ಧಾರವಾಡ:
21ನೇ ಶತಮಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಅವು ತಮ್ಮ ಲಾಭದಲ್ಲಿ ಅಲ್ಪ ಪ್ರಮಾಣವನ್ನು ರೈತರ ಅಭಿವೃದ್ಧಿ ಹಾಗೂ ಕೃಷಿಗೆ ಬೇಕಾಗುವ ನೂತನ ತಂತ್ರಜ್ಞಾನಗಳಿಗೆ ಸಿಎಸ್‌ಆರ್ ಯೋಜನೆ ಅಡಿ ವಿನಿಯೋಗಿಸಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ ಧನಕರ ಕರೆ ನೀಡಿದರು.ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಗುರುವಾರ ನಡೆದ ಕೃಷಿ ಮಹಾವಿದ್ಯಾಲಯದ ಅಮೃತ ಮಹೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ವಿಕಸಿತ ಭಾರತದ ಕನಸು ನನಸಾಗಲು ಕೃಷಿ ಕ್ಷೇತ್ರ ತೀವ್ರ ವೇಗವಾಗಿ ಬೆಳೆಯಬೇಕಿದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆ ರೂಪಿಸಿದೆ. ಪೂರಕವಾಗಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಹಾಗೂ ಕೃಷಿ ವಿವಿಗಳ ಸಂಶೋಧನೆಗಳು ರೈತರ ನೈಜ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದರು.
ಕೇಂದ್ರ ಸ್ಥಾನದಲ್ಲಿ ನಿಂತು:ಭಾರತವು ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಖಂಡತ್ವದಲ್ಲಿ ಆರ್ಥಿಕವಾಗಿ ತೀವ್ರ ಪ್ರಗತಿ ಸಾಧಿಸುತ್ತಿದ್ದು 5ನೇ ಆರ್ಥಿಕತೆಯಿಂದ 3ನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿ ಹೊರಹೊಮ್ಮುತ್ತಿದೆ. ಇದನ್ನು ಸಾಕಾರಗೊಳಿಸಲು ಕೃಷಿ ಕ್ಷೇತ್ರದ ಅಗತ್ಯತೆ ಸಾಕಷ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಐಸಿಎಆರ್ ಅಂತಹ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದೆ. ಕೃಷಿ ಸಂಬಂಧಿತ ಸಂಸ್ಥೆಗಳು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸ್ಥಾನದಲ್ಲಿ ನಿಂತು ಪ್ರತಿ ರೈತರು ತಂತ್ರಜ್ಞಾನ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ನೋಡಿಕೊಳ್ಳಬೇಕೆಂದರು.
ನಿರೀಕ್ಷೆಗಳು ಹೆಚ್ಚಿವೆ:ಕಳೆದ ಹತ್ತು ವರ್ಷಗಳಲ್ಲಿ ಡಿಜಿಟಲ್ ತಂತ್ರಜ್ಞಾನವು ಪ್ರತಿ ಹಳ್ಳಿಗೂ ತಲುಪಿದೆ. ತಂತ್ರಜ್ಞಾನ ಅವಲಂಬಿತ ಕೃಷಿಕರಲ್ಲಿ ವಿನೂತನ ನಿರೀಕ್ಷೆಗಳು ಹುಟ್ಟಿದ್ದು, ಅವುಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಿದೆ ಎಂದ ಅವರು, ಕೇಂದ್ರ ಸರ್ಕಾರ ಅರಿಶಿಣ ಉತ್ಪಾದನೆಗೆ ಮಂಡಳಿ ಸ್ಥಾಪಿಸಿದ್ದು, ಮೂರು ವರ್ಷಗಳಲ್ಲಿ ಅರಿಶಿಣವನ್ನು ಭಾರತದಲ್ಲಿ ದುಪ್ಪಟ್ಟು ಉತ್ಪಾದಿಸಲು ಯೋಜಿಸಲಾಗಿದೆ. ಇದರ ನೇರ ಲಾಭ ರೈತರಿಗೆ ಮುಟ್ಟಲಿದೆ. ಹೀಗೆ ಪ್ರತಿಯೊಂದು ಉತ್ಪಾದನೆಗೂ ಪ್ರತ್ಯೇಕ ಮಂಡಳಿ ರಚಿಸಿ ರೈತರನ್ನು ಆರ್ಥಿಕವಾಗಿ ಸಬರಲನ್ನಾಗಿ ಮಾಡಬೇಕು ಎಂಬುದೇ ನಮ್ಮ ಆಶಯವಾಗಿದೆ. ಪ್ರಸ್ತುತ ಕೃಷಿ ಕ್ಷೇತ್ರದ ಅಭಿವೃದ್ಧಿ ವಿಷಯವಾಗಿ ಹಲವು ನಿರೀಕ್ಷೆಗಳಿದ್ದರೂ ಹವಾಮಾನ ವೈಪರಿತ್ಯ ಹಾಗೂ ಅನಿರೀಕ್ಷಿತ ಮಾರುಕಟ್ಟೆ ರೈತರಿಗೆ ಮಾರಕವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಂತ ಹಂತವಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಜಾರಿಗೊಳಿಸುತ್ತಿದೆ ಎಂದರು.
ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಮಾತನಾಡಿ, ವಿಕಸಿತ ಭಾರತದ ನಿರ್ಮಾಣಕ್ಕಾಗಿ ಕೃಷಿ ಕ್ಷೇತ್ರವು ಆಧುನಿಕತೆಗೆ ತೆರೆದುಕೊಳ್ಳಬೇಕಿದ್ದು, ಪೂರಕವಾಗಿ ಧಾರವಾಡ ಕೃಷಿ ವಿವಿ ಹೊಸ ತಂತ್ರಜ್ಞಾನ, ಸಂಶೋಧನೆಗಳ ಮೂಲಕ ಗುಣಮಟ್ಟದ ಬಿತ್ತನೆ ಬೀಜ ಪೂರೈಸುತ್ತಿರುವುದು ಶ್ಲಾಘನೀಯ ಎಂದರು. ಹೊಸ ಆವಿಷ್ಕಾರ, ಸಂಶೋಧನೆಗಳು ಕೃಷಿಗೆ ಪೂರಕವಾಗಿದ್ದು ಈ ಮೂಲಕ ಹೆಚ್ಚಿನ ಸಾಧನೆ ಸಾಧಿಸಬೇಕೆಂದರು.ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಉಪ ರಾಷ್ಟ್ರಪತಿಗಳ ಪತ್ನಿ ಡಾ. ಸುದೇಶ ಧನಕರ್ ಇದ್ದರು. ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿಯಲ್ಲಿ ಹವಾಮಾನ ರಡಾರ್ ಕೇಂದ್ರಪ್ರಸ್ತುತ ಹವಾಮಾನ ವೈಪರಿತ್ಯದಿಂದ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತಲಿನ 175 ಕಿಮೀ ವ್ಯಾಪ್ತಿಯ ಹವಾಮಾನವನ್ನು ನಿಖರವಾಗಿ ಹೇಳಬಲ್ಲ ನೂತನ ತಂತ್ರಜ್ಞಾನವನ್ನು ಶೀಘ್ರದಲ್ಲಿಯೇ ಕೃಷಿ ವಿವಿ ಆವರಣದಲ್ಲಿ ಅಳವಡಿಸಲಿದ್ದೇವೆ. ಎಕ್ಸ್ ಬ್ಯಾಂಡ್ ರಡಾರ್ ಕೇಂದ್ರವನ್ನು ಸ್ಥಾಪಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಈ ವರ್ಷ ಕೃಷಿ ಬಜೆಟ್‌ನ್ನು ₹ 1.27 ಲಕ್ಷ ಕೋಟಿಗೆ ಏರಿಕೆ ಮಾಡುವುದಾಗಿ ಹೇಳಿದ ಅವರು, ಈ ವರ್ಷ ಪ್ರತಿಕೂಲ ವಾತಾವರಣದಿಂದ ಹೆಚ್ಚುವರಿ ಸಕ್ಕರೆ ಉತ್ಪಾದನೆಯಾಗಿದೆ. ಇದರ ಲಾಭವನ್ನು ರೈತರಿಗೆ ನೀಡಲು ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದು ಸೇರಿದಂತೆ ಕೇಂದ್ರ ಸಾಧನೆಗಳನ್ನು ಪ್ರಸ್ತುತಪಡಿಸಿದರು.
ಯಾವುದೇ ಸಂಸ್ಥೆಯ ಹಳೆಯ ಒಕ್ಕೂಟ ಬೆನ್ನೆಲುಬಾಗಿ ನಿಲ್ಲಬೇಕು. ಹಾರ್ವಡ್ ವಿವಿಯಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟ 50 ಬಿಲಿಯನ್ ಡಾಲರ್ ಹಣ ಸಂಗ್ರಹಿಸಿ ವಿವಿ ಶೈಕ್ಷಣಿಕ ಚಟುವಟಿಕೆಗಳಿಗೆ ನೀಡಿದ್ದು, ಇಂತಹ ಚಟುವಟಿಕೆಗಳು ಸಹ ಭಾರತದಲ್ಲಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಈಗ ಕೃಷಿ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸ್ತುತ್ಯಾರ್ಹ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಹೇಳಿದರು.ಸರಳತೆ ಮೆರೆದ ವಿಪಿ:
ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಕೃಷಿ ಮಹಾವಿದ್ಯಾಲಯಕ್ಕೆ ಶ್ರಮಿಸಿದ ನಿವೃತ್ತ ಪ್ರಾಚಾರ್ಯ ಡಾ. ಎಸ್.ಡಬ್ಲೂ. ಮೆಣಸಿನಕಾಯಿ ಅವರ ಪತ್ನಿ 92 ವರ್ಷದ ಗೌರಮ್ಮ ಮೆಣಸಿನಕಾಯಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸ್ವತಃ ಅವರ ಬಳಿ ಬಂದ ಉಪರಾಷ್ಟ್ರಪತಿಗಳು ಅವರಿಗೆ ಕೈ ಮುಗಿದು ನಮಸ್ಕರಿಸಿ ಗೌರವಿಸಿದ್ದು ಅವರ ಸರಳತೆಗೆ ಸಾಕ್ಷಿಯಾಯಿತು.