ಅಮೃತ ಸಮಾನ ನೀರಿನ ರಕ್ಷಣೆ ಅಗತ್ಯ: ಅಮರೇಶ್ವರ ಶ್ರೀ

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ಸಕಲ ಜೀವರಾಶಿಗೂ ಅಗತ್ಯ ಎಂಬುದಕ್ಕಿಂತ ಅನಿವಾರ್ಯವೇ ಆಗಿರುವ ನೀರಿನ ಸಂರಕ್ಷಣೆ ಇಂದಿನ ತುರ್ತು ಅಗತ್ಯ. ಈ ಸಲುವಾಗಿಯೇ ಈ ಕಲಿಯುಗದಲ್ಲಿ ನೀರು ಅಮೃತಕ್ಕೆ ಸಮಾನವಾಗಿದೆ ಎಂದು ಘನಬಸವ ಅಮರೇಶ್ವರ ಶ್ರೀ ಕುದುರೆಗಣಿ ಗ್ರಾಮದ ಕಾರ್ಯಕ್ರಮದಲ್ಲಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಕಲಿಯುಗದಲ್ಲಿ ನೀರು ಅಮೃತಕ್ಕೆ ಸಮಾನವಾಗಿದೆ. ಅದರ ರಕ್ಷಣೆ ಮತ್ತು ಸದ್ಬಳಕೆ ಇಂದು ಹೆಚ್ಚಿನ ಮಹತ್ವ ಪಡೆದಿದೆ ಎಂದು ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಕುದುರೆಗಣಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 513ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಹೂಳೆತ್ತಲಾದ ಊರ ಮುಂದಿನ ದೊಡ್ಡ ಕೆರೆಗೆ ಬಾಗಿನ ಅರ್ಪಣೆ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುರಾಣಗಳಲ್ಲಿ ಸಮುದ್ರ ಮಂಥನದಿಂದ ಅಮೃತ ದೊರೆಯಿತು ಎಂದು ಅದಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಕೇಳಿದ್ದೇವೆ. ಆದರೆ, ಪ್ರಸ್ತುತ ಸಕಲಜೀವಿಗಳಿಗೆ ಜೀವ ಜಲವೇ ಮುಖ್ಯವಾಗಿದೆ. ನೀರು ಅಮೃತಕ್ಕಿಂತ ಹೆಚ್ಚು ಎಂಬುದನ್ನು ಪ್ರಕೃತಿಯ ಮುನಿಸು ತೋರಿಸಿಕೊಟ್ಟಿದೆ ಎಂದರು.

ತಾಪಂ ಇಒ ಡಾ. ಎನ್.ಆರ್. ಪ್ರದೀಪ್‌ಕುಮಾರ್ ಕೆರೆಗೆ ಬಾಗಿನ ಅರ್ಪಿಸಿ, ಶಿಸ್ತುಬದ್ಧ ಜೀವನದ ಜೊತೆಗೆ ಆರ್ಥಿಕ ಅಭಿವೃದ್ಧಿಯತ್ತ ಜನರನ್ನು ಕೊಂಡೊಯ್ಯುವ ಕೆಲಸವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಡೆಸುತ್ತಿದೆ. ಶಿಕ್ಷಣದ ಜೊತೆ ಕಾಯಕ ನಿಷ್ಠೆ ಹೊಂದಿದೆ. ಯೋಜನೆಯ ಜೊತೆ ಜನರ ಸಹಕಾರವು ಸದಾ ಇರಲಿ ಎಂದರು.

ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎಚ್. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.

ಗೌರಿಕೆರೆ ಮಠದ ಸದಾಶಿವಯ್ಯ ಸ್ವಾಮೀಜಿ, ಗ್ರಾಮ ಸಮಿತಿ ಅಧ್ಯಕ್ಷ ಆರ್.ಡಿ.ಅಣ್ಣಪ್ಪ, ತವನಂದಿ ಪಿಡಿಒ ಜಿ.ರೇಣುಕಾ, ತಾಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ, ಕೃಷಿ ಅಧಿಕಾರಿ ಲೋಕೇಶ್, ಮೇಲ್ವಿಚಾರಕ ಉಮೇಶ್ ಪೂಜಾರಿ ಸೇವಾ ಪ್ರತಿನಿಧಿಗಳಾದ ಜಯಲಕ್ಷ್ಮೀ, ಉಷಾ, ಸುಷ್ಮ, ಜೆಸಿಂತಾ, ಸಂಧ್ಯಾ, ನಾಗರಾಜ, ದೀಪಕ್, ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

- - -

-05ಕೆಪಿಸೊರಬ03:

ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಘನಬಸವ ಅಮರೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು.

Share this article