ಕನ್ನಡಪ್ರಭ ವಾರ್ತೆ ಮದ್ದೂರು
ಪ್ರತಿಭಟನೆ ವೇಳೆ ದಲಿತ ಮುಖಂಡರ ಗುಂಪೊಂದು ಪೋಲಿಸ್ ಠಾಣೆಗೆ ತೆರಳಿ ತಹಸೀಲ್ದಾರ್, ಸಮಾಜ ಕಲ್ಯಾಣ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ದೂರು ನೀಡಿದ ಘಟನೆಯೂ ಜರುಗಿತು.
ಪಟ್ಟಣದ ಪುರಸಭೆ ಆವರಣದಲ್ಲಿ ಡಾ.ಅಂಬೇಡ್ಕರ್ 133 ನೇ ಜಯಂತಿ ಆಯೋಜಿಸಲಾಗಿತ್ತು. ಜಯಂತಿ ಆಚರಣೆ ಕುರಿತಂತೆ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆ ನಿರ್ಣಯದಂತೆ ತಾಲೂಕ ಕಚೇರಿ ಸೇರಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮತ್ತು ಅಂಬೇಡ್ಕರ್ ಪುತ್ಥಳಿ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಸೇರಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.ಆದರೆ, ಅಧಿಕಾರಿಗಳು ಪೂರ್ವಭಾವಿ ಸಭೆ ನಿರ್ಣಯಕ್ಕೆ ವಿರುದ್ಧವಾಗಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ದಲಿತ ಸಂಘಟನೆಗಳ ಮುಖಂಡರು ಅಂಬೇಡ್ಕರ್ ಪುತ್ಥಳಿ ಸುತ್ತಮುತ್ತ ತಾವೇ ಸ್ವಚ್ಛ ಮಾಡಿಕೊಂಡು ಮಾಲಾರ್ಪಣೆ ಮಾಡಿ ಸ್ಥಳದಲ್ಲೇ ಧರಣಿ ನಡೆಸಿದರು. ತಹಸೀಲ್ದಾರ್ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಬಂದ ಶಾಸಕ ಕೆ.ಎಂ. ಉದಯ್ ಅವರನ್ನು ದಲಿತ ಮುಖಂಡರು ಸುತ್ತುವರಿದು ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹ ಪಡಿಸಿದರು.
ತರುವಾಯ ವಿಷಯ ತಿಳಿದು ಠಾಣೆಗೆ ದೌಡಾಯಿಸಿದ ತಹಸೀಲ್ದಾರ್ ಸೋಮಶೇಖರ್ ದಲಿತ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಲೋಪದ ಬಗ್ಗೆ ಮುಖಂಡರಲ್ಲಿ ಕ್ಷಮೆಯಾಚನೆ ಮಾಡಿದರು. ತಪ್ಪಿತಸ್ಥ ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಜವಾಬ್ದಾರಿ ಹೊತ್ತಿರುವ ಸಿಬ್ಬಂದಿ ವಿರುದ್ಧ ಈ ಕೂಡಲೇ ಶಿಸ್ತು ಕ್ರಮ ಜರುಗಿಸಿ ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ತಹಸೀಲ್ದಾರ್ ಸೋಮಶೇಖರ್ ಭರವಸೆ ನೀಡಿದ ನಂತರ ದಲಿತ ಮುಖಂಡರು ಪ್ರತಿಭಟನೆ ವಾಪಸ್ ಪಡೆದರು.