ಮೈಲಾರ ಜಾತ್ರೆಗೆ ಸಕಲ ಸಿದ್ಧತೆ

KannadaprabhaNewsNetwork | Published : Feb 24, 2024 2:32 AM

ಸಾರಾಂಶ

ಫೆ. 16ರಿಂದ ಆರಂಭವಾಗಿರುವ ಮೈಲಾರಲಿಂಗೇಶ್ವರ ಜಾತ್ರೆಯು ಫೆ. 27ರ ವರೆಗೂ ನಡೆಯಲಿದ್ದು, ನಾಡಿನ ದೈವವಾಣಿ ಎಂದು ನಂಬಲಾಗುವ ಕಾರ್ಣಿಕ ನುಡಿ ಫೆ. 26ರಂದು ಮೈಲಾರದ ಡೆಂಕಣ ಮರಡಿಯಲ್ಲಿ ಜರುಗಲಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ನಾಡಿನ ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಫೆ. 16ರಿಂದ ಆರಂಭವಾಗಿರುವ ಮೈಲಾರಲಿಂಗೇಶ್ವರ ಜಾತ್ರೆಯು ಫೆ. 27ರ ವರೆಗೂ ನಡೆಯಲಿದ್ದು, ನಾಡಿನ ದೈವವಾಣಿ ಎಂದು ನಂಬಲಾಗುವ ಕಾರ್ಣಿಕ ನುಡಿ ಫೆ. 26ರಂದು ಮೈಲಾರದ ಡೆಂಕಣ ಮರಡಿಯಲ್ಲಿ ಜರುಗಲಿದೆ.

ಈ ಬಾರಿಯ ಮೈಲಾರಲಿಂಗೇಶ್ವರ ಜಾತ್ರೆಯು ಎರಡು ವಿಶೇಷಗಳಿಗೆ ಸಾಕ್ಷಿಯಾಗಿದ್ದು, ಹಂಪಿ ಉತ್ಸವದ ಮಾದರಿಯಲ್ಲಿ ಮೈಲಾರ ಸುಕ್ಷೇತ್ರದ ತುಂಬೆಲ್ಲ ಹತ್ತಾರು ಬಗೆಯ ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಬಾರಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ಆಲಿಸಲು ಲಕ್ಷಾಂತರ ಭಕ್ತರು ಡೆಂಕಣ ಮರಡಿಗೆ ಬರುತ್ತಾರೆ. ಭಕ್ತರಿಗೆ ಕಾರ್ಣಿಕ ನುಡಿಯನ್ನು ಆಲಿಸಲು ದೇವಸ್ಥಾನದ ವತಿಯಿಂದ ಧ್ವನಿವರ್ಧಕಗಳ ಮೂಲಕ ಮರುಪ್ರಸಾರ ಮಾಡಲಾಗುತ್ತಿತ್ತು. ಈ ಬಾರಿ ಡೆಂಕಣ ಮರಡಿ, ದೇವಸ್ಥಾನ ಸೇರಿದಂತೆ ಪರಿಷೆ ಸೇರುವ ಎಲ್ಲ ಕಡೆಗೂ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಇದರಿಂದ ಮೈಲಾರದ ಎಲ್ಲ ಮೂಲೆಕಟ್ಟಿನ ಪ್ರದೇಶದಲ್ಲಿರುವ ಭಕ್ತರಿಗೆ ಕಾರ್ಣಿಕ ನುಡಿಯನ್ನು ಇದ್ದ ಸ್ಥಳದಲ್ಲೇ ಸ್ಪಷ್ಟವಾಗಿ ಆಲಿಸುವ ವ್ಯವಸ್ಥೆ ಮಾಡಲಾಗಿದೆ.

ಮೈಲಾರಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್‌ ಸೇರಿದಂತೆ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ. ನೆಲ ಸಮತಟ್ಟು, ಸ್ವಚ್ಛತೆ, ಧೂಳು ಮುಕ್ತ ರಸ್ತೆ, ವಿವಿಧ ಶಿಬಾರಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲಾಗಿದೆ.

ಜಾತ್ರೆಯ ಎಲ್ಲ ಕಡೆಗೂ ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಲು 140 ವಿದ್ಯುತ್‌ ಕಂಬಗಳನ್ನು ಅಳವಡಿಸಿದ್ದು, 300 ಕಿಲೋವ್ಯಾಟ್‌ ಸಾಮರ್ಥ್ಯವುಳ್ಳ 14 ವಿದ್ಯುತ್‌ ಪರಿವರ್ತಕಗಳನ್ನು ಹಾಕಲಾಗಿದೆ.

ಭಕ್ತರಿಗೆ ಅನುಕೂಲವಾಗುವಂತೆ ನಿರಂತರ 24 ಗಂಟೆ ವಿದ್ಯುತ್‌ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೈಲಾರಲಿಂಗೇಶ್ವರ, ಗಂಗಿಮಾಳಮ್ಮ, ಹೆಗ್ಗಪ್ಪನ ದೇವಸ್ಥಾನ, ಡೆಂಕಣ ಮರಡಿ, ತುಂಗಭದ್ರಾ ನದಿ ತೀರ ಸೇರಿದಂತೆ ಎಲ್ಲ ಕಡೆಗೂ ವಿದ್ಯುತ್‌ ವ್ಯವಸ್ಥೆ ಮಾಡಲಾಗಿದೆ.

ಎಲ್ಲ ಕಡೆಗೂ ಬ್ಯಾರಿಕೇಡ್‌ ವ್ಯವಸ್ಥೆ ಇದೆ. ಅಲ್ಲದೇ ಡೆಂಕಣ ಮರಡಿಯಲ್ಲಿ ಕಾರ್ಣಿಕ ನುಡಿ ಆಲಿಸಲು ಬರುವ ಭಕ್ತರನ್ನು ನಿಯಂತ್ರಿಸಲು ಸುತ್ತಲೂ ಬ್ಯಾರಿಕೇಡ್‌ ಹಾಕಲಾಗಿದೆ. ದೇವಸ್ಥಾನದ ಆವರಣ ಹಾಗೂ ಡೆಂಕಣ ಮರಡಿ ಮತ್ತು ಅವ್ವನ ಮರಡಿಯ ಹಾಗೂ ಅಪ್ಪನ ಮರಡಿಯಲ್ಲಿ ದೀವಟಿಕೆ ಸೇವೆ ಮಾಡುವ ಭಕ್ತರಿಗೆ ಹೊಸದಾಗಿ ಬ್ಯಾರಿಕೇಡ್‌ ಮತ್ತು ಚಪ್ಪರದ ವ್ಯವಸ್ಥೆ ಮಾಡಲಾಗಿದೆ. ಡೆಂಕಣಮರಡಿ ಸೇರಿದಂತೆ ವಿವಿಧ 5 ಕಡೆಗಳಲ್ಲಿ ವಾಚ್‌ ಟವರ್‌ ಹಾಕಲಾಗಿದೆ.

ಜಾತ್ರೆಯ ಪರಿಷೆ ಸೇರುವ ಜಾಗ ಮತ್ತು ಬಸ್‌ ನಿಲ್ದಾಣ, ಡೆಂಕಣ ಮರಡಿಯಲ್ಲಿ ಕುಡಿಯುವ ನೀರು ಪೂರೈಕೆಗೆ ನಳ ವ್ಯವಸ್ಥೆ ಮಾಡಲಾಗಿದೆ. ವಿವಿಧ 5 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, 11 ಕಡೆ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿದೆ.

ಭಕ್ತರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ 5 ಕಡೆಗಳಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಿ, 50 ವೈದ್ಯರು, 300- 400 ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಜಾತ್ರೆಯಲ್ಲಿ 17 ಕಡೆಗಳಲ್ಲಿ 64 ಐಪಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನದಿ ಕಣ್ಗಾವಲಿಗೆ ಹಂಪಿಯಿಂದ ಮುಂಜಾಗ್ರತಾ ಕ್ರಮವಾಗಿ 2 ಬೋಟ್‌ ಹಾಗೂ 8 ನುರಿತ ಈಜುಗಾರರನ್ನು ನಿಯೋಜನೆ ಮಾಡಲಾಗಿದೆ.

ಮೈಲಾರಕ್ಕೆ ಬರುವ ಭಕ್ತರಿಗೆ ಎಲ್ಲ ಕಡೆಗಳಿಂದ ಬಸ್ಸಿನ ಸೌಲಭ್ಯ ಕಲ್ಪಿಸಲಾಗಿದೆ. ಹೊಳಲು, ಗುತ್ತಲ. ಕುರುವತ್ತಿ ಕ್ರಾಸ್‌ಗಳಲ್ಲಿ ಮೂರು ಕಡೆ ತಾತ್ಕಾಲಿಕ ಬಸ್‌ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ.ಮುಂಜಾಗ್ರತಾ ಕ್ರಮ: ಮೈಲಾರ ಜಾತ್ರೆಗೆ 10 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ. ಆದ್ದರಿಂದ ಬರುವ ಭಕ್ತರಿಗೆ ನೀರಿನ ತೊಂದರೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಹಾಗೂ ಸರ್ಕಾರ ಭದ್ರಾ ಡ್ಯಾಂನಿಂದ ಸಕಾಲದಲ್ಲಿ ನೀರು ಬಿಡುಗಡೆ ಮಾಡಿದೆ. ಬತ್ತಿದ್ದ ನದಿಯಲ್ಲಿ ನೀರು ಹರಿಯುತ್ತಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಎಲ್ಲ ಕ್ರಮಗಳನ್ನು ವಹಿಸಲಾಗಿದೆ ಎಂದು ತಹಸೀಲ್ದಾರ್‌ ವಿ. ಕಾರ್ತಿಕ್‌ ತಿಳಿಸಿದರು.ಧ್ವನಿವರ್ಧಕ ವ್ಯವಸ್ಥೆ: ಮೈಲಾರಲಿಂಗೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಈ ಬಾರಿ ಮೈಲಾರ ಹಾಗೂ ಜಾತ್ರೆ ಪರಿಷೆ ಸೇರುವ ಎಲ್ಲ ಕಡೆಗೂ ಹಂಪಿ ಮಾದರಿಯಲ್ಲಿ ವಿದ್ಯುತ್‌ ದೀಪದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಗೆ ಬಂದ ಭಕ್ತರಿಗೆ ಧ್ವನಿವರ್ಧಕಗಳ ಮೂಲಕ ಆಲಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ತಿಳಿಸಿದರು.

Share this article