ಲೋಕಾಯುಕ್ತಕ್ಕೆ ಶಕ್ತಿ ತುಂಬಲು ಎಲ್ಲ ರೀತಿಯ ಯತ್ನ

KannadaprabhaNewsNetwork | Published : Dec 16, 2024 12:45 AM

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವುದರಿಂದ ಲೋಕಾಯುಕ್ತದಲ್ಲಿ ದಾಖಲಾಗುತ್ತಿರುವ ಮೊಕದ್ದಮೆಗಳ ಸಂಖ್ಯೆಯು ದಿನೇ ದಿನೇ ಹೆಚ್ಚಳವಾಗುತ್ತಿವೆ. ಇವುಗಳನ್ನು ಸಕಾಲದಲ್ಲಿ ಇತ್ಯರ್ಥಗೊಳಿಸಲು ಅಗತ್ಯವಾಗಿರುವ ಸಮರ್ಥ ಹಾಗೂ ನುರಿತ ಅಧಿಕಾರಿ, ಸಿಬ್ಬಂದಿ ಕೊರತೆ ಇದ್ದು ಅವುಗಳನ್ನು ತ್ವರಿತವಾಗಿ ತುಂಬಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣಿoದ್ರ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಸಿಬಿಐ ನಂತಹ ದಕ್ಷ ಅಧಿಕಾರಿಗಳ ಜೊತೆಗೆ ನಿವೃತ್ತ ಸೇನಾಧಿಕಾರಿಗಳನ್ನು ನೇಮಿಸಿಕೊಂಡಲ್ಲಿ ಲೋಕಾಯುಕ್ತಕ್ಕೆ ಇನ್ನಷ್ಟು ಬಲ ಬರಲಿದೆ. ಈ ಬಗ್ಗೆ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ ಎಂದರು.

ಕಲಬುರಗಿ ಹಾಗೂ ಧಾರವಾಡದಲ್ಲಿ ಲೋಕಾಯುಕ್ತ ವಿಭಾಗಿಯ ಕಚೇರಿಗಳನ್ನು ಆರಂಭಿಸುವುದರ ಜೊತೆಗೆ, ಇಬ್ಬರು ಹೆಚ್ಚುವರಿಯಾಗಿ ಉಪ ಲೋಕಾಯುಕ್ತರನ್ನು ನೇಮಿಸಿಕೊಳ್ಳಬೇಕಾದ ಅಗತ್ಯವಿದೆ. ಇದರಿಂದಾಗಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ಅನೇಕ ಕಾರಣಗಳಿಂದಾಗಿ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ನಿರೀಕ್ಷಿಸಿದಷ್ಟಿಲ್ಲ. ಅಲ್ಲದೆ ದಾಖಲಾಗುವ ಪ್ರಕರಣಗಳಲ್ಲಿನ ಸ್ವರೂಪವು ಬದಲಾವಣೆಯಾಗುತ್ತಿರುವುದು ಕಾರಣವಾಗಿದೆ. ಅದಕ್ಕಾಗಿ ವಿದ್ಯುನ್ಮಾನ ಸಾಕ್ಷ್ಯಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಇಲ್ಲಿಯೂ ಕೆಲವು ಸಂದರ್ಭಗಳಲ್ಲಿ ಅದರ ಸಮರ್ಥನೆ ಸಾಧ್ಯವಾಗುವುದಿಲ್ಲ. ಆದ್ದರಿಂದ ವಿಷಯಾಧಾರಿತ, ನುರಿತ ಹಾಗೂ ಸಮರ್ಥ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಲೋಕಾಯುಕ್ತ ಕೆಲವು ವಿಷಯಗಳಲ್ಲಿ ನೇರವಾಗಿ ಹಾಗೂ ಕೆಲವು ಪ್ರಕರಣಗಳಲ್ಲಿ ವ್ಯಕ್ತಿ ಹಾಗೂ ಸಂಘಟನೆಗಳು ದಾಖಲಿಸುವ ಪ್ರಕರಣಗಳನ್ನು ಕೈಗೆತ್ತಿಕೊಂಡು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ. ಖಾಸಗಿ ವ್ಯಕ್ತಿಗಳು ನಮೂನೆ 1 ಮತ್ತು 2 ನ್ನು ಬಳಸಿ, ಅಫಿಡವಿಟ್‌ ಸಲ್ಲಿಸಿ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಇತ್ತೀಚಿಗೆ ದುರುದಾರರ ಆಧಾರ್ ಕಾರ್ಡ್‌ ಪಡೆದು ಕೊಳ್ಳಲಾಗುತ್ತಿದೆ. ದಾಖಲಿಸುವ ದೂರು ಸುಳ್ಳು ಆಗಿದ್ದಲ್ಲಿ ಲೋಕಾಯುಕ್ತ ಕಾಯ್ದೆ ಸೆಕ್ಷನ್ 17, 19ರಡಿ ದಂಡನೆಗೆ ಗುರಿಪಡಿಸಲಾಗುತ್ತದೆ. ಸಾರ್ವಜನಿಕ ಪರವಾದ ವಿಷಯಗಳಿದ್ದು ಪತ್ರಿಕೆಗಳಲ್ಲಿ ಸಾಕ್ಷ್ಯಗಳೊಂದಿಗೆ ಪ್ರಕಟಕೊಂಡಿದ್ದಲ್ಲಿ ಲೋಕಾ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳುತ್ತದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪಬ್ಲಿಕ್ ಪ್ರಸಿಕ್ಯೂಟರ್ ಸುಂದರ್ ರಾಜ್, ಲೋಕಾಯುಕ್ತ ಎಸ್‌ಪಿ ಮಂಜುನಾಥ್ ಚೌಧಾರಿ ಹಾಗೂ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Share this article