ಕನ್ನಡಪ್ರಭ ವಾರ್ತೆ ಮೈಸೂರು
ಅಂಬೇಡ್ಕರ್ ಅವರ ಚಿಂತನೆಯಲ್ಲಿ ಬುದ್ಧನ ನಿರ್ವಿಕಾರ ತತ್ವ, ಕವಿಗಳ ತಾತ್ವಿಕ ಚಿಂತನೆ, ಜ್ಯೋತಿ ಬಾಫುಲೆ ಅವರ ಸಮಾನತೆಯ ರೂಪ ಅವರ ಹೃದಯದಲ್ಲಿ ಇವತ್ತಿಗೂ ಕೂಡ ಹಸಿರಾಗಿದೆ ಎಂಬುದನ್ನು ಈಗಲೂ ನೋಡಬಹುದು ಎಂದು ಚಿಂತಕ ಹಾಗೂ ವಿಶ್ರಾಂತ ಮುಖ್ಯ ಎಂಜಿನಿಯರ್ ಶಂಕರ ದೇವನೂರು ಹೇಳಿದರು.ನಗರದ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ನಡೆದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಪೂರ್ಣವಾಗಿ ಅರಿತುಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಅಂಬೇಡ್ಕರ್ ಅವರನ್ನು ಮಹಾ ಮೇದಾವಿ, ಜ್ಞಾನಿ ಎಂದು ಭಾರತೀಯರು ಹೇಳುವುದಿಲ್ಲ. ಆದರೆ ಪಾಶ್ಚಿಮಾತ್ಯ ಚಿಂತಕ ನಿಕೋಲಸ್ ಬೇವರ್ಲಿ ತಮ್ಮ ಕೃತಿಯಲ್ಲಿ ಅಂಬೇಡ್ಕರ್ ಅವರನ್ನು ಜಗತ್ತಿನ 5 ಮಂದಿ ಘನ ವಿದ್ವಾಂಸರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಒಬ್ಬರು ಒಂದು ಹೇಳಿದ್ದಾರೆ.
ಬದುಕು ಬೆಳಕಾಗಬೇಕು. ಬದುಕು ಬಯಲಾಗಬೇಕು ಇದೇ ಜೀವನ, ಮೌಲ್ಯ ಹಾಗೂ ಅಂಬೇಡ್ಕರ್. ನಮ್ಮ ಮನೆಯ ಮುಂದೆ ಯಾವುದಾದರೂ ಹೂವಿನ ಗಿಡ ಬೆಳೆಸಿದರೆ ಅದು ತನ್ನ ಸಾಧನೆಯನ್ನು ಒಂದು ಮೊಗ್ಗಿನಲ್ಲಿ ಕೂಡಿಡುತ್ತದೆ. ಆ ಮೊಗ್ಗು ಅರಳಿ ಕಾಲಾಂತರದಲ್ಲಿ ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಸೀಮಾತೀತವಾಗಿ ಪರಿಮಳ ಹರಡುತ್ತದೆ. ಹೀಗೆ ನಮ್ಮ ಬದುಕು ಕೂಡ ಹೂವಿನಂತಾಗಬೇಕು ಹಾಗೂ ಅಂಬೇಡ್ಕರ್ ಅವರಂತೆ ಆಗಬೇಕು. ಇದೇ ಜೀವನ ಎಂದರು.ಭಾರತದ ಸಮಗ್ರ ಸಮಾಜೋ-ಧಾರ್ಮಿಕ ಇತಿಹಾಸ ಅವಲೋಕನ ಮಾಡಿದಾಗ ಅನೇಕ ಧರ್ಮಗಳು ಈ ಜಗತ್ತಿನಲ್ಲಿ ಕಾಣಸಿಗುತವೆ. ಧರ್ಮ ಎಂದರೆ ಒಳ್ಳೆಯ ನಡವಳಿಕೆ, ದಯೆ, ಮಾನವೀಯತೆ ಆದರೆ ಮೃಗೀಯವಾಗಿದ್ದಂತಹ ಮನುಷ್ಯನನ್ನು ಮಾನವತೆಗೆ ಕರೆದೊಯ್ಯುವ ನೆಲೆಯಲ್ಲಿ ಧರ್ಮಗಳು ಮನುಷ್ಯನಿಗೆ ಸಹಕಾರಿಯಾಗಬೇಕಿತ್ತು. ಆದರೆ, ಮತೀಯವಾಗಿ, ಜಾತಿಗಳಾಗಿ ಹಾಗೂ ಜಾತಿಯ ವೃಕ್ಷದ ನೆರಳಿನಲ್ಲಿ ಬದುಕುತ್ತಿದ್ದೇವೆ ಎಂದು ಅವರು ವಿಷಾದಿಸಿದರು.
ಭಾರತ ಸ್ವಾತಂತ್ರ್ಯಗೊಳ್ಳುವುದರ ಜತೆಗೆ ಭರತ ಖಂಡದಲ್ಲಿ ಜನಿಸಿದ ಪ್ರತಿಯೊಬ್ಬರೂ ಕೂಡ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂದೆ ಬರಬೇಕೆಂಬ ದೃಢ ಸಂಕಲ್ಪದಿಂದ ಸಾರ್ವಕಾಲಿಕ ಸಂವಿಧಾನ ಕೊಟ್ಟ ಮಹಾನ್ ಚೇತನ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್. ಕಬೀರ್, ಬುದ್ಧ ಹಾಗೂ ಜ್ಯೋತಿಬಾಫುಲೆ ಅವರನ್ನು ಯಾಕೆ ಆದರ್ಶವನ್ನಾಗಿ ತೆಗೆದುಕೊಂಡಿದ್ದರು ಎಂಬುದನ್ನು ತಿಳಿದುಕೊಳ್ಳಬೇಕು. ಶಿಕ್ಷಣ ಪಡೆಯದೆ ಇದ್ದರೆ ಬುದ್ಧಿ ನಾಶವಾಗುತ್ತದೆ. ಬುದ್ಧಿ ನಾಶವಾದರೆ ನೈತಿಕತೆ ನಾಶವಾಗುತ್ತದೆ, ನೈತಿಕತೆ ನಾಶವಾದರೆ ಕ್ರೀಯಾಶೀಲತೆ ನಾಶವಾಗುತ್ತದೆ, ಕ್ರೀಯಾಶೀಲತೆ ನಾಶವಾದರೆ ವ್ಯಕ್ತಿ ಮೌಢ್ಯಕ್ಕೆ ದಾಸನಾಗುತ್ತಾನೆ ಎಂದು ಅರಿತ ಜ್ಯೋತಿಬಾಫುಲೆ ಹಿಂದುಳಿದವರಿಗೆ, ಅಸ್ಪೃಶ್ಯರಿಗೆ ಹಾಗೂ ಸ್ತ್ರೀಯರಿಗೂ ಶಿಕ್ಷಣ ನೀಡಲು ಮುಂದಾಗಿದ್ದರು ಎಂದರು.ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ, ಜ್ಞಾನ ವಾಹಿನಿಯ ಸಂಚಾಲಕ ಜಿ. ಕೃಷ್ಣಮೂರ್ತಿ, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಂ. ವೆಂಕಟೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಸಿ. ನಾಗೇಶ್ ಬಾಬು ಹಾಗೂ ಆಡಳಿತಾಧಿಕಾರಿ ಪ್ರೊ.ಕೆ. ಅಜಯ್ ಕುಮಾರ್ ಇದ್ದರು.