ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅಮ್ಮತ್ತಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಆಟೋ ಚಾಲಕರು ರಸ್ತೆ ದುರಸ್ತಿಗೆ ಒತ್ತಾಯಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಈ ಸಂದರ್ಭ ಮಾತನಾಡಿದ ಕಾರ್ಮಾಡು ಗ್ರಾಮ ಪಂಚಾಯತಿ ಸದಸ್ಯ ಅಭಿಜಿತ್, ಅಮ್ಮತ್ತಿ-ಪಾಲಿಬೆಟ್ಟ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆಗೆ ಹಾಕಿದ್ದ ಡಾಂಬರು ಕಿತ್ತು ಬಂದಿದ್ದು ರಸ್ತೆ ಪೂರ್ತಿ ಗುಂಡಿಗಳಾಗಿವೆ. ಬಸ್ ಸಂಚಾರ ಕಡಿಮೆಯಿರುವ ಈ ರಸ್ತೆಯಲ್ಲಿ ಸಂಚರಿಸಲು ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಆಟೋ ರಿಕ್ಷಾವನ್ನೆ ಅವಲಂಬಿಸಿದ್ದಾರೆ. ಹಾಗಾಗಿ ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖಾ ಅಭಿಯಂತರ ಲಿಂಗರಾಜು ಅವರನ್ನು ಆಟೋದಲ್ಲಿ ಕುರಿಸಿ ಎಲ್ಲಾ ಆಟೋ ಚಾಲಕರು ತಮ್ಮ ತಮ್ಮ ಆಟೋದಲ್ಲಿ ಮೆರವಣಿಗೆಯ ಮೂಲಕ ತೆರಳಿ ಅಮ್ಮತ್ತಿ ಪಾಲಿಬೆಟ್ಟ ರಸ್ತೆಯಲ್ಲಿ ಕರೆದೊಯ್ದು ರಸ್ತೆಯ ಸಮಸ್ಯೆ ಮನವರಿಕೆ ಮಾಡಿದರು. ರಸ್ತೆ ದುರಸ್ತಿ ಮಾಡುವಂತೆ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಅಭಿಯಂತರ ಲಿಂಗರಾಜು, ಈ ಭಾಗದ ರಸ್ತೆ ಸಂಪೂರ್ಣ ಹದೆಗೆಟ್ಟಿರುವುದು ತಿಳಿದ ಹಿನ್ನಲೆಯಲ್ಲಿ ಈಗಾಗಲೇ 4 ಕೋಟಿ ರು. ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಮಸ್ಯೆ ವಿವರವನ್ನು ಸರ್ಕಾರ ಮತ್ತು ಶಾಸಕರ ಗಮನಕ್ಕೆ ತಂದು ಶೀಘ್ರ ಹಣ ಬಿಡುಗಡೆ ಮಾಡಿ ಕಾಮಗಾರಿ ನಡೆಸಬೇಕೆಂದು ತಿಳಿಸಲಾಗುವುದೆಂದರು.
ಅದಕ್ಕೆ ಸಮ್ಮತಿಸದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಗುಂಡಿ ಮುಚ್ಚಿ ಸರ್ಕಾರದ ಹಣ ಪೋಲು ಮಾಡುವುದು ಬೇಡ, ಅದಷ್ಟು ಬೇಗ ಸಂಪೂರ್ಣ ರಸ್ತೆ ಮರು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿದರು.