ಕನ್ನಡಪ್ರಭ ವಾರ್ತೆ ಬೀದರ್
ಕಳೆದ 75 ವರ್ಷಗಳಿಂದ ನಮ್ಮ ಪ್ರಜಾಪ್ರಭುತ್ವದ ತಳಹದಿ ಇನ್ನೂ ಗಟ್ಟಿಯಾಗಿ ಇರಲು ಕಾರಣ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಜಗತ್ತಿಗೆ ಮಾದರಿಯಾದ ಸಂವಿಧಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.ಅವರು ಭಾನುವಾರ ಡಾ. ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ, ಡಾ.
ಅಂಬೇಡ್ಕರ್ ತಮ್ಮ ಮುಂದಾಲೋಚನೆ ಮೂಲಕ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ಅದು ಇಂದು ದೇಶದ ಎಲ್ಲಾ ಜನರ ಹಿತವನ್ನು ಕಾಪಾಡುತ್ತಿದೆ. ಅವರ ಜಯಂತಿ ಆಚರಿಸಿದರೆ ಸಾಲದು ಅವರ ಆದರ್ಶ ಮತ್ತು ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಎಲ್ಲರಿಗೂ ಶುಭಾಶಯಗಳು ಹೇಳಿದರು.ಜಿ.ಪಂ ಸಿಇಒ ಡಾ. ಗಿರೀಶ್ ಬದೋಲೆ ಮಾತನಾಡಿ, ಅಂಬೇಡ್ಕರ್ ಸಂವಿಧಾನದ ಪಿತಾಮಹ. ಮೊದಲ ಕಾನೂನು ಮಂತ್ರಿ ಹಾಗೂ ಶ್ರೇಷ್ಠ ಸಮಾಜ ಸುಧಾರಕ ಹಾಗೂ ಸ್ತ್ರೀ ಸಮಾನತೆಗಾಗಿ ಹೋರಾಡಿದ್ದರು ಮತ್ತು ಅಸ್ಪ್ರಶ್ಯತೆಯನ್ನು ವಿರೋಧಿಸಿದ್ದರು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಅಂಬೇಡ್ಕರ್ ಬೇರೆ-ಬೇರೆ ದೇಶಗಳ ಸಂಸ್ಕ್ರತಿ ಹಾಗೂ ಆ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಅದರಲ್ಲಿರುವ ಉತ್ತಮ ಅಂಶಗಳನ್ನು ತೆಗೆದುಕೊಂಡು ನಮ್ಮ ದೇಶಕ್ಕೆ ಅನ್ವಯವಾಗುವ ಸಂವಿಧಾನ ರಚಿಸಿದ್ದಾರೆ. ಹಾಗಾಗಿ ಇಂದು ನಮ್ಮ ದೇಶದಲ್ಲಿ ಕಾರ್ಮಿಕರ ಕಾನೂನು ಬಗ್ಗೆ ಅರಿವೂ ಬಂದಿದೆ. ಅವರಲ್ಲಿರುವ ಸಾಮರ್ಥ್ಯ ಹಾಗೂ ಜ್ಞಾನದಿಂದಲೇ ಅವರು ಬಹು ಎತ್ತರಕ್ಕೆ ಬೆಳೆದಿದ್ದರು ಎಂದು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ಬೀದರ್ ನಗರದಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್. ಎಲ್. ಸೇರಿದಂತೆ ಇತರೆ ಗಣ್ಯರು ಹೂ ಮಾಲೆ ಹಾಕುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸಿಂಧು ಎಚ್. ಎಸ್, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಎಂಎಲ್ಸಿ ಅರವಿಂದ ಅರಳಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ, ಮಾರುತಿ ಬೌದ್ದೆ, ಅನಿಲ ಬೆಲ್ದಾರ, ಫರ್ನಾಂಡಿಸ್ ಹಿಪ್ಪಳಗಾಂವ, ಉಮೇಶ ಸೊರಳ್ಳಿ, ವಿಜಯಕುಮಾರ ಸೋನಾರೆ, ಬಾಬು ಪಾಸ್ವಾನ್, ಶಿವಕುಮಾರ ನೀಲಿಕಟ್ಟಿ ಮಹೇಶ ಗೋರನಾಳಕರ, ರಮೇಶ ಪಾಟೀಲ ಸೋಲಪೂರ, ಅಮೃತರಾವ ಚಿಮಕೋಡೆ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.