ಅಮ್ಮಿನಬಾವಿ ಬ್ಯಾಡಗೆರೆ ಕೆರೆ ಪುನಶ್ಚೇತನ

KannadaprabhaNewsNetwork | Published : Jul 29, 2024 12:45 AM

ಸಾರಾಂಶ

ಕೆರೆಗಳ ಸಂರಕ್ಷಣೆಯಿಂದ ಅಂತರ್ಜಲಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳಲ್ಲಿ ನೀರು ಸಂಗ್ರಹದಿಂದ ರೈತರ ಬೆಳೆಗಳಿಗೆ ಅನುಕೂಲವಾಗಲಿದೆ. ಪುನಶ್ಚೇತನಗೊಂಡ ಕೆರೆಯನ್ನು ಗಲೀಜು ಮಾಡದೆ ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು.

ಧಾರವಾಡ:

ರಾಜ್ಯದ 700ಕ್ಕೂ ಹೆಚ್ಚು ಕೆರೆ ಅಭಿವೃದ್ಧಿಪಡಿಸಿ ಇದೀಗಿ ಅಮ್ಮಿನಬಾವಿ ಬ್ಯಾಡಗೆರೆ ಕೆರೆ ಪುನಶ್ಚೇತನಗೊಳಿಸಿ, ಜೀವ-ಜಲ ರಕ್ಷಣೆಗೆ ಮುಂದಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಪರ ಕಾಳಜಿ ಶ್ಲಾಘನೀಯ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ತಾಲೂಕಿನ ಅಮ್ಮಿನಬಾವಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಅಭಿವೃದ್ಧಿಪಡಿಸಿದ ಬ್ಯಾಡಗೆರೆ ಕೆರೆ ಉದ್ಘಾಟನೆ, ನಾಮಫಲಕ ಅನಾವರಣ ಹಾಗೂ ಕೆರೆಗೆ ಬಾಗಿನ ಅರ್ಪಣೆ ಅಂಗವಾಗಿ ಏರ್ಪಡಿಸಿದ್ದ ಸಭೆಯಲ್ಲಿ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಮಾತನಾಡಿದ ಅವರು, ಕೆರೆಗಳ ಸಂರಕ್ಷಣೆಯಿಂದ ಅಂತರ್ಜಲಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳಲ್ಲಿ ನೀರು ಸಂಗ್ರಹದಿಂದ ರೈತರ ಬೆಳೆಗಳಿಗೆ ಅನುಕೂಲವಾಗಲಿದೆ. ಪುನಶ್ಚೇತನಗೊಂಡ ಕೆರೆಯನ್ನು ಗಲೀಜು ಮಾಡದೆ ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು. ಕಳೆದ ಹತ್ತಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮುಖ್ಯ ರಸ್ತೆಗಳು ಸೇರಿದಂತೆ ಹೊಲಗಳ ರಸ್ತೆ ಹಾಳಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಕುರಿತು ಯೋಜನೆ ಸಿದ್ಧಪಡಿಸಿ ಹಂತ-ಹಂತವಾಗಿ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು ಎಂದರು.ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮಾತನಾಡಿ, ಕ್ಷೇತ್ರದಿಂದ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸ್ವ ಉದ್ಯೋಗಕ್ಕೆ ಸಾಲದ ರೂಪದಲ್ಲಿ ಹಣಕಾಸಿನ ನೆರವು, 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ, ವೃತ್ತಿಪರ ಕೋರ್ಸ್ ಕಲಿಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿ ಅನೇಕ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಕೆರೆಗೆ ಬಾಗಿನ ಅರ್ಪಿಸಿದ ಪಂಚಗೃಹ ಹಿರೇಮಠದ ಶಾಂತಲಿಂಗ ಶಿವಾಚಾರ್ಯರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ತರಬೇತಿ ನೀಡಿ ಸ್ವ-ಉದ್ಯೋಗ ನೀಡುವಲ್ಲಿ ಮಹತ್ವದ ಪಾತ್ರ ಸಂಸ್ಥೆ ವಹಿಸಿದೆ. ಪಾಚಿಗಟ್ಟಿದ್ದ ನಮ್ಮೂರಿನ ಕೆರೆಯ ಶುದ್ಧೀಕರಣ ಮಾಡಿ ಗ್ರಾಮಕ್ಕೆ ಅನುಕೂಲ ಮಾಡಿದ್ದು, ಅದನ್ನು ಸ್ವಚ್ಛತೆಯಾಗಿಡುವ ನಿಟ್ಟಿನಲ್ಲಿ ನಾವೆಲ್ಲರು ಗಮನ ನೀಡಬೇಕು ಎಂದರು.

ಗ್ರಾಪಂ ಅಧ್ಯಕ್ಷರಾದ ನೀಲವ್ವ ತಿದಿ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಹಾವೀರ ಉಪಾದ್ಯೆ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜ ಇದ್ಲಿ ಮಾತನಾಡಿದರು.

Share this article