ಹುಬ್ಬಳ್ಳಿ: ಇಲ್ಲಿನ ಕಿಮ್ಸ್‌ನಲ್ಲಿ ಕುಟುಂಬಸ್ಥರ ಪರವಾನಗಿ ಇಲ್ಲದೇ ಮೃತದೇಹವನ್ನು ವಿದ್ಯಾರ್ಥಿಗಳ ಕಲಿಕೆಗೆ ಬಳಸಿಕೊಳ್ಳಲು ಯತ್ನಿಸಿರುವ ಆರೋಪ ಕೇಳಿಬಂದಿದ್ದು, ಕುಟುಂಬಸ್ಥರಿಂದ ಪ್ರತಿರೋಧ ವ್ಯಕ್ತವಾದ ಬೆನ್ನಲ್ಲೆ 9 ದಿನಗಳ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ ಘಟನೆ ಭಾನುವಾರ ಕಿಮ್ಸ್‌ನಲ್ಲಿ ನಡೆದಿದೆ.
ಇಲ್ಲಿನ ಉಣಕಲ್ಲಿನ ಸುಭಾನಿ ನಗರದ ಹತಾವುಲ್ಲಾ ಎಂಬುವರ ಮೃತದೇಹವನ್ನು ನಮ್ಮ ಪರವಾನಗಿ ಇಲ್ಲದೇ ಕಿಮ್ಸ್‌ನ ಪ್ರಯೋಗಾಲಯಕ್ಕೆ ಬಳಸಲು ಯತ್ನಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಯೋಗಾಲಯದಲ್ಲಿರುವ ಮೃತದೇಹವನ್ನು ನಮಗೆ ಹಸ್ತಾಂತರಿಸುವಂತೆ ಕೇಳಲು ಬಂದಾಗ ಪ್ರಯೋಗಾಲಯಕ್ಕೆ ಹಸ್ತಾಂತರಿಸುವಂತೆ ಕುಟುಂಬಸ್ಥರಿಗೆ ಕಿಮ್ಸ್ ಸಿಬ್ಬಂದಿ ಒತ್ತಡ ಹೇರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಪ್ರಕರಣದ ಹಿನ್ನೆಲೆ?
ಕುಡಿತದ ಚಟ ಹೊಂದಿದ್ದ ಹತಾವುಲ್ಲಾ ಮನೆಯವರೊಂದಿಗೆ ಜಗಳವಾಡಿ ಮನೆಬಿಟ್ಟು ಹೋಗಿದ್ದ. ಕಳೆದ ಜುಲೈ 27ರಂದು ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದ. ಸ್ಥಳೀಯರು ಅನಾಥ ವ್ಯಕ್ತಿ ಇರಬಹುದು ಎಂದು ಮೃತದೇಹವನ್ನು ಕಿಮ್ಸ್‌ಗೆ ರವಾನಿಸಿದ್ದರು. ಏತನ್ಮಧ್ಯೆ 4-5 ದಿನವಾದರೂ ಕುಟುಂಬಸ್ಥರು ಬರದ ಹಿನ್ನೆಲೆಯಲ್ಲಿ ಅನಾಥನಿರಬಹುದು ಎಂದು ಹತಾವುಲ್ಲಾ ಮೃತದೇಹವನ್ನು ಕಿಮ್ಸ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.ಇತ್ತ ಹತಾವುಲ್ಲಾ 4-5 ದಿನ ಕಳೆದರೂ ಮನೆಗೆ ಬರದಿದ್ದರಿಂದ ಕುಟುಂಬದವರು ಹುಡುಕಾಟ ನಡೆಸಿದ್ದರು. ಬಳಿಕ ಸ್ಥಳೀಯ ಮೂಲದಿಂದ ಹತಾವುಲ್ಲಾ ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ. ತಕ್ಷಣವೇ ಕಿಮ್ಸ್‌ನ ಶವಾಗಾರಕ್ಕೆ ಹೋದಾಗ ಮೃತದೇಹವೇ ಇರಲಿಲ್ಲ. ಇದರಿಂದ ಕಂಗಾಲಾಗಿ ಆ ಬಗ್ಗೆ ಪೊಲೀಸರ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ ವೇಳೆ ಮೃತಪಟ್ಟು ಕಿಮ್ಸ್‌ನ ಪ್ರಯೋಗಾಲಯದಲ್ಲಿರುವುದು ಗೊತ್ತಾಗಿದೆ. ನಂತರ ಮೃತದೇಹ ಹಸ್ತಾಂತರಿಸುವಂತೆ ಆ. 2ರಿಂದ ಸೂಕ್ತ ದಾಖಲೆಯೊಂದಿಗೆ ಕೇಳುತ್ತಿದ್ದರೂ ಕಿಮ್ಸ್ ಆಡಳಿತ ಮಂಡಳಿ ಮೃತದೇಹ ಹಸ್ತಾಂತರಿಸಲು ನಿರಾಕರಿಸಿತ್ತು.
ಆನಂತರ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಕಿಮ್ಸ್‌ನ ಆಡಳಿತ ಮಂಡಳಿ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ ಎಂದು ಮೃತ ವ್ಯಕ್ತಿ ಪತ್ನಿ ''''ಕನ್ನಡಪ್ರಭ''''ಕ್ಕೆ ಮಾಹಿತಿ ನೀಡಿದರು.ಕುಟುಂಬದವರಿಗೆ ಮರಳಿಸಲಾಗಿದೆ
ಕಳೆದ ಜು. 27ರಂದು ಕಿಮ್ಸ್‌ಗೆ ಅನಾಮಧೇಯ ಶವ ಬಂದಿತ್ತು. ಅದನ್ನು 3 ದಿನಗಳ ಕಾಲ ಶವಾಗಾರದಲ್ಲಿರಿಸಲಾಗಿತ್ತು. ವಾರಸುದಾರರು ಯಾರೂ ಬರದ ಹಿನ್ನೆಲೆಯಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ವಿದ್ಯಾರ್ಥಿಗಳ ಕಲಿಕೆಗಾಗಿ ಪ್ರಯೋಗಾಲಯಕ್ಕೆ ನೀಡಲಾಗಿತ್ತು. ಭಾನುವಾರ ಮೃತರ ವಾರಸುದಾರರು ಬಂದು ಸೂಕ್ತ ದಾಖಲಾತಿ ನೀಡಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಕಿಮ್ಸ್‌ನ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.