ಪಠ್ಯದ ಜತೆಗೆ ಕೃಷಿ ಮರೆಯಬಾರದು: ಶಾಸಕ ಭೀಮಣ್ಣ

KannadaprabhaNewsNetwork | Published : Aug 14, 2024 12:45 AM

ಸಾರಾಂಶ

ರೈತರ ಮಗ ಎಂಬ ಅಭಿಮಾನ ಎಲ್ಲರೂ ಬೆಳೆಸಿಕೊಳ್ಳಬೇಕು. ಯಾವುದೇ ಹಂತಕ್ಕೆ ತೆರಳಿದರೂ ರೈತಾಪಿ ಬದುಕು ಮರೆಯಬಾರದು. ಕೃಷಿಯ ಜತೆ ಬೆಳೆಯಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಶಿರಸಿ: ಪಠ್ಯದ ಜತೆಗೆ ಕೃಷಿ ಮರೆಯಬಾರದು. ಕೃಷಿ ಹಾಗೂ ಕೃಷಿ ಅವಲಂಬಿತ ಕುಟುಂಬಗಳಿಂದ ನಾಡು ಊಟ ಮಾಡುತ್ತಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಸೋಮವಾರ ತಾಲೂಕಿನ ಬಂಡಲ ಪ್ರೌಢಶಾಲೆಯಲ್ಲಿ ಎಂ.ಎಚ್. ಮರಿಗೌಡ ದಿನಾಚರಣೆ ಅಂಗವಾಗಿ ತರಕಾರಿ ಕಿಟ್ ವಿತರಿಸಿ ಮಾತನಾಡಿ, ಮಕ್ಕಳಿದ್ದಾಗಲೇ ತೋಟಗಾರಿಕೆ, ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಕೊಟ್ಟ ಬೀಜಗಳನ್ನು ನಾಟಿ ಮಾಡಬೇಕು. ಮನೆಗೆ ಒಯ್ದು ಇಡುವುದಲ್ಲ. ರೈತರ ಮಗ ಎಂಬ ಅಭಿಮಾನ ಎಲ್ಲರೂ ಬೆಳೆಸಿಕೊಳ್ಳಬೇಕು. ಯಾವುದೇ ಹಂತಕ್ಕೆ ತೆರಳಿದರೂ ರೈತಾಪಿ ಬದುಕು ಮರೆಯಬಾರದು. ಕೃಷಿಯ ಜತೆ ಬೆಳೆಯಬೇಕು ಎಂದರು.

ಹಸಿರು ಕ್ರಾಂತಿಯಿಂದ ನಮ್ಮ ದೇಶದಿಂದ ಆಹಾರ ಧಾನ್ಯ ರಫ್ತಾಗುತ್ತಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ಒಂದೊಪ್ಪತ್ತಿನ ಊಟಕ್ಕೆ ಸಮಸ್ಯೆ ಇತ್ತು. ಸ್ವಾತಂತ್ರ್ಯಾ ನಂತರ ಹಸಿರು ಕ್ರಾಂತಿ ಬಳಿಕ ಆದ ಸಾಧನೆಗೆ ತೋಟಗಾರಿಕಾ, ಕೃಷಿ ಇಲಾಖೆಯ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಬಿ.ಪಿ. ಸತೀಶ ಮಾತನಾಡಿ, ಎಂ.ಎಚ್. ಮರಿಗೌಡರು ತೋಟಗಾರಿಕಾ ಇಲಾಖೆಗೆ ಬಲ ಕೊಟ್ಟು ವಿಸ್ತಾರ ಮಾಡಿದವರು. ಅಲಂಕಾರಿಕಾ, ತರಕಾರಿಗೆ ಸೀಮಿತವಾಗಿದ್ದ ಇಲಾಖೆಯನ್ನು ವಿಸ್ತಾರಗೊಳಿಸಿದರು. ಮರಿಗೌಡರ ಅವಧಿಯಲ್ಲೇ ಪ್ರತ್ಯೇಕ ಇಲಾಖೆ ಬಂತು. ಮರಿಗೌಡರನ್ನು ತೋಟಗಾರಿಕಾ ಪಿತಾಮಹ ಎನ್ನುತ್ತಾರೆ. ನಾವು ತರಕಾರಿ, ಹಣ್ಣು, ಬೀಜಗಳನ್ನು ತಿಂದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದರು.

ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಪ್ರವೀಣ ಗೌಡ, ಸಂತೋಷ ಗೌಡ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಭಾಸ್ಕರ ಮರಾಠಿ, ಮಂಜುಗುಣಿ ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ, ಬಿಸಿಯೂಟ ಪ್ರಮುಖ ರವಿ ಬೆಂಚೊಳ್ಳಿ, ಮುಖ್ಯಾಧ್ಯಾಪಕಿ ಸವಿತಾ ನಾಯ್ಕ ಉಪಸ್ಥಿತರಿದ್ದರು.

ತೋಟಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಅಮರ ನಂಜುಡೇಶ್ವರ ಉಪನ್ಯಾಸ ನೀಡಿದರು. ತೋಟಗಾರಿಕಾ ಇಲಾಖೆ ಹಿರಿಯ ಉಪನಿರ್ದೇಶಕ ಸತೀಶ ಹೆಗಡೆ ಸ್ವಾಗತಿಸಿದರು. ಕಲ್ಪನಾ ನಾಯ್ಕ ನಿರೂಪಿಸಿದರು.

Share this article