ಕನ್ನಡಪ್ರಭ ವಾರ್ತೆ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘ ನಾಡೋಜ ಡಾ. ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಆಯೋಜಿಸಿದ್ದ ಕನ್ನಡದ ಯುವ ಲೇಖಕರಿಗೆ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ವಿಶೇಷ ಉಪನ್ಯಾಸದಲ್ಲಿ ‘ಚೆನ್ನವೀರ ಕಣವಿಯವರ ಕಾವ್ಯಚಿತ್ರಗಳಲ್ಲಿ ತಾತ್ವಿಕ ನೆಲೆಗಳು’ ವಿಷಯ ಕುರಿತು ಮಾತನಾಡಿದರು.
ಡಾ. ಚೆನ್ನವೀರ ಕಣವಿ ಅವರ ಕಾವ್ಯದ ಶಕ್ತಿ ಭಾವನಾ ಪ್ರಧಾನ. ಅವರ ಕಾವ್ಯಗಳಲ್ಲಿ ವ್ಯಕ್ತಿತ್ವ ನಿರ್ಮಾಣ ನಿಸರ್ಗದ ರಮ್ಯತೆಯೇ ಪ್ರಧಾನ ಹಂಬಲಗಳಾಗಿವೆ. ಮಾನವೀಯತೆ, ಆದರ್ಶ ಹಾಗೂ ಸೌಜನ್ಯದ ತಾತ್ವಿಕ ಸಿದ್ಧಾಂತಗಳಿವೆ. ಪ್ರಕೃತಿಯ ವರ್ಣನೆ ಜೊತೆ ನವ್ಯ ವಿಷಯಗಳು ಅವರ ಕಾವ್ಯದಲ್ಲಿವೆ. ಬೆಳಕು ಅವರ ಕಾವ್ಯದ ಮೂಲವಾಗಿದೆ. ಅವರ ಕವನ ಸಂಕಲನ ‘ಕಾವ್ಯಾಕ್ಷಿ’ ಹಾಗೂ ‘ಭಾವಜೀವಿ’ಗಳು ತಾತ್ವಿಕ ನೆಲೆಗಟ್ಟಿನ ಮೇಲೆ ರಚನೆಯಾಗಿವೆ ಎಂದು ಹೇಳಿದರು.ಚಿಂತಕ ಡಾ. ಲೋಹಿತ ನಾಯ್ಕರ ಬಹುಮಾನ ಪ್ರದಾನ ಮಾಡಿ ಮಾತನಾಡಿ, ಕನ್ನಡದ ಯುವ ಲೇಖಕರಿಂದ ಆಹ್ವಾನಿತ ಎಲ್ಲ ಕಥೆಗಳನ್ನು ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಿ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವುದು ಅಗತ್ಯವಿದೆ ಎಂದರು.
ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಚಾಮರಾಜ ನಗರದ ಆರ್. ದಿಲೀಪ್ ಕುಮಾರ ಅವರ ‘ಅಮೃತವರ್ಷಿಣಿ’ ಕಾವ್ಯ ಪ್ರಥಮ ಬಹುಮಾನ, ಯಾದಗಿರಿಯ ಮಹೇಶ್ವರಿ ಅಲ್ಕೂರ ಅವರ ‘ಮೌನ ಅಳು’ ಕಾವ್ಯ ದ್ವಿತೀಯ ಹಾಗೂ ಧಾರವಾಡದ ಕವಿತಾ ವೀರನಗೌಡ ಪಾಟೀಲ ಅವರ ‘ಉರ್ಮಿಳೆ’ ಕಾವ್ಯ ತೃತೀಯ ಬಹುಮಾನ ಪಡೆದವು. ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ರೋಣದ ಡಾ. ಅಂದಯ್ಯ ಅರವಟಗಿಮಠ ಅವರ ‘ದೈವ ದೈವಗಳಾಚೆ’ ಕಥೆ ಪ್ರಥಮ, ಅನಂತ ಕುಣಿಗಲ್ ಅವರ ‘ಸಂಸ’ಕಥೆ ದ್ವಿತೀಯ ಹಾಗೂ ಸಂಜೀವ ಜಗ್ಲಿ, ಮಾನವಿ‘ಸಾಲಿ’ಕಥೆ ತೃತೀಯ ಬಹುಮಾನ ಪಡೆದವು. ಕಾವ್ಯ ಮತ್ತು ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಯುವ ಲೇಖಕರನ್ನು ಗೌರವಿಸಿ ಸನ್ಮಾನಿಸಲಾಯಿತು.