ಕನ್ನಡಪ್ರಭ ವಾರ್ತೆ ಬೆಳ್ತಂಗಡಿಹುಲ್ಲುಗಾವಲು, ಮಳೆ ನೀರು ಪ್ರದೇಶ, ಶೋಲಾ ಅರಣ್ಯದಲ್ಲಿ ಒಂದು ಮಳೆಗಾಲದಿಂದ ಇನ್ನೊಂದು ಮಳೆಗಾಲದವರೆಗೆ ಹೊಳೆಗಳನ್ನು ಜೀವಂತವಾಗಿರಿಸುವ ಶಕ್ತಿ ಇರುತ್ತದೆ. ಇರುವೆಯಿಂದ ಆನೆಯವರೆಗೆ, ಹುಲ್ಲಿನಿಂದ ಆಕಾಶದವರೆಗಿರುವ ಮರದವರೆಗೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಒಂದಕ್ಕೆ ಸಮಸ್ಯೆಯಾದರೆ ಇಡೀ ಜೀವ ಸಂಕುಲಕ್ಕೆ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ನಾವು ಅರ್ಥೈಯಿಸಿಕೊಳ್ಳಬೇಕು ಎಂದು ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ಹೇಳಿದರು.ಅವರು ಗುರುವಾರ ಹಸಿರು ತಪಸ್ಸು ಸಂಘಟನೆ, ಕಲ್ಮಂಜ – ಮುಂಡಾಜೆ, ಅರಣ್ಯ ಇಲಾಖೆ ಕರ್ನಾಟಕ ಸರ್ಕಾರ, ವಿವೇಕಾನಂದ ವಿದ್ಯಾಸಂಸ್ಥೆಗಳು, ಮುಂಡಾಜೆ ಇವರ ಸಹಯೋಗದಲ್ಲಿ ಬಾಟಲ್ ಫಾರ್ ಚೇಂಜ್, ಬಿಸ್ಲೇರಿ ಇಂಟರ್ ನ್ಯಾಷನಲ್ ಇವರ ಪ್ರಯೋಜಕತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗಡಿ ಚಾರ್ಮಾಡಿ ಘಾಟಿಯ 11 ನೇ ತಿರುವಿನ ಬಳಿ ನಡೆದ ಸ್ವಚ್ಛ ಚಾರ್ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನೇತ್ರಾವತಿಯಲ್ಲಿ ನೀರಿಲ್ಲವೆಂದರೆ ಅದಕ್ಕೆ ಕಾರಣ ಮಾನವರೇ ಆಗಿದ್ದೇವೆ. ನಮ್ಮ ದೌರ್ಜನ್ಯದಿಂದ ನೇತ್ರಾವತಿ ಬರಿದಾಗುವಂತಾಗಿದೆ. ಕಾಡು ಉಳಿಸಿ ಎಂಬ ಆಗ್ರಹದ ಜತೆಗೆ ಕಾಡನ್ನು ಉಳಿಸಲು ಸರ್ಕಾರದ ಯೋಜನೆಗಳು ಚಾಲ್ತಿಯಲ್ಲಿವೆ. ಎಲ್ಲ ದುರಂತಗಳೂ ಮಾನವ ನಿರ್ಮಿತವಾಗಿದ್ದು ವಿದ್ಯಾರ್ಥಿಗಳು ಪಶ್ಚಿಮ ಘಟ್ಟವನ್ನು ಉಳಿಸುವ ಪ್ರಯತ್ನವನ್ನು ಮಾಡಬೇಕು. ಅದರ ಅಗತ್ಯವನ್ನು ಅರಿತುಕೊಂಡರೆ ಮುಂದಿನ ದಿನಗಳಲ್ಲಿ ನೆಮ್ಮದಿಯಾಗಿ ಬದುಕಬಹುದು ಎಂದು ಅವರು ಹೇಳಿದರು.
ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ಮಾತನಾಡಿ, ದಕ್ಷಿಣ ಭಾರತದಲ್ಲಿ ಹರಿಯುವ ಹಲವು ನದಿಗಳ ಉಗಮ ಪಶ್ಚಿಮ ಘಟ್ಟವಾಗಿದೆ. ಪಶ್ಚಿಮ ಘಟ್ಟಕ್ಕೆ ಸಮಸ್ಯೆಯಾದರೆ ದಕ್ಷಿಣ ಭಾರತಕ್ಕೆ ಸಮಸ್ಯೆಯಾಗುತ್ತದೆ. ಕಾಡು ಮತ್ತು ನಾಡಿನಲ್ಲಿರುವ ಪ್ರತಿ ಪ್ರಾಣಿ ಪಕ್ಷಿ ಜೀವ ಸಂಕುಲಗಳು ತುಂಬಾ ಸೂಕ್ಷವಾಗಿವೆ ಮತ್ತು ಪೃಕೃತಿಯ ಮಧ್ಯೆ ಅತ್ಯಗತ್ಯವಾಗಿ ಬೇಕಾಗಿವೆ. ಆದರೆ ಮನುಷ್ಯ ಕಾಡಿನೊಳಗೆ ಹೊಕ್ಕು ತನ್ನ ಸ್ವಾರ್ಥವನ್ನು ಬೆಳೆಸಿಕೊಂಡು ಅನೇಕ ಅನಾಹುತಗಳಿಗೆ ಕಾರಣೀಕರ್ತನಾಗಿದ್ದಾನೆ ಎಂದರು.ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಾಲಿ ಓ ಎ, ಬಿಸ್ಲೇರಿ ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ವಲ್, ಹಸಿರು ತಪಸ್ಸು ಸಂಘಟನೆ ಸಂಚಾಲಕ ನಾರಾಯಣ ಫಡ್ಕೆ, ಮುಂಡಾಜೆ ವಿವೇಕಾನಂದ ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ನಮಿತಾ, ರೋವರ್ಸ್ ರೇಂಜರ್ಸ್ ವಿಭಾಗದ ಅಧಿಕಾರಿ ಕೃಷ್ಣ ಕಿರಣ್, ಅರಣ್ಯ ಇಲಾಖೆ ಸಿಬ್ಬಂದಿ, ಮುಂಡಾಜೆ ಕಾಲೇಜಿನ ಎನ್.ಎಸ್.ಎಸ್ ಹಾಗೂ ರೋವರ್ಸ್ ರೇಂಜರ್ಸ್ ವಿಭಾಗದ ವಿದ್ಯಾರ್ಥಿಗಳು ಇದ್ದರು. ದ.ಕ. ವಿಭಾಗದ ಚಾರ್ಮಾಡಿ ಘಾಟಿ ಪರಿಸರದ ರಸ್ತೆಯುದ್ದಕ್ಕೂ ಬಿದ್ದಿದ್ದ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.