ಭೈರಪ್ಪ ಎಲ್ಲ ಪುಸ್ತಕ ಪ್ರಕಟಿಸಿದ್ದು ಸಾಹಿತ್ಯ ಭಂಡಾರ!

KannadaprabhaNewsNetwork |  
Published : Sep 25, 2025, 01:00 AM IST
ಮದಮದಮ | Kannada Prabha

ಸಾರಾಂಶ

ಭೈರಪ್ಪ ಮೊದಲ ಕಾದಂಬರಿ ಧರ್ಮಶ್ರೀಯಿಂದ ಹಿಡಿದು ಕೊನೆಯ ಕಾದಂಬರಿ ಉತ್ತರಕಾಂಡದ ವರೆಗೂ ಸಾಹಿತ್ಯ ಭಂಡಾರವೇ ಪ್ರಕಟಿಸಿದೆ.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿದೇಶ-ವಿದೇಶಗಳಲ್ಲಿ ಕನ್ನಡ ಸಾಹಿತ್ಯಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಸರಸ್ವತಿ ಸಮ್ಮಾನ, ನಾಡೋಜ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಎಸ್‌.ಎಲ್‌. ಭೈರಪ್ಪ ಅವರ ಪ್ರತಿ ಕಾದಂಬರಿ ಪ್ರಕಟಗೊಂಡಿದ್ದು ಹುಬ್ಬಳ್ಳಿಯ ಸಾಹಿತ್ಯ ಭಂಡಾರದಲ್ಲೇ!.

ಅವರ ಮೊದಲ ಕಾದಂಬರಿ ಧರ್ಮಶ್ರೀಯಿಂದ ಹಿಡಿದು ಕೊನೆಯ ಕಾದಂಬರಿ ಉತ್ತರಕಾಂಡದ ವರೆಗೂ ಸಾಹಿತ್ಯ ಭಂಡಾರವೇ ಪ್ರಕಟಿಸಿದೆ ಎಂಬುದು ಹೆಮ್ಮೆಯ ವಿಷಯ. ಹೀಗಾಗಿ ಹುಬ್ಬಳ್ಳಿಯೊಂದಿಗೆ ಭೈರಪ್ಪ ಅವರದು ಅತ್ಯಂತ ಅವಿನಾಭಾವ ಸಂಬಂಧ. ಹುಬ್ಬಳ್ಳಿಗೂ ಭೈರಪ್ಪಗೂ ಬಿಡಿಸಲಾರದ ನಂಟು.ಯಾವಾಗಿಂದ ಶುರು:

ಅದು 1959ರ ಕಾಲ. ಆಗಷ್ಟೇ ಮೈಸೂರು ವಿವಿಯಲ್ಲಿ ಎಂಎ ಸೈಕಾಲಜಿ ಮುಗಿಸಿ ಇಲ್ಲಿನ ಕಾಡಸಿದ್ದೇಶ್ವರ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿದ್ದ ಎಸ್‌.ಎಲ್‌. ಭೈರಪ್ಪ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದ್ದರು. ಆ ವೇಳೆ ಬರೆದಿದ್ದು ಧರ್ಮಶ್ರೀ.ಇನ್ನು ಕಾದಂಬರಿಯನ್ನೇನೋ ಬರೆದರು. ಆದರೆ, ಅದನ್ನು ಮುದ್ರಣ ಮಾಡಿಸುವುದು ಹೇಗೆ ಎಂಬುದು ತಿಳಿಯದೇ ಹಸ್ತಪ್ರತಿ ಹಿಡಿದು ಹಲವೆಡೆ ಅಲೆದಿರುವುದುಂಟು. ಆಗ ಇವರಿಗೆ ಸಂಬಳ ಕಡಿಮೆ ಇದ್ದ ಕಾರಣ ಉಪನ್ಯಾಸಕ ವೃತ್ತಿಯೊಂದಿಗೆ ಬ್ಯಾಂಕ್‌ ಮ್ಯಾನೇಜರ್‌ರೊಬ್ಬರ ಮನೆಯ ಮಕ್ಕಳಿಗೆ ಮನೆ ಪಾಠ ಹೇಳಲು ಹೋಗುತ್ತಿದ್ದರು. ತಾವು ಬರೆದ ಕಾದಂಬರಿ ವಿಷಯವನ್ನು ಬ್ಯಾಂಕ್‌ ಮ್ಯಾನೇಜರ್‌ ಗಮನಕ್ಕೆ ತಂದಿದ್ದರು. ಅವರಿಗೆ ಸಾಹಿತ್ಯ ಭಂಡಾರದ ಮಾಲೀಕ ಗೋವಿಂದರಾವ್‌ ಅವರು ಪರಿಚಯವಿತ್ತು. ಅವರು ಗೋವಿಂದರಾವ್‌ ಅವರನ್ನು ಕರೆದು ಇದೊಂದು ಕಾದಂಬರಿ ಇದೆ ಪ್ರಕಟಿಸುವಂತೆ ಕೇಳಿಕೊಂಡರಂತೆ. ಓದಿದ ಮೇಲೆಯೇ ಪ್ರಕಟಿಸಲು ಸಾಧ್ಯವೋ ಇಲ್ಲವೋ ಎಂಬುದನ್ನು ತಿಳಿಸುತ್ತೇನೆ ಎಂದಿದ್ದರಂತೆ ಗೋವಿಂದರಾವ್‌. ಬಳಿಕ ಒಂದೇ ದಿನದಲ್ಲೇ ಆ ಹಸ್ತಪ್ರತಿ ಓದಿ ನೇರವಾಗಿ ಭೈರಪ್ಪ ಅವರು ಬಾಡಿಗೆ ಇದ್ದ ಮನೆಗೆ ತೆರಳಿ, "ನಿಮ್ಮ ಕಾದಂಬರಿ ಚೆನ್ನಾಗಿದೆ ಪ್ರಕಟಿಸುತ್ತೇನೆ.... " ಎಂದ್ಹೆಳಿದ್ದರಂತೆ. ಅದರಂತೆ ಕಾದಂಬರಿಯೂ ಪ್ರಕಟವಾಯಿತು. ಬಿಸಿ ಬಿಸಿ ದೋಸೆಯಂತೆ ಖರ್ಚು ಆಯ್ತು.

ಆಗಿನಿಂದ ನಂಟು:ಆಗಿನಿಂದ ಶುರುವಾದ ಹುಬ್ಬಳ್ಳಿ ಹಾಗೂ ಸಾಹಿತ್ಯ ಭಂಡಾರದ ನಂಟು. ಭೈರಪ್ಪ ಅವರ ಜೀವಿತಾವಧಿ ವರೆಗೂ ಮುಂದುವರಿಯಿತು. ಭೈರಪ್ಪ ಅವರು ಮುಂದೆ ಎರಡುವರೆ ವರ್ಷ ಇಲ್ಲಿ ಕೆಲಸ ಮಾಡಿ ಬರೋಡಾಗೆ ತೆರಳಿದರು. ಆದರೆ ಯಾವುದೇ ಪುಸ್ತಕದ ಮುದ್ರಣದ ಜವಾಬ್ದಾರಿ ಮಾತ್ರ ಸಾಹಿತ್ಯ ಭಂಡಾರಕ್ಕೆ ಕೊಡುತ್ತಿದ್ದರು. ಧರ್ಮಶ್ರೀ, ಆವರಣ, ಮಂದ್ರ, ವಂಶವೃಕ್ಷ, ಪರ್ವ, ಅವರ ಆತ್ಮಕಥನದ ಭಿತ್ತಿ ಸೇರಿದಂತೆ ಒಟ್ಟು 35 ಪುಸ್ತಕಗಳು ಪ್ರಕಟಣಗೊಂಡಿವೆ. ಎಲ್ಲವನ್ನೂ ಸಾಹಿತ್ಯ ಭಂಡಾರವೇ ಪ್ರಕಟಿಸಿದೆ.

ಆವರಣ 60ಕ್ಕೂ ಹೆಚ್ಚು ಮುದ್ರಣ ಕಂಡರೆ, ಉಳಿದ ಬಹುತೇಕ ಎಲ್ಲ ಪುಸ್ತಕಗಳು ಕನಿಷ್ಠವೆಂದರೂ 20 ಮುದ್ರಣ ಕಂಡಿರುವುದು ವಿಶೇಷ. ಇನ್ನು ಗೃಹಭಂಗ ಹಾಗೂ ದಾಟು ಕಾದಂಬರಿ ಭಾರತದ 14 ಭಾಷೆಗಳಲ್ಲಿ ತರ್ಜುಮೆಗೊಂಡಂತಹ ಕಾದಂಬರಿಗಳು. ಪರ್ವ ತೆಲುಗು, ಮರಾಠಿ, ಬಂಗಾಳಿ, ಹಿಂದಿ, ಪಂಜಾಬಿ, ಆಂಗ್ಲ ಮಾತ್ರವಲ್ಲದೆ ರಷ್ಯಾ, ಚೀನೀ ಭಾಷೆಯಲ್ಲೂ ತರ್ಜುಮೆಗೊಂಡಿರುವುದು ಮತ್ತೊಂದು ವಿಶೇಷ.ಮಂದ್ರ, ಆವರಣ ಸೇರಿದಂತೆ ಹಲವು ಕಾದಂಬರಿಗಳ ಸಂವಾದ ಕಾರ್ಯಕ್ರಮಗಳು ಹುಬ್ಬಳ್ಳಿಯಲ್ಲಿ ಬರೋಬ್ಬರಿ ಐದಾರು ಗಂಟೆ ಕಾಲ ನಡೆದಿರುವುದುಂಟು. ಒಂದಿಷ್ಟು ಬೇಸರಿಸಿಕೊಳ್ಳದೇ ಸಂವಾದದಲ್ಲೇ ಸಾಹಿತ್ಯಾಭಿಮಾನಿಗಳು ಪಾಲ್ಗೊಳ್ಳುತ್ತಿದ್ದರು.

ಒಬ್ಬ ಪ್ರಕಾಶಕರು ಹಾಗೂ ಲೇಖಕರ ನಡುವಿನ ಸಂಬಂಧ ಇಷ್ಟೊಂದು ಸುದೀರ್ಘ ವರ್ಷವಿರುವುದು (65 ವರ್ಷ) ಬೇರೆಲ್ಲೂ ಕಾಣೆ ಎಂದು ನುಡಿಯುತ್ತಾರೆ ಸಾಹಿತ್ಯ ಭಂಡಾರದ ಎಂ.ಎ. ಸುಬ್ರಹ್ಮಣ್ಯ. ತಮ್ಮ ಆತ್ಮಕಥನದಲ್ಲೂ ಭೈರಪ್ಪ ಅವರು ಹುಬ್ಬಳ್ಳಿ ನಂಟಿನ ಬಗ್ಗೆ ಪ್ರಸ್ತಾಪಿಸಿರುವುದು ಹುಬ್ಬಳ್ಳಿ ಬಗ್ಗೆ ಅವರಿಗಿದ್ದ ಪ್ರೀತಿಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.ರೊಟ್ಟಿ-ಪಲ್ಯ ಬಲುಪ್ರೀತಿ..!ಬರೀ ಸಾಹಿತ್ಯ ಭಂಡಾರದೊಂದಿಗೆ ಪುಸ್ತಕ ಪ್ರಕಟಣೆಗಷ್ಟೇ ಸಂಬಂಧ ಸೀಮಿತವಾಗಿರಲಿಲ್ಲ. ಬದಲಿಗೆ ಕುಟುಂಬದ ಸದಸ್ಯರಂತೆ ಭೈರಪ್ಪ ಅವರು ಇದ್ದರು. ರೊಟ್ಟಿ ಪಲ್ಯ ಎಂದರೆ ಬಲು ಪ್ರೀತಿ. ಹುಬ್ಬಳ್ಳಿಗೆ ಕನಿಷ್ಠ 50-60 ಸಲ ಬಂದು ಹೋಗಿರುವುದುಂಟು. ಪ್ರತಿಸಲವೂ ಸುಬ್ರಹ್ಮಣ್ಯ ಅವರ ನಿವಾಸದಲ್ಲೇ ಭೈರಪ್ಪ ಅವರ ವಾಸ್ತವ್ಯ. "ಏಯ್‌ ಸುಬ್ಬು ಊಟಕ್ಕೆ ಬಾಕ್ರಿನೇ (ರೊಟ್ಟಿ) ಮಾಡಿಸು.. " ಎಂದ್ಹೇಳಿ ಮಾಡಿಸಿಕೊಂಡು ಪ್ರೀತಿಯಿಂದಲೇ ತಿನ್ನುತ್ತಿದ್ದರು. ಭೈರಪ್ಪ ಅವರಿಗೆ ರೊಟ್ಟಿ, ಸೊಪ್ಪಿನ ಪಲ್ಯ ಎಂದರೆ ಬಲು ಪ್ರೀತಿ. ಉತ್ತರ ಕರ್ನಾಟಕದ ಯಾವುದೇ ಊರಿಗೆ ಹೊರಡಬೇಕೆಂದರೂ ಹುಬ್ಬಳ್ಳಿಗೆ ಬರುತ್ತಿದ್ದರು. ಇಲ್ಲಿಂದಲೇ ಸುಬ್ರಹ್ಮಣ್ಯ ಅವರನ್ನು ಕರೆದುಕೊಂಡು ಹೋಗುತ್ತಿದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ