ಹೊನ್ನಾವರ: ತಾಲೂಕಿನ ಕುದ್ರಿಗಿ ಜನತೋಳಕೇರಿಯ ಶ್ರೀ ಚೌಡೇಶ್ವರಿ ಸಾಂಸ್ಕೃತಿಕ ಕ್ರೀಡಾ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 133ನೇ ಜನ್ಮದಿನಾಚರಣೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ್ ರವಿರಾಜ ದೀಕ್ಷಿತ್ ಅವರು, ಚಿಕ್ಕ ಹಳ್ಳಿಯಾದರೂ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಅಂಬೇಡ್ಕರ್ ಅವರು ವಿದ್ಯೆಗೆ ಮಹತ್ವ ನೀಡಿ ಎಂದಿದ್ದರು. ಎಲ್ಲರಿಗೂ ಸಮಾನತೆ ಹಕ್ಕಿರಬೇಕೆಂದು ಬಯಸಿದ್ದರು. ಅವರ ಜಯಂತಿಯಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿರುವುದು ಅರ್ಥಪೂರ್ಣವಾಗಿದೆ ಎಂದರು.ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎನ್.ಜಿ. ಆನಂದ್ ಮಾತನಾಡಿ, ಅಂಬೇಡ್ಕರ್ ಅವರು ಶಿಕ್ಷಣಕ್ಕೆ ನೀಡಿದ ಒತ್ತನ್ನು ಪ್ರೇರಣೆಗೊಂಡು, ಶಿಕ್ಷಣದ ಮಹತ್ವ ಅರಿತು ಸಂಘಟನೆಯವರು ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಿಸಿದ್ದಾರೆ. ಎಷ್ಟೇ ಕಷ್ಟವಾದರೂ ವಿದ್ಯಾಭ್ಯಾಸದಿಂದ ವಂಚಿತರಾಗಬೇಡಿ. ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ, ಉನ್ನತ ಹುದ್ದೆ ಅಲಂಕರಿಸಿ ದೇಶಕ್ಕೆ ಕೊಡುಗೆ ನೀಡಿ ಎಂದು ಮಕ್ಕಳಿಗೆ ಕರೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜದಲ್ಲಿದ್ದ ಅಸ್ಪೃಶ್ಯತೆ ಹೋಗಲಾಡಿಸಲು ಶ್ರಮಿಸಿದರು. ಎಲ್ಲರಿಗೂ ಸಮಾನವಾದ ಅವಕಾಶ ನೀಡಬೇಕೆನ್ನುವುದನ್ನು ಪ್ರತಿಪಾದಿಸಿದವರು. ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು ಎಂದರು.
ಸೀಮಾ ಮುಖ್ಯಪ್ರಾಣ ದೇವಸ್ಥಾನದ ಅರ್ಚಕ ಸೂರಾಲು ಚಂದ್ರಶೇಖರ್ ಭಟ್ ಮಾತನಾಡಿ, ವಿದ್ಯೆಯಿಂದ ಸಾಧನೆ ಮಾಡಬಹುದೆನ್ನುವುದನ್ನು ಅಂಬೇಡ್ಕರ್ ಅವರು ತೋರಿಸಿಕೊಟ್ಟಿದ್ದಾರೆ. ಅವರು ಯಾವುದೇ ಒಂದು ಸಮಾಜಕ್ಕೆ ಸಿಮೀತವಾದವರಲ್ಲ ಎಂದರು.ಸಂಘಟನೆ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆಗೈದ ಧನುಶ್ರೀ ನಾರಾಯಣ ಹಳ್ಳೇರ್ ಹಾಗೂ ಊರಿನ ಯಜಮಾನರಾದ ಅಪ್ಪು ಸುಕ್ರು ಹಳ್ಳೇರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ನೀಡಿ ಪ್ರೋತ್ಸಾಹಿಸಿದರು.
ಊರಿನ ಯಜಮಾನರಾದ ಅಪ್ಪು ಸುಕ್ರು ಹಳ್ಳೇರ್ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಇಲಾಖಾ ಅಧಿಕಾರಿ ರಾಜು ನಾಯ್ಕ, ತೋಟಗಾರಿಕೆ ಇಲಾಖಾ ಅಧಿಕಾರಿ ಸೂರ್ಯಕಾಂತ್, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಕೃಷ್ಣಾನಂದ, ಶ್ರೀ ಚೌಡೇಶ್ವರಿ ಸಾಂಸ್ಕೃತಿಕ ಕ್ರೀಡಾ ಅಭಿವೃದ್ಧಿ ಸಂಘದ ಅಧ್ಯಕ್ಷ ಗಣಪತಿ ಹಳ್ಳೆರ್, ಈಶ್ವರ ನಾಯ್ಕ,ಮಾರುತಿ ಹಳ್ಳೇರ್ ಉಪಸ್ಥಿತರಿದ್ದರು. ಗಣೇಶ್ ಹಳ್ಳೇರ್ ಕಾರ್ಯಕ್ರಮ ನಿರ್ವಹಿಸಿದರು.