ಕೋಲಾರ ಜಿಲ್ಲಾ ನೂತನ ಡಿಡಿಪಿಐ ಆಗಿ ಅಲ್ಮಾಸ್ ಫರ್ವೀನ್‌ತಾಜ್ ಅಧಿಕಾರ

KannadaprabhaNewsNetwork |  
Published : Aug 26, 2025, 01:02 AM IST
೨೫ಕೆಎಲ್‌ಆರ್-೨ಕೋಲಾರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ನೂತನ ಡಿಡಿಪಿಐ ಆಗಿ ಅಲ್ಮಾಸ್ ಫರ್ವೀನ್ ತಾಜ್ ಸೋಮವಾರ ಅಧಿಕಾರ ವಹಿಸಿಕೊಂಡಿದ್ದು ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿ ಫಾತಿಮಾ ಮತ್ತಿತರರಿದ್ದು ಸ್ವಾಗತಿಸಿದರು. | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕ್ರಮ ಕೈಗೊಳ್ಳಲಾಗಿದೆ, ಜತೆಗೆ ಇಲಾಖೆಯ ಆದೇಶಗಳನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿದ್ದು, ತಮ್ಮ ಫಲಿತಾಂಶ ಉತ್ತಮಪಡಿಸುವ ಪ್ರಯತ್ನಕ್ಕೆ ಇಲಾಖೆಯ ಸಹಕಾರ ಇದ್ದೇ ಇರುತ್ತದೆ.

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಒಟ್ಟಾಗಿ ಶ್ರಮಿಸೋಣ, ನನ್ನ ತವರು ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಮುಖ್ಯಶಿಕ್ಷಕರು, ಶಿಕ್ಷಕರಿಗೆ ನೂತನ ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಮನವಿ ಮಾಡಿದರು.

ಶಾಲಾ ಶಿಕ್ಷಣ ಇಲಾಖೆ ನೂತನ ಉಪನಿರ್ದೇಶಕರಾಗಿ ಸೋಮವಾರ ಪ್ರಭಾರ ಉಪನಿರ್ದೇಶಕರಾಗಿದ್ದ ಶಿಕ್ಷಣಾಧಿಕಾರಿ ವೀಣಾರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ನಾನು ಹಾಸನ ಜಿಲ್ಲೆಯವಳಾಗಿದ್ದರೂ, ನನ್ನ ತಾಯಿಯ ಮನೆ ಕೋಲಾರ ತಾಲೂಕಿನ ಕ್ಯಾಲನೂರು, ಈವರೆಗೂ ರಾಜ್ಯ ಶಾಲಾ ಶಿಕ್ಷಣ ಆಯುಕ್ತರ ಕಚೇರಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಇದೇ ಮೊದಲ ಬಾರಿಗೆ ಡಿಡಿಪಿಐ ಆಗಿ ಪದೋನ್ನತಿ ಹೊಂದಿ ಬಂದಿದ್ದು, ಕೆಲಸ ನಿರ್ವಹಿಸಲು ನನ್ನ ತಾಯಿ ತವರು ಜಿಲ್ಲೆಯಲ್ಲೇ ಅವಕಾಶ ಸಿಕ್ಕಿರುವುದು ಸಂತಸದ ವಿಷಯ ಎಂದರು.

ಕೋಲಾರ ಜಿಲ್ಲೆ ಕಳೆದ ವರ್ಷ ಹೊರತುಪಡಿಸಿದರೆ ಕಳೆದ ಏಳೆಂಟು ವರ್ಷಗಳ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ, ಈ ನಿಟ್ಟಿನಲ್ಲಿ ಜಿಲ್ಲೆಯ ಫಲಿತಾಂಶ ಉತ್ತಮಪಡಿಸುವ ಮೂಲಕ ಜಿಲ್ಲೆಯ ಘನತೆ ಹೆಚ್ಚಿಸುವ ಕೆಲಸವನ್ನು ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ ಶಿಕ್ಷಕರು, ಮುಖ್ಯಶಿಕ್ಷಕರು ಒಟ್ಟಾಗಿ ನಿರ್ವಹಿಸಬೇಕಿದೆ ಎಂದರು.

ಕಡತ ವಿಲೇವಾರಿ ಶೀಘ್ರ ಮುಗಿಸಿ:

ಶಿಕ್ಷಕರನ್ನು ಕಚೇರಿಗಳಿಗೆ ಅಲೆಸಬೇಡಿ, ಶಿಕ್ಷಕರ ವೇತನ, ಬಡ್ತಿ ಮತ್ತಿತರ ಯಾವುದೇ ಕಡತಗಳು ಬಂದರೆ ಕೂಡಲೇ ವಿಲೇವಾರಿ ಮಾಡಿ ಎಂದು ಅಧಿಕಾರಿ, ಸಿಬ್ಬಂದಿಗೆ ತಾಕೀತು ಮಾಡಿದರು.

ಶಿಕ್ಷಕರಿಗೂ ಸಮಸ್ಯೆಗಳಿದ್ದು, ತಮ್ಮ ಹಂತದಲ್ಲಿ ಪರಿಹರಿಸಬಹುದಾದವುಗಳನ್ನು ಸೂಕ್ತ ಸಮಯದಲ್ಲಿ ಪರಿಹರಿಸುವುದಾಗಿ ತಿಳಿಸಿದ ಅವರು, ಒಟ್ಟಾರೆ ಕಚೇರಿಯಲ್ಲಿ ಕಡತಗಳ ವಿಲೇವಾರಿಗೆ ಮೊದಲ ಆದ್ಯತೆ ನೀಡಿ ಎಂದರು.

ಅಧಿಕಾರ ಹಸ್ತಂತರಿಸಿ ಸ್ವಾಗತಿಸಿದ ಹಿರಿಯ ಶಿಕ್ಷಣಾಧಿಕಾರಿ ವೀಣಾ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕ್ರಮ ಕೈಗೊಳ್ಳಲಾಗಿದೆ, ಜತೆಗೆ ಇಲಾಖೆಯ ಆದೇಶಗಳನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿದ್ದು, ತಮ್ಮ ಫಲಿತಾಂಶ ಉತ್ತಮಪಡಿಸುವ ಪ್ರಯತ್ನಕ್ಕೆ ಇಲಾಖೆಯ ಸಹಕಾರ ಇದ್ದೇ ಇರುತ್ತದೆ ಎಂದರು.

ಕೋಲಾರದ ಮೊದಲ ಮಹಿಳಾ ಡಿಡಿಪಿಐ:

ಕೋಲಾರ ಜಿಲ್ಲೆಯ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾಗಿ ಅಲ್ಮಾಸ್ ಪರ್ವೀನ್ ತಾಜ್ ಸೋಮವಾರ ಅಧಿಕಾರ ಸ್ವೀಕರಿಸಿದ್ದು, ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಹಿಳೆ ಉಪನಿರ್ದೇಶಕರಾಗಿ ನೇಮಕವಾಗಿರುವುದು ದಾಖಲೆಯಾಗಿದೆ.

ಡಿವೈಪಿಸಿಗಳಾದ ಸಹೀದಾ ನಹೀದಾ ಫಾತಿಮಾ, ರಾಜೇಶ್ವರಿ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲಾ, ಬಬಿತಾ, ತಾಂತ್ರಿಕ ಸಹಾಯಕರಾದ ಶರಣಪ್ಪ ಜಮಾದಾರ್, ದೈಹಿಕ ಶಿಕ್ಷಣ ಅಧೀಕ್ಷಕ ಚಂದ್ರಶೇಖರ್, ವ್ಯವಸ್ಥಾಪಕ ಗೋವಿಂದಗೌಡ, ಅಧೀಕ್ಷಕರಾದ ಕೇಶವರೆಡ್ಡಿ, ಲೆಕ್ಕಾಧಿಕಾರಿ ದಿನೇಶ್‌ಬಾಬು, ರವೀಂದ್ರ, ಚಿರಂಜೀವಿ, ಬೆಂಜಮೀನ್ ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ