ಬಿ.ಎಸ್.ಸುನೀಲ್
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿಪ್ರತಿ ವರ್ಷದಂತೆ ಕಾರ್ಕಹಳ್ಳಿಯಲ್ಲಿ ಪುರಾಣ ಪ್ರಸಿದ್ದ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ.
ದೇವಾಲಯವು ಮುಜಾರಾಯಿ ಇಲಾಖೆಗೆ ವ್ಯಾಪ್ತಿಗೆ ಒಳಪಟ್ಟಿದ್ದು ಪಟ್ಟಲದಮ್ಮ ದೇವಿ ಕೊಂಡೋತ್ಸವದೊಂದಿಗೆ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಹಬ್ಬಕ್ಕಾಗಿ ಗ್ರಾಮವು ನವ ವಧುವಂತೆ ಸಿಂಗಾರಗೊಳ್ಳುತ್ತಿದೆ. ಕಾಮಾನ ಹುಣ್ಣಿಮೆ ದಿನಗಳಲ್ಲಿ ಹಬ್ಬ ಆಚರಣೆ ನಡೆಯಲಿದೆ.ತಹಸೀಲ್ದಾರ್ ಸ್ಮೀತಾ ಅಧ್ಯಕ್ಷತೆಯಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಗ್ರಾಮಸ್ಥರು ತಯಾರಿ ನಡೆಸಿದ್ದಾರೆ. ಮಾ.11 ರಂದು ಸಂಜೆ ಬಂಡಿ ಉತ್ಸವ, ರಾತ್ರಿ ಅಗ್ನಿಕೊಂಡ, ಕರಗ ಬಾಯಿ ಬೀಗ ಹಾಗೂ ಚಿಕ್ಕರಸಿಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿ, ತೊರೆ ಬೊಮ್ಮನಹಳ್ಳಿ ಶ್ರೀ ಪಟ್ಟಲದಮ್ಮ ಮತ್ತು ಕಾರ್ಕಹಳ್ಳಿ ಬಸವೇಶ್ವರ ಸ್ವಾಮಿ ದೇವರುಗಳ ಉತ್ಸವ ಜರುಗಲಿದೆ.
ಮಾ.11ರಂದು ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸುವರು. ಮಾ.12 ರಂದು ರಥೋತ್ಸವವು ಸಂಜೆ ಜರುಗಲಿದೆ. ಮಾ.13 ರಂದು ದೇವೇಗೌಡನದೊಡ್ಡಿ ಗ್ರಾಮದಲ್ಲಿ ಕಾರ್ಕಹಳ್ಳಿ ಶ್ರೀ ಬಸವೇಶ್ವರ ಉತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುವುದು. ಮಾ.14ರಂದು ಶ್ರೀಮುತ್ತುರಾಯ ಸ್ವಾಮಿ ಸೇವೆ ಜರುಗಲಿದೆ.ಹಬ್ಬದ ಹಿನ್ನೆಲೆ:
ಮೈಸೂರು ಜಿಲ್ಲೆಯ ಕಾರುಗಹಳ್ಳಿ ಮೇರವೇಗೌಡ, ಹಂಚಿಗಯ್ಯ ಮತ್ತು ನಂಜಯ್ಯ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದರು. ಅದೇ ಗ್ರಾಮದ ಕ್ಷೌರಿಕ ಸಮುದಾಯದ ಯುವಕರು ನಮಗೆ ವಿವಾಹ ಮಾಡಿಕೊಡುವಂತೆ ದುಂಬಾಲು ಬಿದ್ದರು. ಇದರಿಂದ ಮೇರವೇಗೌಡ ಕುಟುಂಬ ನಮ್ಮ ಹೆಣ್ಣು ಮಕ್ಕಳಿಗೆ ಏನಾದರು ಅನಾಹುತ ಸಂಭವಿಸಬಹುದು ಎಂದು ಅರಿತು ರಾತ್ರೋರಾತ್ರಿ ಮನೆ ಬಿಟ್ಟು ಕಾಡು ಮೇಡು ಅಲೆದು ಭಾರತೀನಗರ ಸಮೀಪ ಮಠದಲ್ಲಿ ಆಶ್ರಯ ಪಡೆದರು.ಕಾಲ ಕ್ರಮೇಣ ಅಲ್ಲೇ ಮನೆ ಕಟ್ಟಿಕೊಂಡು ಜೀವನೊಪಯಕ್ಕಾಗಿ ಎಣ್ಣೆ ಹರಳಿನ ವ್ಯಾಪಾರ ನಡೆಸುತ್ತಾ ಜೀವನ ನಡೆಸುತಿದ್ದರು. ಈ ವೇಳೆ ಒಂದು ಹುಣ್ಣಿಮೆ ದಿನ ನಂಜಯ್ಯ ಮತ್ತು ಮಂಚಿಗಯ್ಯ ವ್ಯಾಪರ ಮುಗಿಸಿ ಹೋಗುತ್ತಿದ್ದಾಗ ಕತ್ತಲೆ ಆವರಿಸಿ ಹಲಗೂರಿನ ಕೆಮ್ಮಾಳು ಗ್ರಾಮದ ಕೆಂಡಗಣ್ಣು ಬಸವೇಶ್ವರ ದೇವಾಲಯದಲ್ಲಿ ತಂಗಿದರು. ಮಧ್ಯರಾತ್ರಿ ನಾನು ಬರಲೆ ಎಂದು ಒಂದು ದ್ವನಿ ಕೇಳಿಸಿತು. ಇದರಿಂದ ಹೆದರಿದ ಹಂಚಿಗಯ್ಯ ಗ್ರಾಮಕ್ಕೆ ತೆರಳಿ ನಡೆದ ವಿಚಾರ ಗುರು ಮಠದ ಗುರುಗಳಿಗೆ ತಿಳಿಸಿದನು.
ಗುರುಗಳು ನೀನು ಮತ್ತೆ ಅಲ್ಲಿಗೆ ಹೋಗಿ ಮಲಗು ಅದೇ ಶಬ್ದವಾದರೆ ಹರಳಿನ ಮೂಟೆ ಬಿಚ್ಚಿ ದೇವರ ಗದ್ದುಗೆ ಮುಂದಿಡು ಬರುವುದಾದರೆ ಈ ಚೀಲದಲ್ಲಿ ಬಂದು ಸೇರು ಎನ್ನುವಂತೆ ಸೂಚಿಸಿದರು. ಅದರಂತೆ ಮರು ದಿನ ಮಾಡಿದಾಗ ದೇವರು ಹರಳಿನ ಚೀಲದಲ್ಲಿ ಬಂದು ಸೇರಿತು. ಇದರಿಂದ ಸಂತೋಷಗೊಂಡು ಬಸಪ್ಪನನ್ನು ಒತ್ತುಕೊಂಡು ಬಂದು ಗುರುಗಳಿಗೆ ವಿಷಯ ತಿಳಿಸಿದನು.ಗುರುಗಳು ಪೂಜೆ ಪುನಸ್ಕಾರ ನಡೆಸಿ ಬಸಪ್ಪನನ್ನು ತಮ್ಮ ದಿವ್ಯಾ ದೃಷ್ಟಿಯಿಂದ ನೇಮಕ ಮಾಡಿದರು. ಕಾಲಾ ಕ್ರಮೇಣ ದೇವಾಲಯ ಪ್ರಸಿದ್ದಿಯಾಗಿ ಬಸಪ್ಪ ಕಳ್ಳ ಕಾಕರಿಗೆ ಸಿಂಹ ಸ್ವಪ್ನವಾಗಿ ಕಾಡಿತು. ಆರಂಭದಲ್ಲಿ ಕಾರುಗಹಳ್ಳಿ ಎಂದು ಕರೆಯುತ್ತಿದ್ದು ನಂತರ ಕಾರುಕಹಳ್ಳಿಯಾಗಿ ಜನಜನಿತವಾಯಿತು. ದೇವೇಗೌಡನದೊಡ್ಡಿಯು ಸಹ ಕಾರ್ಕಹಳ್ಳಿಯಿಂದ ಒಲಸೆ ಹೋದವರು ಎಂಬುವುದು ಪ್ರತೀತಿಯಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಪುರಾಣ ಪ್ರಸಿದ್ಧ ಕಾರಕಹಳ್ಳಿ ಶ್ರೀ ಬಸವೇಶ್ವರಸ್ವಾಮಿ ದೇವಾಲಯ ತನ್ನದೆ ಖ್ಯಾತಿ ಪಡೆದಿದೆ. ಶ್ರೀ ಕ್ಷೇತ್ರದ ಬಸವಪ್ಪ ಸಾಕಷ್ಟು ಮಹಿಮೆ ಹೊಂದಿದೆ. ಲಕ್ಷಾಂತರ ಭಕ್ತರ ಕೋರಿಕೆ ಈಡೇರಿಸಿದ್ದು ವರ್ಷಕ್ಕೊಮ್ಮೆ ನಡೆಯುವ ಬಸವೇಶ್ವರ ಜಾತ್ರೆಗೆ ಸಾವಿರಾರು ಆಗಮಿಸಲಿದ್ದಾರೆ. ಇದಕ್ಕೆ ತಾಲೂಕು ಆಡಳಿತ ಉತ್ತಮ ಸೌಕರ್ಯ ಕಲ್ಪಿಸಿದೆ.-ಸಿದ್ದೇಗೌಡ, ಚಾಂಶುಗರ್ ನೌಕರ, ಕಾರಕಹಳ್ಳಿ
ಕಾರಕಹಳ್ಳಿ ಬಸಪ್ಪ ಎಂದರೇ ರಾಜ್ಯದಲ್ಲಿ ಪ್ರಸಿದ್ಧಿ ಪಡೆದ ದೇವರು. ಶ್ರೀಕ್ಷೇತ್ರದ ಬಸವೇಶ್ವರ ಸ್ವಾಮಿ ದೇವರ ಕುಲದವರು ನೂರಾರು ಗ್ರಾಮಗಳಲ್ಲಿದ್ದಾರೆ. ತನ್ನ ಪವಾಡಗಳಿಂದ ಬಸವಪ್ಪ ಪ್ರಖ್ಯಾತಿ ಪಡೆದಿದೆ. ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.- ಸಚಿನ್, ಕಾರ್ಕಹಳ್ಳಿ