ಜಿಲ್ಲೆಯ 71 ಗ್ರಾಮಗಳಲ್ಲಿ ಹರ್ ಘರ್ ಜಲ್

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ರಾಮನಗರ: ಜಲ ಜೀವ್ ಮಿಷನ್ ಯೋಜನೆ ಅಡಿ ಜಿಲ್ಲೆಯಲ್ಲಿ ಶೇ.100ರಷ್ಟು ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಲಾಗಿರುವ 71 ಹಳ್ಳಿಗಳನ್ನು ಹರ್ ಘರ್ ಜಲ್ ಗ್ರಾಮಗಳೆಂದು ಘೋಷಣೆ ಮಾಡಲಾಗಿದೆ.

ರಾಮನಗರ: ಜಲ ಜೀವ್ ಮಿಷನ್ ಯೋಜನೆ ಅಡಿ ಜಿಲ್ಲೆಯಲ್ಲಿ ಶೇ.100ರಷ್ಟು ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಲಾಗಿರುವ 71 ಹಳ್ಳಿಗಳನ್ನು ಹರ್ ಘರ್ ಜಲ್ ಗ್ರಾಮಗಳೆಂದು ಘೋಷಣೆ ಮಾಡಲಾಗಿದೆ.

ಗ್ರಾಮೀಣ ಪ್ರದೇಶಗಳ ಜನರಿಗೆ ದಿನದ 24 ತಾಸು ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಜಲ ಜೀವನ್ ಮಿಷನ್ ಯೋಜನೆಯ ಆಶಯವಾಗಿದ್ದು, ಅದರಂತೆ ಜಿಲ್ಲೆಯಲ್ಲಿರುವ ಒಟ್ಟು 846 ಕಂದಾಯ ಗ್ರಾಮಗಳ ಪೈಕಿ ಜನರ್ವಸತಿ ಇರುವ 71 ಗ್ರಾಮಗಳನ್ನು ಹರ್ ಘರ್ ಜಲ್ ಗ್ರಾಮಗಳೆಂದು ಘೋಷಿಸಲಾಗಿದೆ. ಈ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ (ಜೆಜೆಎಂ) ಜಾರಿಗೆ ಬಂದಾಗ ಜಿಲ್ಲೆಯಲ್ಲಿಯೂ ಚಾಲನೆ ನೀಡಲಾಗಿತ್ತು. ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಕೋವಿಡ್ ಲಾಕ್ ಡೌನ್‌ ನಂತಹ ವಿಘ್ನಗಳು ಆರಂಭದಲ್ಲಿಯೇ ಎದುರಾದ ಕಾರಣ ಯೋಜನೆ ಕುಂಟುತ್ತಾ ಸಾಗುವಂತೆ ಮಾಡಿತು.

ಈ ಯೋಜನೆಯಲ್ಲಿ ಹರ್ ಘರ್ ಜಲ್‌ ಘೋಷಣೆಯಾಗಿರುವ ಗ್ರಾಮಗಳ ಪ್ರತಿ ವ್ಯಕ್ತಿಗೆ 55 ಲೀಟರ್‌ ನೀರು ನೀಡಲಾಗುತ್ತದೆ. ಈ ಗ್ರಾಮಗಳಲ್ಲಿರುವ ಜನರ ಆದ್ಯತೆಗೆ ಅನುಸಾರವಾಗಿ ನೀರು ಪೂರೈಕೆ ಮಾಡಲಾಗುತ್ತದೆ. ಅಲ್ಲದೆ, ಗ್ರಾಮದ ಅಂಗನವಾಡಿ, ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೂ ನೀರು ಪೂರೈಸಲಾಗುತ್ತಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 4 ಸುತ್ತಿನಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದರಲ್ಲಿ ಶೇ. 86.27ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ. ಗುತ್ತಿಗೆದಾರರ ಸಮಸ್ಯೆಯಿಂದಾಗಿ 5ನೇ ಸುತ್ತಿನ ಮರು ಟೆಂಡರ್ ಕರೆದಿದ್ದಾರೆ.

ಜಿಲ್ಲೆಯಲ್ಲಿನ 1999 ಜನ ವಸತಿ ಪ್ರದೇಶಗಳಿಂದ 1528 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 1306 ಕಾಮಗಾರಿಗೆ ಅನುಮೋದನೆ ದೊರಕಿದೆ. ಇದರಲ್ಲಿ 734 ಕಾಮಗಾರಿಗಳು ಪೂರ್ಣಗೊಂಡಿದ್ದು, 144 ಕಾಮಗಾರಿಗಳ ಗುಣಮಟ್ಟವನ್ನು ನಿವೃತ್ತ ಕಾರ್ಯಪಾಲಕ ಅಭಿಯಂತರ ನೇತೃತ್ವದ ಸ್ಟೇಟ್ ಕ್ವಾಲಿಟಿ ಮ್ಯಾನೇಜ್ ಮೆಂಟ್‌ ಪರಿಶೀಲನೆ ನಡೆಸಿದೆ.

1,49,110ರ ಪೈಕಿ 1,28,635 ಕಾರ್ಯಾತ್ಮಕ ನಳ ಸಂಪರ್ಕ ನೀಡಲಾಗಿದ್ದು, ಶೇ.86.27ರಷ್ಟು ಕಾಮಗಾರಿ ಮುಗಿದದೆ. ಒಟ್ಟಾರೆ ಕಾಮಗಾರಿಯ ಅಂದಾಜು ವೆಚ್ಚ 572.92 ಕೋಟಿ ರುಪಾಯಿಗಳಾಗಿದ್ದು, 190.77 ಕೋಟಿ ರುಪಾಯಿಗಳು ಖರ್ಚಾಗಿದೆ.

ಜಲ ಜೀವನ್ ಮಿಷನ್ ಯೋಜನೆ ಘೋಷಣೆಯಾದ ಮೂರು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಸೂಚನೆ ನೀಡಿತ್ತು. ಆದರೆ, ಕೆಲ ಸಮಸ್ಯೆಗಳಿಂದಾಗಿ ಕಾಮಗಾರಿ ಪರ್ಣಗೊಳಿಸಲು ಸಾಧ್ಯವಾಗಿಲ್ಲ. ಹಾಗಾಗಿ 2024ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ.ಬಾಕ್ಸ್ .........

ಜೆಜೆಎಂ ಯೋಜನೆ ಅಡಿ 1ನೇ ಹಂತದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳ 808 ಜನವಸತಿ ಪ್ರದೇಶಗಳಲ್ಲಿ 658 ಕಾಮಗಾರಿಗಳ ಗುರಿ ಪೈಕಿ 658 ಕಾಮಗಾರಿಗೆ ಅನುಮೋದನೆ ಸಿಕ್ಕಿತು. ಇದರಲ್ಲಿ 615 ಕಾಮಗಾರಿ ಪೂರ್ಣಗೊಂಡು 60 ಗ್ರಾಮಗಳನ್ನು ಹರ್ ಘರ್ ಜಲ್ ಗ್ರಾಮಗಳೆಂದು ಘೋಷಣೆ ಮಾಡಲಾಯಿತು. ಇದಕ್ಕಾಗಿ 120.57 ಕೋಟಿ ರುಪಾಯಿ ವೆಚ್ಚವಾಯಿತು.

2ನೇ ಹಂತದಲ್ಲಿ ಚನ್ನಪಟ್ಟಣ ಮತ್ತು ರಾಮನಗರದ ತಾಲೂಕಿನ136 ಜನವಸತಿ ಪ್ರದೇಶಗಳಲ್ಲಿ 132 ಕಾಮಗಾರಿ ಕೈಗೆತ್ತಿಕೊಂಡು 92 ಕಾಮಗಾರಿ ಮುಗಿಸಿದ್ದು, ಇದಕ್ಕಾಗಿ 31.32 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. 7 ಹಳ್ಳಿಗಳನ್ನು ಹರ್ ಘರ್ ಜಲ್‌ ಗ್ರಾಮಗಳೆಂದು ಘೋಷಿಸಲಾಗಿದೆ.

3ನೇ ಹಂತದಲ್ಲಿ ಕನಕಪುರ,ಮಾಗಡಿ ಹಾಗೂ ರಾಮನಗರ ತಾಲೂಕುಗಳ 1008 ಜನವಸತಿ ಪ್ರದೇಶಗಳಲ್ಲಿ 697ರಲ್ಲಿ 486 ಕಾಮಗಾರಿಗೆ ಅನುಮೋದನೆ ದೊರಕಿತು. ಇದರಲ್ಲಿ 27 ಕಾಮಗಾರಿ ಪೂರ್ಣಗೊಂಡಿದ್ದು, 4 ಹಳ್ಳಿಗಳನ್ನು ಹರ್ ಘರ್ ಜಲ್‌ ಗ್ರಾಮಗಳೆಂದು ಘೋಷಣೆಯಾಗಿವೆ. ಇದರಲ್ಲಿ 277.42 ಕೋಟಿ ರು.ಗಳ ಪೈಕಿ 38.17 ಕೋಟಿ ಖರ್ಚು ಮಾಡಲಾಗಿದೆ.

4ನೇ ಹಂತದಲ್ಲಿ ಮಾಗಡಿ ಮತ್ತು ರಾಮನಗರ ತಾಲೂಕುಗಳ 47 ಜನವಸತಿ ಪ್ರದೇಶಗಳಲ್ಲಿ 41ರ ಪೈಕಿ 30 ಕಾಮಗಾರಿಗೆ ಅನುಮೋದನೆ ದೊರಕಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಕೋಟ್ ............

ರಾಮನಗರ ಜಿಲ್ಲೆಯ 71 ಕಂದಾಯ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್‌ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಬಾಕಿ ಉಳಿದಿರುವ ಗ್ರಾಮಗಳಲ್ಲಿಯೂ ಯೋಜನೆ ಜಾರಿಗೊಳಿಸಲು ಒತ್ತು ನೀಡಲಾಗುವುದು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗುತ್ತಿದೆ.

-ರಂಗಸ್ವಾಮಿ, ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ರಾಮನಗರ.

17ಕೆಆರ್ ಎಂಎನ್ 1,2.ಜೆಪಿಜಿ

1.ಹೊರಳಗಲ್ಲು ಗ್ರಾಮವನ್ನು ಹರ್ ಘರ್ ಜಲ್ ಗ್ರಾಮ ಎಂದು ಘೋಷಣೆ ಮಾಡಿರುವುದು.

2.ಜಲ ಜೀವ್ ಮಿಷನ್ ಯೋಜನೆ ಅಡಿಯಲ್ಲಿ ಅಳವಡಿಸಿರುವ ನಲ್ಲಿ ಸಂಪರ್ಕ.

Share this article