ಅಂಬೇಡ್ಕರ್ ಜಗತ್ತಿನ ಅಪ್ಪಟ ರಾಷ್ಟ್ರಪ್ರೇಮಿ

KannadaprabhaNewsNetwork | Published : Dec 7, 2024 12:34 AM

ಸಾರಾಂಶ

ರಾಮನಗರ: ದೇಶವನ್ನು ವಿಭಜಿಸಿಕೊಂಡು ಪ್ರಧಾನಿಯಾಗಬಹುದಾಗಿದ್ದ ಬಹುದೊಡ್ಡ ಅವಕಾಶವನ್ನು ದೂರ ತಳ್ಳಿ ಅಖಂಡ ಭಾರತವನ್ನು ಕಟ್ಟಲು ನಿರ್ಧರಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನ ಏಕೈಕ ಅಪ್ಪಟ ರಾಷ್ಟ್ರ ಪ್ರೇಮಿ ಎಂದು ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ ಹೇಳಿದರು.

ರಾಮನಗರ: ದೇಶವನ್ನು ವಿಭಜಿಸಿಕೊಂಡು ಪ್ರಧಾನಿಯಾಗಬಹುದಾಗಿದ್ದ ಬಹುದೊಡ್ಡ ಅವಕಾಶವನ್ನು ದೂರ ತಳ್ಳಿ ಅಖಂಡ ಭಾರತವನ್ನು ಕಟ್ಟಲು ನಿರ್ಧರಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನ ಏಕೈಕ ಅಪ್ಪಟ ರಾಷ್ಟ್ರ ಪ್ರೇಮಿ ಎಂದು ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ ಹೇಳಿದರು. ನಗರದ ಐಜೂರು ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ವರ್ಷದ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಪ್ರಪಂಚದ ಜನರು ಅಂಬೇಡ್ಕರ್ ಅವರನ್ನು ಮೇರು ಮಟ್ಟದಲ್ಲಿ ಕೊಂಡಾಡುತ್ತಿದ್ದಾರೆ. ಭಗವಾನ್ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದ ಅಂಬೇಡ್ಕರ್ ಅವರು ಅಪ್ಪಟ ರಾಷ್ಟ್ರಪ್ರೇಮಿಯಾಗಿದ್ದರು. ಅವರು ಭಾರತವನ್ನು ವಿಭಜನೆ ಮಾಡಲು ಇಷ್ಟಪಟ್ಟಿರಲಿಲ್ಲ ಎಂದು ಹೇಳಿದರು.

ಇಂದು ಸಣ್ಣ ಅವಕಾಶವನ್ನು ಬಿಡಲು ಯಾರು ಮುಂದಾಗುವುದಿಲ್ಲ. ಅಂಬೇಡ್ಕರ್ ಅವರ ವಿದ್ಯೆ ತಿಳಿವಳಿಕೆಗೆ ಬಹುದೊಡ್ಡ ವಾಣಿಜ್ಯೋದ್ಯಮಿಯಾಗಿ ಬೆಳೆಯಬಹುದಿತ್ತು. ಅವರಿಗಿದ್ದ ಅಗಾಧ ಜ್ಞಾನಕ್ಕೆ ವಿದೇಶದಲ್ಲಿ ಉನ್ನತ ಹುದ್ದೆ ಸಿಗುತ್ತಿತ್ತು. ಆದರೆ ಆದಾವುದನ್ನು ಇಷ್ಟಪಡದ ವ್ಯಕ್ತಿ ಅವರಾಗಿದ್ದರು. ಬಾಬಾ ಸಾಹೇಬರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳ ಬೇಕಾಗಿರುವುದು ಇಂದಿನ ದಿನಗಳಲ್ಲಿ ಯುವ ಪೀಳಿಗೆಗೆ ಅವಶ್ಯಕವಾಗಿದೆ. ದೇಶದ ಜನತೆ ಇಂತಹ ಮಹಾಪುರುಷನ ನೆನಪು ಮಾಡಿಕೊಳ್ಳಬೇಕು. ಅವರಿಗೆ ನಾವು ಋಣಿಯಾಗಿರಬೇಕಾಗಿದೆ ಎಂದು ಗೋವಿಂದಯ್ಯ ತಿಳಿಸಿದರು.

ಪ್ರಾಧ್ಯಾಪಕ ಜಗನ್ನಾಥ್ ಮಾತನಾಡಿ, ಡಾ.ಅಂಬೇಡ್ಕರ್ ಅವರು ನಮ್ಮನ್ನಗಲಿ 68 ವರ್ಷವಾಗಿವೆ. ಅಂಬೇಡ್ಕರ್ ಅವರು ಒಬ್ಬ ತತ್ವಜ್ಞಾನಿ, ವಿದ್ವಾಂಸರು, ಸಕಲ ಪಾಂಡಿತ್ಯ ಹೊಂದಿದ್ದರು. ಅವರ ವಿಚಾರಧಾರೆಗಳು ಇಂದು ಪ್ರಪಂಚದಲ್ಲಿ ಪ್ರಚಲಿತವಾಗಿವೆ.

ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಪ್ರಪಂಚವೇ ಕೊಂಡಾಡುತ್ತಿದೆ. ಸಂವಿಧಾನ ನಮಗೆ ಕೊಟ್ಟ ನಂತರ ಅನೇಕ ಕ್ರಾಂತಿಕಾರಿ ಬದಲಾವಣೆಗಳು ದೇಶದಲ್ಲಿ ಆಗಿವೆ ಎನ್ನುವುದಕ್ಕೆ ಹಲವಾರು ಸಾಕ್ಷಿಗಳು ಸಿಗುತ್ತವೆ. ಅಂತಹ ಮಹಾವ್ಯಕ್ತಿಯ ಬರಹ, ಚಿಂತನೆಗಳನ್ನು ಗೌರವಿಸುವ ಮೂಲಕ ನಾವು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ದಲಿತ ಮುಖಂಡ ಶಿವಕುಮಾರಸ್ವಾಮಿ ಮಾತನಾಡಿ, ಹಿಂದೆ ಜನರು ಸಾಮಾಜಿಕ, ಶೈಕ್ಷಣಿಕವಾಗಿ ಸಾಕಷ್ಟು ನೊಂದಿದ್ದರು. ಅಂತಹ ಜನತೆಗೆ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ನೆಮ್ಮದಿ ಜೀವನ ಕಲ್ಪಿಸಿಕೊಟ್ಟವರು. ಆದರೆ ಇಂದು ಡಾ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಬದಲಾವಣೆ ತರುವಂತೆ ಹಲವಾರು ಮಠಗಳ ಯತಿಗಳು ವಿಚಾರ ಹೇಳುತ್ತಿದ್ದಾರೆ. ಅಂಬೇಡ್ಕರ್ ಅವರು ಶಾಂತಿ, ಸಮಾನತೆ ಒಂದೇ ನಿಟ್ಟಿನಲ್ಲಿ ಉತ್ತಮ ಸಂವಿಧಾನ ದೇಶಕ್ಕೆ ನೀಡಿದ್ದಾರೆ. ಅಂತಹ ಸಂವಿಧಾನ ಬದಲಾವಣೆ ಯಾರೂ ಬಯಸುವುದು ಬೇಡ ಎಂದರು.

ಕಾರ್ಯಕ್ರಮದಲ್ಲಿ ಹಾರೋಹಳ್ಳಿ ಚಂದ್ರು, ನವೀನ್ ಸಜ್ಜೆನಿಂಗಯ್ಯ, ಗೋವಿಂದರಾಜು ಮಾತನಾಡಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ತಮಟೆ ಭಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಸಮತಾ ಸೈನಿಕದಳ ಜಿಲ್ಲಾಧ್ಯಕ್ಷ ಕಬ್ಬಾಳು ಲಕ್ಷ್ಮಣ್, ನಗರಘಟಕ ಅಧ್ಯಕ್ಷ ಸುರೇಶ್, ಮುಖಂಡರಾದ ವೆಂಕಟೇಶ್, ಹರೀಶ್, ಮರಳವಾಡಿ ಮಂಜು, ಅಪ್ಪಗೆರೆ ಶ್ರೀನಿವಾಸ್, ಗೋವಿಂದು, ಲೋಕೇಶ್, ಮಹಾದೇವ್, ಸದಾಕುಮಾರ್, ಕಿರಣ್ ಕುಮಾರ್, ಸಾಗರ್, ಸ್ವರೂಪ್, ಗೋಪಿ, ಶಿವಕುಮಾರ್, ವಿನೋದ್, ಸಿದ್ದರಾಜು ಉಪಸ್ಥಿತರಿದ್ದರು.

6ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ವರ್ಷದ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

Share this article