ಅಳ್ನಾವರ: ಮನೆಗಳಿಗೆ ನುಗ್ಗಿದ ಮಳೆ ನೀರು

KannadaprabhaNewsNetwork |  
Published : Aug 17, 2024, 12:47 AM IST
ಅಳ್ನಾವರದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಇಂದಿರಾ ನಗರದ ಮನೆಗಳಿಗೆ ನೀರು ನುಗ್ಗಿರುವ ದೃಶ್ಯ | Kannada Prabha

ಸಾರಾಂಶ

ಇಂದಿರಾನಗರ ಮತ್ತು ನೆಹರುನಗರ ಬಡಾವಣೆಗಳ ಬಹುತೇಕ ಮಳೆಯ ನೀರು ಈ ಶಾಲಾ ಮೈದಾನದ ಮೂಲಕ ಹರಿದು ಹಳ್ಳ ಸೇರುತ್ತದೆ. ಈ ನೀರು ಹರಿದು ಹೋಗಲು ಮೈದಾನದ ಮಧ್ಯದಲ್ಲಿ ನಿರ್ಮಿಸಿದ ಚರಂಡಿ ಅವೈಜ್ಞಾನಿಕವಾಗಿದೆ.

ಅಳ್ನಾವರ:

ಶುಕ್ರವಾರ ಸಂಜೆ ಸುರಿದ ಮಳೆಗೆ ಪಟ್ಟಣದ ಇಂದಿರಾ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಗೃಹ ಬಳಕೆಯ ವಸ್ತುಗಳು ಹಾನಿಯಾಗಿವೆ.

ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಬಿಸಿಲು ಆವರಿಸಿದ್ದು, ಶುಕ್ರವಾರ ಸಂಜೆ ಒಂದೂವರೆ ಗಂಟೆ ಸುರಿದ ಭಾರಿ ಮಳೆಗೆ ಇಂದಿರಾನಗರದ ೫ನೇ ವಾರ್ಡ್‌ನ ರಸ್ತೆಗಳ ಮೇಲೆ ನೀರು ಹರಿದು ಮನೆಗಳಿಗೆ ನುಗ್ಗಿದೆ. ಈ ವೇಳೆ ಕೆಲ ಮನೆಯ ಸದಸ್ಯರು ನೀರು ಹೊರ ಹಾಕುತ್ತಿದ್ದರೆ, ಇನ್ನೂ ಕೆಲವರು ಮನೆಯಲ್ಲಿರುವ ಹಾಸಿಗೆ, ಬೆಳೆಬಾಲುವ ವಸ್ತುಗಳು ಮತ್ತು ಮಕ್ಕಳನ್ನು ಹೊತ್ತುಕೊಂಡು ನಿಂತಿರುವ ದೃಶ್ಯಗಳು ಕಂಡುಬಂದವು. ಇಲ್ಲಿನ ಮಿಲ್ಲತ್ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೀರು ನಿಂತಿದ್ದು ಪ್ರಾಥಮಿಕ ಶಾಲೆಯ ಕೊಠಡಿಗಳಲ್ಲಿಯೂ ನೀರು ನುಗ್ಗಿದೆ.

ನದಿಯಂತಾದ ರಸ್ತೆ:

ಇಲ್ಲಿನ ಶಾಲೆಯ ಬಾಗಿಲು ವರೆಗಿನ ರಸ್ತೆ ಮೇಲೆ ಅಪಾರ ಪ್ರಮಾಣದ ಮಳೆ ನೀರು ನಿಂತ ಪರಿಣಾಮ ವಿದ್ಯಾರ್ಥಿಗಳು ಕೈಯಲ್ಲಿ ಬ್ಯಾಗ್‌, ಚಪ್ಪಲಿ ಹಿಡಿದು ಕೊಳಚೆ ನೀರಿನಲ್ಲಿ ಹೊರಬಂದರು.

ಅವೈಜಾನಿಕ ಚರಂಡಿ:

ಪಟ್ಟಣದ ಇಂದಿರಾನಗರ ಮತ್ತು ನೆಹರುನಗರ ಬಡಾವಣೆಗಳ ಬಹುತೇಕ ಮಳೆಯ ನೀರು ಈ ಶಾಲಾ ಮೈದಾನದ ಮೂಲಕ ಹರಿದು ಹಳ್ಳ ಸೇರುತ್ತದೆ. ಈ ನೀರು ಹರಿದು ಹೋಗಲು ಮೈದಾನದ ಮಧ್ಯದಲ್ಲಿ ನಿರ್ಮಿಸಿದ ಚರಂಡಿ ಅವೈಜ್ಞಾನಿಕವಾಗಿದ್ದು, ನೀರು ಹರಿದು ಹೊರಗೆ ಹೋಗುವ ಬದಲು ಶಾಲಾ ಕೊಠಡಿ ಸೇರುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದರೂ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಚರಂಡಿ ನಿರ್ಮಿಸಿದ್ದು ಪ್ರಯೋಜನಕ್ಕೆ ಬಾರದಂತಾಗಿದೆ. ಸ್ಥಳೀಯ ಜನರಿಂದ ದೂರುಗಳು ಬಂದರೂ ಅಧಿಕಾರಿ ವರ್ಗದವರು ಹಾರಿಕೆ ಉತ್ತರ ನೀಡುವುದನ್ನು ಬಿಟ್ಟರೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿಲ್ಲ. ಈ ಅವ್ಯವಸ್ಥೆಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಸಹ ಯಾವುದೇ ಚಕಾರ ಎತ್ತದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಯಿಂದಾಗಿ ಮಳೆ ಬಂದಾಗ ಇಂದಿರಾ ಬಡಾವಣೆಯಲ್ಲಿ ಈ ರೀತಿಯ ಅವಘಡಗಳು ಸಂಭವಿಸುತ್ತಿವೆ. ಪಪಂ ಮತ್ತು ತಾಲೂಕಾಡಳಿತ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ ಪವಾರ ಹೇಳಿದರು.ಪ್ರತಿ ಬಾರಿ ಮಳೆ ಬಂದಾಗಲೂ ನಮ್ಮ ಮನೆಗಳಿಗೆ ನೀರು ನುಗ್ಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೆ ನೀವು ಎತ್ತರದಲ್ಲಿ ಮನೆ ನಿರ್ಮಿಸಿಕೊಳ್ಳಿ ಎನ್ನುತ್ತಾರೆ. ನಾವು ಬಡವರು ಎಲ್ಲಿಂದ ಮನೆ ಕಟ್ಟಿಕೊಳ್ಳೋಣ, ನಮ್ಮ ಪರಿಸ್ಥಿತಿಗೆ ಇಲ್ಲಿನ ಆಡಳಿತ ವ್ಯವಸ್ಥೆಯೆ ಕಾರಣ ಎಂದು ಸಿಮ್ರಾನ ಮುಲ್ಲಾ ಒತ್ತಾಯಿಸಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ