ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಠದ ಶ್ರೀಮಠದ ಆದಿಶಕ್ತಿ, ಚುಂಚನಾದ್ರಿ ಮತ್ತು ಶಿವಶಕ್ತಿ ಸಮುದಾಯಭವನದಲ್ಲಿ ನಡೆದ ಎರಡು ದಿನಗಳ ಕಾಲ ನಡೆಯುವ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಆಧ್ಯಾತ್ಮಿಕ ವಿಷಯಗಳನ್ನೊಳಗೊಂಡ ಪ್ರದರ್ಶನಗಳು ಯುವಕರನ್ನು ಆಕರ್ಷಿಸಿದವು.ಶ್ರೀಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿಗಳ 11ನೇ ವರ್ಷದ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಮೇಳದಲ್ಲಿ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಅಧ್ಯಕ್ಷ ಪ್ರೊ.ಕೆ.ಜೆ.ವಿನೋಯ್ ವಿದ್ಯುಕ್ತ ಚಾಲನೆ ನೀಡಿದರು.
ಮೇಳದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಆರು ಅಂಗಸಂಸ್ಥೆಗಳೂ ಸೇರಿದಂತೆ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮತ್ತು ಹೊರಗಿನ ಪ್ರತಿಷ್ಠಿತ ಕಾಲೇಜುಗಳು, ಸರ್ಕಾರಿ ಸಂಸ್ಥೆಗಳಾದ ಇಸ್ರೋ, ಎಚ್‌ಎಎಲ್, ಡಿಆರ್‌ಡಿಓ, ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಟೆಕ್ನಾಲಜಿಕಲ್ ಮ್ಯೂಸಿಯಂ, ಆಧ್ಯಾತ್ಮಿಕ ಕೇಂದ್ರಗಳು ಮತ್ತು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು 200ಕ್ಕೂ ಹೆಚ್ಚು ಮಳಿಗೆಗಳಲ್ಲಿ ತಮ್ಮ ವಿಚಾರ ಮಾದರಿಗಳನ್ನು ಪ್ರದರ್ಶಿಸಿದರು.ವಿಜ್ಞಾನ, ತಂತ್ರಜ್ಞಾನ ಮತ್ತು ಆಧ್ಯಾತ್ಮಿಕ ವಿಷಯಗಳನ್ನೊಳಗೊಂಡ ಪ್ರದರ್ಶನಗಳು, ಕೃಷಿ ಉಪಕರಣಗಳು, ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿಚಾರಗಳು, ಸೋಲಾರ್ ವ್ಯವಸ್ಥೆ, ವೈದ್ಯಕೀಯ ಸಂಶೋಧನೆಗಳು, ಆಧ್ಯಾತ್ಮಿಕ ವಿಚಾರಧಾರೆಗಳು ಮೇಳದಲ್ಲಿ ಪ್ರದರ್ಶನಗೊಂಡು ಯುವಕರನ್ನು ಆಕರ್ಷಿಸಿದವು.
ಶ್ರೀಗಳು ಸೇರಿದಂತೆ ಗಣ್ಯರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಮೇಳದ ವಸ್ತುಪ್ರದರ್ಶನವನ್ನು ವೀಕ್ಷಣೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಂಡರು.ವಿಶೇಷ ಉಪನ್ಯಾಸ:
ಮೇಳದ ವಸ್ತುಪ್ರದರ್ಶನ ಉದ್ಘಾಟನೆ ಬಳಿಕ ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್‌ಐಟಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಸೈಬರ್ ಸೆಕ್ಯೂರಿಟೀಸ್ ವಿಷಯ ಕುರಿತು ಬೆಂಗಳೂರಿನ ಗ್ಲೋಬಲ್ ಎಕ್ಸ್‌ಪರ್ಟೈಸ್ ಇನ್‌ಸೈಬರ್ ಸೆಕ್ಯುರಿಟೀಸ್ ಫಾರೆನ್‌ಸಿಕ್ಸ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನ ಡಾ.ಉದಯಶಂಕರ್ ಪುರಾಣಿಕ್ ಉಪನ್ಯಾಸ ನೀಡಿದರು.ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಮ್ಮ ಹೊಟ್ಟೆಯಲ್ಲೊಂದು ಮೆದುಳು ವಿಷಯ ಕುರಿತು ಥಟ್ ಅಂತ ಹೇಳಿ ಖ್ಯಾತಿಯ ವೈದ್ಯ ವಿಜ್ಞಾನ ಲೇಖಕ ಡಾ.ನಾ.ಸೋಮೇಶ್ವರ ಉಪನ್ಯಾಸ ನೀಡಿದರು. ಮತ್ತು ಫಾರ್ಮಸಿ ಕಾಲೇಜಿನಲ್ಲಿ ರಾಮಾಯಣ ಹಾಗೂ ಮಹಾಭಾರತಗಳಲ್ಲಿ ವೈಜ್ಞಾನಿಕ ಚಿಂತನೆ ವಿಷಯ ಕುರಿತು ವಿಧಾನ ಪರಿಷತ್ ಸದಸ್ಯೆ ಡಾ.ಎಸ್.ಆರ್.ಲೀಲಾ ಉಪನ್ಯಾಸ ನೀಡಿದರು.