ಎಲ್ಲ ಸಮಸ್ಯೆಗಳಿಗೆ ಬಸವ ತತ್ವದಲ್ಲಿ ಪರಿಹಾರವಿದೆ: ಎಸ್.ಎಸ್. ಪಾಟೀಲ

KannadaprabhaNewsNetwork | Updated : Aug 19 2024, 01:52 AM IST

ಸಾರಾಂಶ

ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಕಾಯಕ ಜೀವಿಗಳಿಂದ ವಚನ ಸಾಹಿತ್ಯವನ್ನು ಸಮಾಜಕ್ಕೆ ನೀಡಿದ ಬಸವಣ್ಣನವರು ಎಂದೆಂದಿಗೂ ಮಾದರಿ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.

ಧಾರವಾಡ: ಎಲ್ಲ ಕ್ಷೇತ್ರ‍್ರಗಳು ಗೊಂದಲ ಮೂಡಿದ ಇಂದಿನ ಕಾಲಮಾನದಲ್ಲಿ ಶರಣರ ವಚನಗಳಲ್ಲಿ ಪರಿಹಾರವಿದೆ. ಆಕರ್ಷಕವಾಗಿ ಸುಳ್ಳುಗಳನ್ನು ಹೇಳುತ್ತ ಜನರನ್ನು ದಾರಿ ತಪ್ಪಿಸುವವರು ಹೆಚ್ಚಾಗುತ್ತಿದ್ದಾರೆ. ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಕಾಯಕ ಜೀವಿಗಳಿಂದ ವಚನ ಸಾಹಿತ್ಯವನ್ನು ಸಮಾಜಕ್ಕೆ ನೀಡಿದ ಬಸವಣ್ಣನವರು ಎಂದೆಂದಿಗೂ ಮಾದರಿ. ಇಂದಿನ ಭ್ರಷ್ಟ ವ್ಯವಸ್ಥೆಗೆ ವಚನಗಳು ಔಷಧಿಯಾಗಿವೆ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.

ಧಾರವಾಡದ ಗಣಕರಂಗ ಸಂಸ್ಥೆಯು ಭಾನುವಾರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಲೇಖನ ಸ್ಪರ್ಧೆಯ ಆಯ್ದ ಲೇಖನಗಳನ್ನೊಳಗೊಂಡ “ಬಸವಣ್ಣ; ಕರುನಾಡಿನ ಸಾಂಸ್ಕೃತಿಕ ನಾಯಕ” ಕೃತಿ ಲೋಕಾರ್ಪಣೆ ಅಧ್ಯಕ್ಷತೆ ವಹಿಸಿದ್ದ ಅವರು, ಇಡೀ ಜಗತ್ತು ಬಸವಣ್ಣನವರ ವಚನಗಳನ್ನು ಪರಾಮರ್ಶಿಸಿಕೊಂಡು, ಉತ್ತಮ ಅಂಶಗಳನ್ನು ಅನುವಾದಿಸಿಕೊಂಡು ತಮ್ಮೊಳಗೆ ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮ್ಮವರು ಅವುಗಳ ಮಹತ್ವ ಅರಿತುಕೊಳ್ಳಲು ತಯಾರಿಲ್ಲ ಎಂದು ವಿಷಾದಿಸಿದರು.

ಇದೇ ಸಂದರ್ಭದಲ್ಲಿ ಸಿದ್ಧರಾಮ ಹಿಪ್ಪರಗಿ ಸಂಪಾದಿತ “ಬಸವಣ್ಣ ಕರುನಾಡಿನ ಸಾಂಸ್ಕೃತಿಕ ನಾಯಕ” ಕೃತಿಯು ಲೋಕಾರ್ಪಣೆಗೊಂಡಿತು. ಕೃತಿಯ ಕುರಿತು ಹಿರಿಯ ಸಾಹಿತಿ ಡಾ. ಬಸು ಬೇವಿನಗಿಡದ ಮಾತನಾಡಿ, ನಾಡಿನ ವಿವಿಧ ಮೂಲದ ಸುಮಾರು ಎಂಬತ್ತು ಲೇಖಕರ ವೈಚಾರಿಕ ಲೇಖನಗಳ ಈ ಕೃತಿಯು ಇಂದಿನ ಕಾಲದ ಓದಿನ ಅಗತ್ಯವಾಗಿದೆ. ಈ ಕೃತಿಯು ಸಂಪಾದಿತ ಕೃತಿಯಂತೆ ಭಾಸವಾಗದೆ ಹಲವರು ಅನುಭವ ಮಂಟಪದಲ್ಲಿ ಕುಳಿತು ಅಂದಿನ ಬಸವಣ್ಣನವರನ್ನು ಇಂದಿನ ಕಾಲದಲ್ಲಿ ಆಧುನಿಕತೆಯೊಂದಿಗೆ ಚರ್ಚಿಸುವಂತಿದೆ ಎಂದು ಪರಿಚಯಿಸಿದರು. ಪತ್ರಕರ್ತ ಡಾ. ಬಸವರಾಜ ಹೊಂಗಲ ಮಾತನಾಡಿದರು,

ಬಸವ ಚಿಂತಕಿ ಡಾ. ಪುಷ್ಪಾವತಿ ಶಲವಡಿಮಠ, ಸಾಹಿತಿ ಶ್ರೀಧರ ಗಸ್ತಿ, ಡಾ. ವಿಜಯಕುಮಾರ ಕಮ್ಮಾರ ಅನುಭಾವದ ವಿಚಾರಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಬಸವ ಜಯಂತಿ ಸ್ಪರ್ಧೆ, ಪ್ರಕರಣಗಳು ಕಥಾಸ್ಪರ್ಧೆ, ಬುದ್ಧ ಭಾರತ ಕಿರು ನಾಟಕ ಸ್ಪರ್ಧೆ ವಿಜೇತರಿಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು. ಆರಂಭದಲ್ಲಿ ಅನುರಾಗ ಸಾಂಸ್ಕೃತಿಕ ಕಲಾ ಬಳಗದ ಡಾ. ಅನಿಲ ಮೇತ್ರಿ ಮತ್ತು ಸಂಗಡಿಗರು ವಚನ ಗಾಯನ ನೆರವೇರಿಸಿದರು. ವಚನೋತ್ಸವ ಬಳಗದ ಶಿವಾನಂದ ನಾಗೂರ ನಿರೂಪಿಸಿದರು. ರವಿ ಚಲವಾದಿ ವಂದಿಸಿದರು. ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Share this article