ಕನ್ನಡಪ್ರಭ ವಾರ್ತೆ ದಾವಣಗೆರೆ
ಸಂವಿಧಾನದ ಬಗ್ಗೆ ಪ್ರತಿಯೊಬ್ಬ ನಾಗರಿಕನು ತಿಳಿಯಬೇಕಾದ ಅಗತ್ಯವಿದ್ದು, ಸಂವಿಧಾನದಿಂದಾಗಿಯೇ ನಿಮಗೆ ಎಲ್ಲಾ ಹಕ್ಕುಗಳ ಚಲಾಯಿಸಲು ಸಾಧ್ಯವಾಗಿದೆ ಎಂಬುದನ್ನೂ ಜನತೆ ಮರೆಯಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.ನಗರದ ದೇವರಾಜ ಅರಸು ಬಡಾವಣೆಯ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಸಂವಿಧಾನ ಜಾಗೃತಿ ರಥಯಾತ್ರೆಗೆ ಸ್ವಾಗತಿಸಿ ಮಾತನಾಡಿ
ರಾಜ್ಯದಲ್ಲಿ ಸಂವಿಧಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆದಿದೆ. ಸಂವಿಧಾನದ ಬಗ್ಗೆ ಜನ ಜಾಗೃತಿ ರಥಯಾತ್ರೆ ಕೈಗೊಂಡಿದ್ದು, ರಾಜ್ಯಾದ್ಯಂತ ಪ್ರತಿ ಗ್ರಾಮಕ್ಕೂ ರಥಯಾತ್ರೆ ಸಾಗುತ್ತಿದೆ. ಈ ಮೂಲಕ ಪ್ರತಿಯೊಬ್ಬ ಪ್ರಜೆಗೂ, ವಿದ್ಯಾರ್ಥಿಗಳಿಂದ ಹಿರಿಯ ನಾಗರಿಕವರೆಗೆ ಎಲ್ಲರಿಗೂ ಸಂವಿಧಾನದ ಬಗ್ಗೆ ಅರಿವು ಮೂಡಿಸುವ, ಜಾಗೃತಿ ತರುವ ಕೆಲಸ ಆಗುತ್ತಿದೆ ಎಂದು ಶ್ಲಾಘಿಸಿದರು.ಜಾಗೃತಿ ಮೂಡಿಸುವ ಕೆಲಸ:
ಸಾಮಾನ್ಯವಾಗಿ ಜನರಿಗೆ ಸಂವಿಧಾನದ ಬಗ್ಗೆ ಅರಿವು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಸಂವಿಧಾನವೆಂದರೆ ಒಂದು ಪುಸ್ತಕ ಅಂದಷ್ಟೇ ತಿಳಿದಿರುತ್ತೇವೆ. ಆದರೆ, ಇದೇ ಪುಸ್ತಕ ಇಲ್ಲದೇ ಹೋಗಿದ್ದರೆ ನಾವು ಹೇಗೆ ಆಡಳಿತ ಮಾಡುವುದೆಂಬುದೇ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಎಲ್ಲಾ ಕಡೆ ಗಲಭೆ, ಗೊಂದಲ, ಗದ್ದಲ ಏರ್ಪಡುತ್ತಿದ್ದವು ಎಂದು ಸಂವಿಧಾನದ ಮಹತ್ವದ ಕುರಿತು ವಿವರಿಸಿದರು.ಬ್ರಿಟಿಷರಿಂದಾಗಿ ಶತಮಾನಗಳ ಕಾಲ ದಾಸ್ಯಕ್ಕೆ ಒಳಗಾಗಿದ್ದ ಭಾರತ ಸ್ವಾತಂತ್ರ್ಯ ಪಡೆದ ನಂತರ ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬರಿಗೂ ಎಲ್ಲಾ ಹಕ್ಕುಗಳು ಸಿಗುತ್ತಿವೆ. ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿ ಅಭಿಯಾನವನ್ನು ಜ.26ರಿಂದ ಮಾ.5ರವರೆಗೆ ರಾಜ್ಯವ್ಯಾಪಿ ಹಮ್ಮಿಕೊಂಡಿದೆ, ಯಾತ್ರೆಯು ಸಫಲವಾಗಬೇಕು. ಯಾರೂ ಸಹ ತಮ್ಮ ಹಕ್ಕುಗಳಿಂದ ವಂಚಿತರಾಗಬಾರದು. ನಾಗರೀಕ ಜೀವನ ನಡೆಸಲು ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ನ್ಯಾಯಮೂರ್ತಿ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.ಸಂವಿಧಾನ ಓದಿ ಅರಿಯಿರಿಭಾರತದಂತಹ ದೊಡ್ಡ ರಾಷ್ಟ್ರವೊಂದು ಜಗತ್ತಿಗೆ ಮಾದರಿಯಾಗಿರುವ ಸಂವಿಧಾನ ಇರುವುದರಿಂದರೇ ಇಂದಿಗೂ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿಂತಿದೆ. ನಾವೆಲ್ಲರೂ ನಾಗರಿಕರಾಗಿ ಜೀವನ ನಡೆಸಲೂ ಸಂವಿಧಾನದಿಂದಾಗಿಯೇ ಅವಕಾಶವೂ ಸಿಕ್ಕಿದೆ. ಸಂವಿಧಾನ ಇಲ್ಲವೆಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಸಂವಿಧಾನವನ್ನು ಪ್ರತಿಯೊಬ್ಬರೂ ಓದಿ ತಿಳಿಯುವ ಮೂಲಕ ದೇಶವನ್ನು ಮತ್ತಷ್ಟು ಸದೃಢಗೊಳಿಸಬೇಕು.
ರಾಜೇಶ್ವರಿ ಎನ್.ಹೆಗಡೆ, ಜಿಲ್ಲಾ ನ್ಯಾಯಾಧೀಶರು