಯಕ್ರಮನೂತನ ರಾಷ್ಟ್ರೀಯ ಸಹಕಾರಿ ನೀತಿ ಆಯೋಗದ ಅಧ್ಯಕ್ಷ ಸುರೇಶ್ ಪಿ.ಪ್ರಭು ಹಾಗೂ ಪತ್ನಿ ಉಮಾ ಪ್ರಭು, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮೀನುಗಾರ ಸಚಿವ ಮಾಂಕಳ ವೈದ್ಯ, ಮೀನುಗಾರ ಸಾಧಕ ಮಲ್ಪೆ ರಾಮಚಂದ್ರ ಕುಂದರ್ ಅವರನ್ನು ಸನ್ಮಾನಿಸಲಾಯಿತು.

Share this article