ವನ್ಯಜೀವಿಗಳ ಅಂಗಾಂಗ ಒಪ್ಪಿಸಲು ಏ.9ರವರೆಗೆ ಅವಕಾಶ

KannadaprabhaNewsNetwork | Published : Feb 20, 2024 1:47 AM

ಸಾರಾಂಶ

ವನ್ಯಜೀವಿ (ಸಂರಕ್ಷಣಾ) ಕಾಯ್ದೆಯಡಿ ರಾಜ್ಯ ಸರ್ಕಾರ ಹೊಸದಾಗಿ 2024 ನಿಯಮ ಜಾರಿಗೆ ತಂದಿದೆ. ಇದರ ಅನ್ವಯ ಮಾಲೀಕತ್ವ ಪ್ರಮಾಣ ಪತ್ರವಿಲ್ಲದ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳು, ಪದಾರ್ಥಗಳು ಹಾಗೂ ವಸ್ತುಗಳನ್ನು ಇಟ್ಟುಕೊಂಡಿರುವುದು ಶಿಕ್ಷಾರ್ಹ ಅಪರಾಧ. ಆದ್ದರಿಂದ ಅವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲು 2024ರ ಏ.9ರವರೆಗೆ ಅವಕಾಶ ನೀಡಲಾಗಿದೆ ಎಂದು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಭದ್ರಾವತಿ

ವನ್ಯಜೀವಿ (ಸಂರಕ್ಷಣಾ) ಕಾಯ್ದೆಯಡಿ ರಾಜ್ಯ ಸರ್ಕಾರ ಹೊಸದಾಗಿ 2024 ನಿಯಮ ಜಾರಿಗೆ ತಂದಿದೆ. ಇದರ ಅನ್ವಯ ಮಾಲೀಕತ್ವ ಪ್ರಮಾಣ ಪತ್ರವಿಲ್ಲದ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳು, ಪದಾರ್ಥಗಳು ಹಾಗೂ ವಸ್ತುಗಳನ್ನು ಇಟ್ಟುಕೊಂಡಿರುವುದು ಶಿಕ್ಷಾರ್ಹ ಅಪರಾಧ. ಆದ್ದರಿಂದ ಅವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲು 2024ರ ಏ.9ರವರೆಗೆ ಅವಕಾಶ ನೀಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹೇಳಿದರು.

ಸೋಮವಾರ ಈ ಕುರಿತು ಮಾಹಿತಿ ನೀಡಿ, ಕೆಲವರು ಆಭರಣಗಳಲ್ಲಿ ಹುಲಿ ಉಗುರು, ಆನೆ ಕೂದಲು ಸೇರಿದಂತೆ ಹಲವು ವಸ್ತುಗಳನ್ನು ಬಳಸಿರುತ್ತಾರೆ. ಅಲ್ಲದೇ, ಕೆಲವರು ಜಿಂಕೆ ಕೊಂಬು, ಹುಲಿ ಚರ್ಮ, ಆನೆ ದಂತ ಸೇರಿದಂತೆ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳು, ಪದಾರ್ಥಗಳು ಹಾಗೂ ವಸ್ತುಗಳನ್ನು ಮನೆಗಳಲ್ಲಿ ಅಲಂಕಾರಕ್ಕೆ ಬಳಸಿರುತ್ತಾರೆ. ಇದು ಅಪರಾಧ. ಈ ಹಿನ್ನೆಲೆಯಲ್ಲಿ ಅವುಗಳನ್ನು ಇಲಾಖೆಗೆ ಒಪ್ಪಿಸಿ, ರಶೀದಿ ಪಡೆಯಬಹುದು ಎಂದು ತಿಳಿಸಿದರು.

ದಂಡ, ಕಠಿಣ ಶಿಕ್ಷೆ:

ಸರ್ಕಾರ ಜಾರಿಗೆ ತಂದಿರುವ ನಿಯಮದ ಅನುಸಾರ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹25 ಸಾವಿರವರೆಗೆ ದಂಡದ ಶಿಕ್ಷೆಯಾಗಲಿದೆ. ಈ ಹಿನ್ನೆಲೆ ನಿಗದಿಪಡಿಸಿರುವ ದಿನಾಂಕದೊಳಗೆ ಹತ್ತಿರದ ಅರಣ್ಯ ಕಚೇರಿಗೆ ಒಪ್ಪಿಸಿ ಸ್ವೀಕೃತಿ ಪಡೆಯಬೇಕು. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಒಪ್ಪಿಸುವ ಪ್ರತಿಯೊಂದು ವಸ್ತುವಿನ ದಾಖಲಾತಿ ಅರಣ್ಯ ಇಲಾಖೆಯಲ್ಲಿ ನಮೂದಾಗಲಿದೆ. ಸದರಿ ವಸ್ತು ಎಲ್ಲಿಂದ ಬಂತು, ಹೇಗೆ ಬಂತು ಎಂದು ಪ್ರಶ್ನಿಸಲಾಗುವುದಿಲ್ಲ. ಇಲ್ಲವಾದಲ್ಲಿ ಕಾನೂನುಬಾಹಿರ ಚಟುವಟಿಕೆ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಅನುಭವಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಈ ಸಂಬಂಧ ರೂಪಿಸಲಾಗಿರುವ ಫಾರಂ-1ನ್ನು ಇಲಾಖೆಯ ವೆಬ್‌ಸೈಟ್: www.aranya.gov.in ಮೂಲಕ ಪಡೆಯಬಹುದು. ಜನರು ಹೆಚ್ಚಿನ ಮಾಹಿತಿ ಪಡೆಯಲು ಮತ್ತು ವಸ್ತುಗಳನ್ನು ಹಿಂದಿರುಗಿಸಲು ಸಮೀಪದ ವಲಯ ಅರಣ್ಯ ಕಚೇರಿಗಳು, ಸಹಾಯಕ ಅರಣ್ಯ ಕಚೇರಿಗಳು ಹಾಗೂ ಉಪ ಅರಣ್ಯ ಕಚೇರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

- - - -ಡಿ19-ಬಿಡಿವಿಟಿ3:

ಭದ್ರಾವತಿ ಅರಣ್ಯ ಇಲಾಖೆ ಕಚೇರಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ವನ್ಯಜೀವಿ ಅಂಗಾಂಗಗಳ ಹೊಂದಿದಲ್ಲಿ ಹಿಂದಿರುಗಿಸಲು ಮಾಹಿತಿ ನೀಡಿದರು.

Share this article