ಬುದ್ಧ, ಬಸವಣ್ಣನವರ ನಂತರ ಸಮಾನತೆಗಾಗಿ, ಸಾಮಾಜಿಕ ಪರಿವರ್ತನೆಗಾಗಿ ಹೋರಾಡಿದವರು ಅಂಬೇಡ್ಕರ್. ದೇಶಕ್ಕೆ ಹಾಗೂ ನಮ್ಮ ಸಾಮಾಜಿಕ ಬದುಕಿಗೆ ಅಗತ್ಯವಾದಂತಹ ಸಂವಿಧಾನವನ್ನು ಕೊಟ್ಟಿದ್ದು ಅದು, ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವೆಂದು ಖ್ಯಾತಿ ಪಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು : ದೇಶದಲ್ಲಿ ಬುದ್ಧ, ಬಸವಣ್ಣನವರ ನಂತರ ಸಮಾನತೆಗಾಗಿ, ಸಾಮಾಜಿಕ ಪರಿವರ್ತನೆಗಾಗಿ ಹೋರಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್. ದೇಶಕ್ಕೆ ಹಾಗೂ ನಮ್ಮ ಸಾಮಾಜಿಕ ಬದುಕಿಗೆ ಅಗತ್ಯವಾದಂತಹ ಸಂವಿಧಾನವನ್ನು ಕೊಟ್ಟಿದ್ದು ಅದು, ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವೆಂದು ಖ್ಯಾತಿ ಪಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಂವಿಧಾನಶಿಲ್ಪಿ ಡಾ। ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯು ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಹೋರಾಟದ ಹಾದಿ ಹಾಗೂ ಸಂವಿಧಾನದ ಆಶಯಗಳಂತೆ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವುದೇ ಅವರಿಗೆ ನಾವು ಸಲ್ಲಿಸುವ ಗೌರವ. ಅದೇ ರೀತಿಯಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಅದರ ಆಶಯದಂತೆ ಸಮಾನತೆ ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಅಂಬೇಡ್ಕರ್ ಅವರು ತಮ್ಮ ಬದುಕನ್ನು ಸಾಮಾಜಿಕ ಹೋರಾಟದಲ್ಲಿ ಹಾಗೂ ಸಮಾಜದ ಪರಿವರ್ತನೆಗಾಗಿ ಮುಡಿಪಾಗಿಟ್ಟವರು. ಅವರು ಈ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದ ಶ್ರೇಷ್ಠತೆ ತಿಳಿಯಬೇಕಾದರೆ ಒಳ್ಳೆಯವರ ಕೈಯಲ್ಲಿ ಅನುಷ್ಟಾನವಾಗಬೇಕು. ಕೆಟ್ಟವರ ಕೈಗೆ ಹೋದರೆ ಕೆಟ್ಟದಾಗುತ್ತದೆ ಎಂದು ಅಂಬೇಡ್ಕರ್ ಅವರೇ ಸ್ಪಷ್ಟವಾಗಿ ಈ ದೇಶದ ಜನರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರು ಎಂದು ಸ್ಮರಿಸಿದರು.
ಅವರು ಕೇವಲ ದಲಿತರಿಗೆ ಮಾತ್ರ ಸಾಮಾಜಿಕ ಅವಕಾಶಗಳನ್ನು ದೊರಕಿಸಲು ಶ್ರಮಿಸಲಿಲ್ಲ. ಸಮಾಜದ ಎಲ್ಲ ಸಮುದಾಯಗಳ ಅವಕಾಶ ವಂಚಿತರು, ಶೋಷಣೆ, ಅನ್ಯಾಯ, ಅವಮಾನ, ದೌರ್ಜನ್ಯ ಒಳಪಟ್ಟ ಎಲ್ಲಾ ಜನರ ಪರವಾಗಿ ಕೆಲಸ ಮಾಡಿದ್ದರು. ಮೇಲು ಕೀಳೆಂಬ ಅಸಮಾನತೆ ಹೋಗಲಾಡಿಸಿ ಎಲ್ಲರೂ ಮನುಷ್ಯರು ಎನ್ನುವ ಸಮ ಸಮಾಜ ನಿರ್ಮಾಣಕ್ಕೆ ಅವರು ಶ್ರಮಿಸಿದರು. ಸಂವಿಧಾನದ ಧ್ಯೇಯೋದ್ದೇಶಗಳೂ ಅದನ್ನೇ ಹೇಳುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಾನವರು ಪರಸ್ಪರ ಪ್ರೀತಿಸಬೇಕು: ಭಾರತ ಬಹು ಧರ್ಮ, ಭಾಷೆ, ಸಂಸ್ಕೃತಿಗಳಿಂದ ಕೂಡಿರುವ ಬಹುತ್ವದ ದೇಶ. ಹಾಗಾಗಿ ಅಂಬೇಡ್ಕರ್ ಅವರು ಎಲ್ಲಾ ಧರ್ಮ, ಜಾತಿಗಳೂ ಸಮಾನವೆಂದು ಸಾರುವ ಮೂಲಕ ಮಾನವ ಧರ್ಮಕ್ಕೆ ಒತ್ತು ನೀಡಿದ್ದರು. ಮೂಲಭೂತವಾಗಿ ನಾವೆಲ್ಲಾ ಮನುಷ್ಯರು. ಮಾನವರು ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷ ಸಲ್ಲದು ಎಂದು ತಿಳಿಸಿಕೊಟ್ಟವರು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಇಂಧನ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವ ಎಚ್.ಆಂಜನೇಯ ಪಾಲ್ಗೊಂಡಿದ್ದರು.