ಧಾರವಾಡ:
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮಧ್ಯೆದ ಬಿಆರ್‌ಟಿಎಸ್ ಮಾರ್ಗದ ಕೆಲವೆಡೆ ಸಾರ್ವಜನಿಕರಿಗೂ ಸಂಚರಿಸಲು ಅನುಮತಿ ನೀಡಬೇಕು ಎಂದು ಧಾರವಾಡ ಧ್ವನಿ ಸಂಘಟನೆ ವತಿಯಿಂದ ಆಗ್ರಹಿಸಲಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮತ್ತು ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ ಸಂಘಟನೆಯು, ಪ್ರಸ್ತುತ ಯೋಜನೆಯಡಿ ಸಂಚರಿಸುವ ಬಸ್‌ಗಳ ಮಾರ್ಗ ನಿಗದಿಪಡಿಸಲಾಗಿದೆ. ಆ ಮಾರ್ಗದಲ್ಲಿ ಚಿಗರಿ ಬಸ್‌ಗಳು ಸಂಚರಿಸುತ್ತವೆ. ಆದರೆ, ಇನ್ನೊಂದೆಡೆ ಸಾರ್ವಜನಿಕರ ವಾಹನಗಳು ಸಂಚರಿಸುವ ರಸ್ತೆಯಲ್ಲಿ ವಾಹನಗಳ ಪ್ರಮಾಣ ನಿತ್ಯ ಅಧಿಕವಾಗುತ್ತಿದೆ. ದ್ವಿಪಥ ಇದ್ದರೂ ದಿನ ಬೆಳಗಾದರೆ ಹೊಸ ವಾಹನಗಳು ರಸ್ತೆಗೆ ಇಳಿಯುವುದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಈ ರಸ್ತೆಗೆ ಹೊಂದಿಕೊಂಡಿರುವ ಮನೆ, ವಾಣಿಜ್ಯ ಮಳಿಗೆ, ಸರ್ಕಾರಿ ಕಚೇರಿಗಳು, ಖಾಸಗಿ ಒಡೆತನದ ಆಸ್ತಿ, ಕಟ್ಟಡಗಳಿವೆ. ಈ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ಆಗುತ್ತಿದ್ದು, ದ್ವಿಪಥ ರಸ್ತೆ ಮತ್ತಷ್ಟು ಇಕ್ಕಟ್ಟಾಗಿದೆ. ಧಾರವಾಡದ ಜ್ಯುಬಿಲಿ ಸರ್ಕಲ್‌ದಿಂದ ನವಲೂರ ವರೆಗೆ ಮತ್ತು ಉಣಕಲ್ಲದಿಂದ ರಾಣಿ ಚೆನ್ನಮ್ಮ ವೃತ್ತದ ವರೆಗೆ ಬೈಕ್, ಆಟೋರಿಕ್ಷಾ ಮತ್ತು ಕಾರುಗಳು ಸಂಚರಿಸಲು ಬಹಳಷ್ಟು ಹರಸಾಹಸ ಪಡಬೇಕಿದೆ. ಆದ್ದರಿಂದ ಮೇಲೆ ಕಾಣಿಸಿದ ಹಂತಗಳಲ್ಲಿ ಸಾರ್ವಜನಿಕರಿಗೆ ಬಿಆರ್‌ಟಿಎಸ್ ಸಾರಿಗೆ ಮಾರ್ಗದಲ್ಲಿ ಸಂಚರಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಪ್ರಧಾನ ಕಾರ್ಯದರ್ಶಿ ಮಂಜು ನಡಟ್ಟಿ, ಪಾಲಿಕೆ ಸದಸ್ಯ ಶಂಭು ಸಾಲಮನಿ, ವೆಂಕಟೇಶ ರಾಯ್ಕರ, ಬಸವರಾಜ ಪೊಮೋಜಿ, ಪುಂಡಲೀಕ ತಳವಾರ, ಮುತ್ತು ಬೆಳ್ಳಕ್ಕಿ, ಮಂಜುನಾಥ ಅಮ್ಮಿನಬಾವಿ, ಪುಂಡಲೀಕ ಹಡಪದ, ನಿತ್ಯಾನಂದ ಮೂಗಬಸ್ತ, ಮಂಜುನಾಥ ನೀರಲಕಟ್ಟಿ, ಪರಮೇಶ್ವರ ಕಾಳೆ, ಶರಣಗೌಡ ಗಿರಡ್ಡಿ. ಇಮ್ರಾನ್ ತಾಳಿಕೋಟಿ. ಮಲ್ಲನಗೌಡ ಪಾಟೀಲ, ಮಂಜುನಾಥ ಹೊಸಮನಿ ಮನವಿ ಸಲ್ಲಿಸಿದರು.