ರಾಮನಗರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಜೆಡಿಎಸ್ ರಾಮನಗರ ತಾಲ್ಲೂಕು ಅಧ್ಯಕ್ಷ ರಾಜಶೇಖರ್ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ಅವರೇ ನೀವು ತವಾ, ಕುಕ್ಕರ್ ಹಂಚಿಕೆ ಮಾಡಿ ಗೆದ್ದವರು. ನಿಮಗೆ ಪ್ರಾಮಾಣಿಕತೆ ತಾಕತ್ತ, ಗಂಡಸ್ತನದ ಬಗ್ಗೆ ಮಾತನಾಡಲು ನಿಮಗೆ ಹೇಗೆ ಸಾಧ್ಯ. ಮಾಜಿ ಪ್ರಧಾನಿ ದೇವೇಗೌಡರನ್ನು ಪ್ರಧಾನಮಂತ್ರಿ, ಕುಮಾರಸ್ವಾಮಿ ಯವರನ್ನು 2 ಬಾರಿ ಮುಖ್ಯಮಂತ್ರಿ, ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಜನ ಪ್ರೀತಿಯಿಂದ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರಿಗೆ ಗಂಡಸ್ತನ ಇದ್ದಿದ್ದರಿಂದಲೇ ಎರಡು ಬಾರಿ ಮುಖ್ಯಮಂತ್ರಿಯಾದರು. ಯೋಗೇಶ್ವರ್ ಅವರಿಗೆ ಗಂಡಸ್ತನ ಇದ್ದರಿಂದಲೇ ಸಚಿವರಾದರು. ಇನ್ನು ಮುಂದೆ ನಿಮ್ಮ ನಾಲಿಗೆಯನ್ನು ಹರಿಯಬಿಡಬೇಡಿ ಎಚ್ಚರಿಕೆಯಿಂದ ಮಾತನಾಡುವುದನ್ನು ಕಲಿಯಿರಿ. ಇಲ್ಲದಿದ್ದರೆ ಜನ ನಿಮಗೆ ಮುಂದಿನ ದಿನಗಳಲ್ಲಿ ಪಾಠ ಹೇಳುತ್ತಾರೆ. ಇಂತಹ ಪದ ಬಳಕೆ ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಕಿಡಿಕಾರಿದರು.ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ಅವರ ಕೀಳು ಮಟ್ಟದ ಹೇಳಿಕೆಯನ್ನು ಬಿಜೆಪಿ - ಜೆಡಿಎಸ್ ಪಕ್ಷಗಳು ಕಟು ಶಬ್ದದಿಂದ ಖಂಡಿಸುತ್ತದೆ. ಮಾತನಾಡುವ ಮುನ್ನ ನಿಮ್ಮ ನಾಲಿಗೆ ಹಿಡಿತದಲ್ಲಿರಲಿ ಇಂತಹ ಹೇಳಿಕೆಯಿಂದ ರಾಮನಗರ ರಣರಂಗ ಆಗುತ್ತದೆ. ಇದು ಆಗಲು ಬಿಡಬೇಡಿ ಜವಾಬ್ದಾರಿ ಶಾಸಕ ಸ್ಥಾನದಲ್ಲಿರುವ ನಿಮಗೆ ನಿಮ್ಮ ಹೇಳಿಕೆ ಶೋಭೆ ತರುವುದಿಲ್ಲ. ಮುಂದಿನ ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಗೌತಮ್ ಗೌಡ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ಅವರೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವರಾದ ಯೋಗೇಶ್ವರ್, ಡಾ. ಅಶ್ವತ್ತ ನಾರಾಯಣ ಅವರ ಬಗ್ಗೆ ಕೀಳುಮಟ್ಟದ ಭಾಷೆ ಬಳಸುವುದು ಬೇಡ ಅಂತಹ ಭಾಷೆ ನಿಮ್ಮ ಮೇಲೆ ಬಳಸಲು ಕೂಡ ನಮಗೆ ಬರುತ್ತದೆ. ನಿಮ್ಮನ್ನು ಜನ ಮುಂದಿನ ದಿನಗಳಲ್ಲಿ ಶಾಸಕ ಸ್ಥಾನದಿಂದ ಕೆಳಗಿಳಿಸುವ ದಿನಗಳೂ ದೂರವಿಲ್ಲ ಎಂದರು.ಶಾಸಕ ಸ್ಥಾನಕ್ಕೆ ತನ್ನದೇ ಆದ ಗೌರವವಿದೆ. ಆ ಗೌರವವನ್ನು ಮೊದಲು ಪಡೆದುಕೊಳ್ಳಿ ರಾಜಕೀಯದಲ್ಲಿ ಯಾರೂ ಕೂಡ ಗಂಡಸ್ತನ ತೋರಿಸಲು ಬರುವುದಿಲ್ಲ. ರಾಜಕಾರಣಕ್ಕೆ ಜನ ಸೇವೆಗೆಂದು ಬರುತ್ತಾರೆ. ಇದನ್ನು ಮೊದಲು ತಿಳಿಯಿರಿ. ನೀವು ಆಡಿದ ಮಾತಿಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡ ನರಸಿಂಹಮೂರ್ತಿ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ಅವರೇ ನಿಮ್ಮ ನಾಯಕರು ದೇವೇಗೌಡರ ವಿರುದ್ಧ ತೇಜಸ್ವಿನಿ ಅವರನ್ನು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿದಾಗ ಅವರ ಗಂಡಸ್ತನ ಎಲ್ಲಿ ಹೋಗಿತ್ತು. ಕನಕಪುರದಿಂದ ರಾಮನಗರಕ್ಕೆ ಬಂದಿದ್ದೀರಲ್ಲ ರಾಮನಗರದಲ್ಲಿ ಕಾಂಗ್ರೆಸ್ ನಲ್ಲಿ ಯಾರು ಗಂಡಸರಿರಲಿಲ್ಲವೇ. ನಿಮಗೆ ಗಂಡಸ್ತನ ಇದ್ದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಗೆದ್ದು ತೋರಿಸಿ ಎಂದು ಸವಾಲು ಹಾಕಿದರು.ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ. ರಾಜಣ್ಣ, ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಎಸ್.ಆರ್. ನಾಗರಾಜ್, ಮುರಳೀಧರ್, ವಕ್ತಾರ ಬಿ. ಉಮೇಶ್, ನಗರಸಭಾ ಸದಸ್ಯ ಮಂಜುನಾಥ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಗದೀಶ್, ನಗರ ಮಂಡಳ ಅಧ್ಯಕ್ಷ ದರ್ಶನ್‌ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಕಾಳಯ್ಯ, ಚಂದ್ರಶೇಖರ್, ಸಂಜಯ್, ಮುಖಂಡರಾದ ರುದ್ರದೇವರು, ರಾಮಕೃಷ್ಣಯ್ಯ, ದೇವಿಕಾ, ಗೂಳಿ ಕುಮಾರ್, ಜಯಕುಮಾರ್, ಕೆಂಪರಾಜು ಮತ್ತಿತರರು ಭಾಗವಹಿಸಿದ್ದರು.
14ಕೆಆರ್ ಎಂಎನ್ 4.ಜೆಪಿಜಿರಾಮನಗರದಲ್ಲಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.