ಕನ್ನಡಪ್ರಭ ವಾರ್ತೆ ಕುಷ್ಟಗಿ
ಚಾರ್ ಸೌ ಪಾರ್ ಎನ್ನುತ್ತಿದ್ದ ನರೇಂದ್ರ ಮೋದಿ ಅವರಿಗೆ ಈಗ ತೀನ್ ಸೌ ಪಾರ್ ಆಗಲು ಸಾಧ್ಯವಾಗಲಿಲ್ಲ. ಅವರ ಆಡಳಿತಕ್ಕೆ ಜನತೆಯು ಬೇಸತ್ತಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ಗೆ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.ಪಟ್ಟಣದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನರೇಂದ್ರ ಮೋದಿ ಅವರು ಚಾರ್ ಸೌ ಪಾರ್ ಎಂದು ಗಟ್ಟಿಯಾಗಿ ಹೇಳುತ್ತಿದ್ದರು. ಅವರು ಬೇರೆ ಬೇರೆ ಪಕ್ಷಗಳ ಬೆಂಬಲ ಪಡೆದುಕೊಂಡು 295ಕ್ಕೆ ನಿಂತಿದ್ದಾರೆ. ಸ್ವಯಂ ಬಲದ ಮೇಲೆ ಅವರು ನಿಂತಿಲ್ಲ. ಒಂದು ವೇಳೆ ನಮ್ಮ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಹೇಳಿದರು.
ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ಈ ಪ್ರದೇಶದಲ್ಲಿ ಗ್ಯಾರಂಟಿ ಯೋಜನೆಗಳು ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು 371ಜೆ ಸಲುವಾಗಿ ಹೋರಾಟ ಮಾಡಿ ಅನೇಕ ಕೆಲಸಗಳನ್ನು ಮಾಡಿದ್ದರ ಪರಿಣಾಮ ಇದು ಸಾಧ್ಯವಾಗಿದೆ ಎಂದರು.ಕರಡಿ ಸಂಗಣ್ಣ ಆನೆಬಲ:
ನಮ್ಮ ಪಕ್ಷಕ್ಕೆ ಸಂಗಣ್ಣ ಕರಡಿ ಆಗಮಿಸಿದ್ದರಿಂದ ನಮ್ಮ ಕ್ಷೇತ್ರಕ್ಕೆ ಆನೆಬಲ ಬಂದಂತಾಗಿದೆ. ಅವರ ಕಾರ್ಯಕರ್ತರು ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಿದ ಪರಿಣಾಮವಾಗಿ ಜಯ ಸಾಧ್ಯವಾಗಿದೆ ಎನ್ನಬಹುದು ಹಾಗೂ ಹಿಟ್ನಾಳ ಕುಟುಂಬದ ಮೇಲಿನ ಸಿಂಪತಿಯು ಒಂದು ಕಾರಣವಾಗಿದೆ ಎಂದರು.ಪೆನ್‌ಡ್ರೈವ್ ಪ್ರಕರಣ:
ಪ್ರಜ್ವಲ್ ರೇವಣ್ಣ ಅವರ ಸೋಲಿಗೆ ಪೆನ್‌ಡ್ರೈವ್ ಪ್ರಕರಣ ಮೂಲ ಕಾರಣವಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಆ ಕ್ಷೇತ್ರದಲ್ಲಿ ಬಲಶಾಲಿಯಾಗಿದ್ದರ ಪರಿಣಾಮವಾಗಿ ಪ್ರಜ್ವಲ ರೇವಣ್ಣ ಸೋತಿದ್ದಾರೆ ಎಂದರು.ನಮ್ಮ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಗೆಲುವಿಗೆ ತಳಮಟ್ಟದ ಕಾರ್ಯಕರ್ತರು ಶ್ರಮಿಸಿದ್ದಾರೆ. ಅದಲ್ಲದೆ ಸಚಿವರು, ಶಾಸಕರು, ಮಾಜಿ ಶಾಸಕರ ಶ್ರಮ ಇದೆ. ಕುಷ್ಟಗಿ ಕ್ಷೇತ್ರದಲ್ಲಿ ನಾನು 2023ರಲ್ಲಿ ಸೋತಾಗ 9600 ಮತಗಳ ಅಂತರವಿತ್ತು. ಈಗ 1580 ಮತಗಳ ಅಂತರವಾಗಿದೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷ ಕಟ್ಟುವ ಕಾರ್ಯ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾವರಗೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತವಾಡ ಇದ್ದರು.