ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಇಂದು ನಮ್ಮ ದೇಶ ಭಕ್ತಿಯನ್ನು ಪ್ರದರ್ಶಿಸುವ ಮತ್ತು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರನ್ನು ಸ್ಮರಿಸುವ ದಿನವಾಗಿದೆ ಎಂದು ಚಟ್ಟರಕಿ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ನುಡಿದರು.ಪಟ್ಟಣದ ಮುಖ್ಯ ಬಜಾರದಲ್ಲಿರುವ ಸೈನಿಕ ಮೈದಾನದ ಆವರಣದಲ್ಲಿ ಕಾರ್ಗಿಲ್ ವೀರಯೋಧರ ಸ್ಮಾರಕ ಸಮೀತಿ ವತಿಯಿಂದ ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸತತ 85 ದಿನಗಳ ಹೋರಾಟದ ಫಲವಾಗಿ ಜಯ ಸಾಧಿಸುವ ಮೂಲಕ ಸಂತಸ ಹಾಗೂ ದುಃಖ ಎರಡನ್ನು ಸಮ್ಮಿಳಿತ ಮಾಡಿಕೊಂಡು ಕಾರ್ಗಿಲ್ ವಿಜಯೋತ್ಸವ ಆಚರಿಸಕೊಂಡು ಬರಲಾಗುತ್ತಿದೆ. ಇಂದು ಹೆತ್ತ ತಂದೆ- ತಾಯಂದಿಯರು ತಮ್ಮ ಮಕ್ಕಳಿಗೆ ಗುಣಮಟ್ಟ ಶಿಕ್ಷಣದ ಜತೆಗೆ ದೇಶಪ್ರೇಮ, ಧರ್ಮ, ಸಂಸ್ಕೃತಿ, ಪರಂಪರೆಯ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.ತಾಲೂಕಿನ ಬಳವಾಟ ಗ್ರಾಮದ ಲೆಪ್ಟಿನೆಂಟ್ ಕರ್ನಲ್ ಶಿವಾನಂದ ಬಿರಾದಾರ ಹಾಗೂ ನಿವೃತ್ತ ಕರ್ನಲ್ ಸತೀಶ ದೇಶಪಾಂಡೆ ಮಾತನಾಡಿ, ಸೈನಿಕರಾಗಿ ಸೇವೆಯನ್ನು ಹೋಗಳಿದರೇ ಸಾಲದು. ಸೈನಿಕರ ಕುಟುಂಬಗಳಿಗೆ ಸರ್ಕಾರಗಳು ಸಹಕಾರ ಹಾಗೂ ಸರ್ಕಾರದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಸಿಗುವಂತೆ ನೋಡಿಕೊಳ್ಳಬೇಕಿದೆ. ಏಕೆಂದರೇ ಸಣ್ಣ ಸೌಲಭ್ಯ ಪಡೆದುಕೊಳ್ಳಬೇಕಾದರೂ ಸಹಿತ ತಾಲೂಕುಮಟ್ಟದ, ಜಿಲ್ಲಾಮಟ್ಟದ ಅಧಿಕಾರಿಗಳು ಸಕಾರತ್ಮಕ ಸ್ಪಂದನೆ ನೀಡದೇ ಕಚೇರಿಗೆ ಅಲೆದಾಡುವಂತೆ ಮಾಡುತ್ತಿರುವ ಘಟನೆಗಳನ್ನು ಕಂಡಿದ್ದೇವೆ. ಇದರಿಂದಾಗಿ ಸೈನಿಕ ಹುದ್ದೆಗೆರಲು ಕೆಲವು ಜನ ಹಿಂಜರಿಯುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಸೈನಿಕ ಯಾವುದೇ ಮೂಲಭೂತ ಸೌಲಭ್ಯಗಳಿಗೆ ಅವುಗಳನ್ನು ವಿಶೇಷ ಕೋಟಾದಡಿಯಲ್ಲಿ ತ್ವರಿತ ಗತಿಯಲ್ಲಿ ಒದವಗಿಸುವಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.ಮಹಾರಾಷ್ಟ್ರ ಸರ್ಕಾರದ ಗೃಹ ಇಲಾಖೆಯ ವಿಶೇಷ 8 ಕಮಾಂಡೆಟ್ ಮತ್ತು ಹಿರಿಯ ಸಿಬ್ಬಂದಿ ಅಧಿಕಾರಿ ರಾಜೇಶ್ವರಿ ಕೋರಿ ಮಾತನಾಡಿ, ದೇಶದಲ್ಲಿ ಸೈನಿಕ ಹುದ್ದೆಗೆರಲು ಕೇವಲ ಪುರುಷರು ಮಾತ್ರ ಅಲ್ಲ ಯುವತಿಯರೂ ಕೂಡ ಸೈನಿಕರಾಗಿ ದೇಶದ ಸೇವೆ ಸಲ್ಲಿಸಬಹುದಾಗಿದೆ. ಜತೆಗೆ ಇಂಡಿಯನ್ ನೇವಿ(ಹಡಗು ಬಂದರು) ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶವಿದೆ. ಯಾವುದೇ ಭಯವಿಲ್ಲದೇ ಸೈನಿಕರಾಗುವ ಮೂಲಕ ಸ್ತ್ರೀ ಎಲ್ಲ ರಂಗದಲ್ಲೂ ಮುಂದೆ ಇದ್ದಾಳೆ ಎನ್ನುವುದನ್ನು ಸಾಧಿಸಿ ತೊರಿಸಬೇಕು ಎಂದು ತಿಳಿಸಿದರು.ಈ ವೇಳೆ ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ವೀರ ಮರಣ ಹೊಂದಿದ ದಾವಲಸಾಬ್ ಕಂಬಾರವರ ಮನೆಯಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ, ಬಸವೇಶ್ವರ ವೃತ್ತದಿಂದ ಸೈನಿಕ ಮೈದಾನದವರಿಗೆ ವಿವಿಧ ಕಲಾ ತಂಡಗಳಿಂದ, ಶಾಲಾ ವಿದ್ಯಾರ್ಥಿಗಳಿಂದ, ನಿವೃತ್ತ ವೀರಯೋಧರ ಸಂಘದಿಂದ ಜ್ಯೋತಿಯಾತ್ರ ನಡೆಸಲಾಯಿತು.ತಾಳಿಖೊಟಿ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಪುರಸಭರೆ ಮುಖ್ಯಧಿಕಾರಿ ಮಲ್ಲನಗೌಡ ಬಿರಾದಾರ, ಮಹಾಂತೇಶ ಬೂದಿಹಾಳಮಠ, ಅಧ್ಯಕ್ಷ ಚಂದ್ರಶೇಖರ ಕಲಾಲ, ಉಪಾಧ್ಯಕ್ಷ ಶ್ರೀಕಾಂತ ಹಿರೇಮಠ, ಪ್ರಧಾನ ಕಾರ್ಯದರ್ಶಿ ಪುನಿತ್ ಹಿಪ್ಪರಗಿ, ಸಂತೋಷ ಬಾದರಬಂಡಿ, ಆನಂದ ತುಪ್ಪದ, ರಾಜು ಬಳ್ಳೋಲಿ, ರವೀಂದ್ರ ಬಿರಾದಾರ, ಶೇಖರ ಢವಳಗಿ, ಹಣಮಂತ ನಲವಡೆ, ರಾಜಶೇಖರ ಹೊಳಿ ಸೇರಿದಂತೆ ಹಲವರು ಇದ್ದರು. ಉದಯ ರಾಯಚೂರ ನಿರೂಪಿಸಿದರು. ಬಸವವರಾಜ ನಂದಿಕೇಶ್ವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರತಿ ಭಾರತೀಯರೂ ಕಾರ್ಗಿಲ್ ಯುದ್ಧವನ್ನು ಮರೆಯಲು ಸಾಧ್ಯವೇ ಇಲ್ಲ. ಈ ಯುದ್ಧದಲ್ಲಿ ಭಾರತಿಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ದೇಶದ ಘನತೆ, ಸಾಹಸವನ್ನು ಎತ್ತಿಹಿಡಿದ್ದಾರೆ. ಇವರ ತ್ಯಾಗ ಬಲಿದಾನ ದೇಶಪ್ರೇಮ ಎಲ್ಲ ಭಾರತಿಯರಿಗೂ ಸ್ಫೂರ್ತಿಯಾಗಬೇಕಿದೆ. ನಿಟ್ಟಿನಲ್ಲಿ ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿಯವರು 25ನೇ ಕಾರ್ಗಿಲ್ ವಿಜಯೋತ್ಸವವನ್ನು ಅದ್ಧೂರಿಯಿಂದ ಆಚರಿಸುವ ಮೂಲಕ ಯುದ್ಧದಲ್ಲಿ ಮಡಿದ ಸೈನಿಕರ(ಯೋಧರ) ಕುಟುಂಬವನ್ನು ಕರೆದು ಸನ್ಮಾನಿಸಿ ಗೌರವಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ.
-ಅಭಿನವ ರುದ್ರಮುನಿ ಶಿವಾಚಾರ್ಯರು, ಚಟ್ಟರಕಿ ಯಂಕಂಚಿ ಹಿರೇಮಠ.