ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ 108 ಆರೋಗ್ಯ ಕವಚ ಆ್ಯಂಬುಲೆನ್ಸ್‌ನ ಚಾಲಕ ಹಾಗೂ ಸಿಬ್ಬಂದಿಗೆ ಕನಿಷ್ಠ ವೇತನ ನೀಡುವಂತೆ ರಾಜ್ಯ ಹೈಕೋರ್ಟ್‌ನ ಮಧ್ಯಂತರ ಆದೇಶದ ಹೊರತೂ ಕಳೆದ ಮೂರು ತಿಂಗಳಿಂದ ಒಂದೇ ಒಂದು ರುಪಾಯಿ ಮೊತ್ತ ಈವರೆಗೂ ಪಾವತಿಯಾಗಿಲ್ಲ. ಕಳೆದ ಗುರುವಾರ ಆರೋಗ್ಯ ಇಲಾಖೆಯ ತುರ್ತು ವೈದ್ಯಕೀಯ ಸೇವೆಗಳ ಉಪ ನಿರ್ದೇಶಕರು ಮುಂಗಡ ಮೊತ್ತ 162 ಕೋಟಿ ರು. ಬಿಡುಗಡೆಗೊಳಿಸಿ ವಾರ ಕಳೆದರೂ ವೇತನ ಮಂಗಳವಾರವೂ ಖಾತೆಗೆ ಜಮೆ ಆಗಿಲ್ಲ. ಜುಲೈನಲ್ಲೇ ಮುಂಗಡ ಬಿಡುಗಡೆಯಾಗಿತ್ತು: ರಾಜ್ಯದಲ್ಲಿ 108 ಆ್ಯಂಬುಲೆನ್ಸ್‌ಗಳ ಉಸ್ತುವಾರಿ ನೋಡುತ್ತಿರುವ ಜಿವಿಕೆಯ ಇಎಂಆರ್‌ಐ ಗ್ರೀನ್ ಹೆಲ್ತ್ ಸರ್ವೀಸ್ ಸಂಸ್ಥೆಗೆ ಜುಲೈನಲ್ಲೇ ಆರೋಗ್ಯ ಇಲಾಖೆಯ ತುರ್ತು ವೈದ್ಯಕೀಯ ಸೇವೆಗಳ ಉಪ ನಿರ್ದೇಶಕರು ಮುಂಗಡ ಮೊತ್ತ ಬಿಡುಗಡೆಗೊಳಿಸಿದ್ದರು. ಆರೋಗ್ಯ ಇಲಾಖೆ ನಿಯಮದಡಿ ಮೂರು ತಿಂಗಳ ಮೊತ್ತವನ್ನು ಮುಂಗಡವಾಗಿ ನೀಡಲಾಗುತ್ತದೆ. ಅಂದರೆ ಜುಲೈನಿಂದ ಸೆಪ್ಟೆಂಬರ್ ವರೆಗಿನ ಮೊತ್ತವನ್ನು ಆಗಲೇ ಬಿಡುಗಡೆಗೊಳಿಸಲಾಗಿದೆ. ಆದರೆ ಸಂಸ್ಥೆ ಮಾತ್ರ ಇಲ್ಲಿವರೆಗೂ 108 ಆ್ಯಂಬುಲೆನ್ಸ್ ಚಾಲಕ, ಸಿಬ್ಬಂದಿಗೆ ಚಿಕ್ಕಾಸೂ ವೇತನ ಪಾವತಿಸಿಲ್ಲ. ಮುಂಗಡ ಬಿಡುಗಡೆಗೊಳಿಸಿದ ಮೊತ್ತವನ್ನು ಬೇರೆ ಉದ್ದೇಶಕ್ಕೆ ವರ್ಗಾವಣೆಗೊಳಿಸಿರುವ ಶಂಕೆಯನ್ನು ನೌಕರರು ವ್ಯಕ್ತಪಡಿಸುತ್ತಿದ್ದಾರೆ.ಮೊನ್ನೆ ಗುರುವಾರ ಆರೋಗ್ಯ ಇಲಾಖೆ ತುರ್ತು ವೈದ್ಯಕೀಯ ಸೇವೆಗಳ ಉಪನಿರ್ದೇಶಕರು ಬಿಡುಗಡೆಗೊಳಿಸಿದ್ದು ಅಕ್ಟೋಬರ್‌ನಿಂದ ಡಿಸೆಂಬರ್ ವರೆಗಿನ ಈ ಸಾಲಿನ ಮೂರನೇ ತ್ರೈಮಾಸಿಕ ಅವಧಿಯ ವೇತನದ ಕಂತು. ಜಿವಿಕೆ-ಇಎಂಆರ್‌ಐ ಸಂಸ್ಥೆಯ ಗುತ್ತಿಗೆ ಅವಧಿ 2008ರಲ್ಲಿ ಮುಕ್ತಾಯಗೊಂಡಿದೆ. ಹೊಸ ಗುತ್ತಿಗೆ ವರೆಗೆ 715 ಆ್ಯಂಬುಲೆನ್ಸ್ ನಿರ್ವಹಣೆಗೆ ಮಾಸಿಕ 40.02 ಕೋಟಿ ರು.ನಂತೆ ಬಾಕಿ ವೇತನ ಸೇರಿ 162 ಕೋಟಿ ರು. ಬಿಡುಗಡೆ ಮಾಡಿದೆ. ಮುಂದಿನ ಮೂರು ತಿಂಗಳ ವೇತನ ಬಂದರೂ ಹಿಂದಿನ ಮೂರು ತಿಂಗಳ ವೇತನ ಇನ್ನೂ ನೀಡದ ಬಗ್ಗೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನ್ಯಾಯಾಂಗ ನಿಂದನೆ?: ಕಾರ್ಮಿಕ ಹಕ್ಕು ಕಾಯ್ದೆ ಪ್ರಕಾರ ಪ್ರತಿ ತಿಂಗಳ 10ನೇ ತಾರೀಕಿನ ಒಳಗೆ ವೇತನ ಬಿಡುಗಡೆ ಆಗಬೇಕು. ಈ ಬಾರಿ ನವೆಂಬರ್ 12 ತಾರೀಕು ಕಳೆದರೂ ವೇತನ ಕೈಸೇರಿಲ್ಲ. ಇದು ನ್ಯಾಯಾಂಗ ನಿಂದನೆಯೂ ಆಗಿದೆ. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎನ್ನುತ್ತಾರೆ ನೊಂದ 108 ಆ್ಯಂಬುಲೆನ್ಸ್ ಚಾಲಕ, ಸಿಬ್ಬಂದಿ.ರಾಜ್ಯದಲ್ಲಿರುವ ಎಲ್ಲ 108 ಆ್ಯಂಬುಲೆನ್ಸ್ ನೌಕರರಿಗೆ ಕಳೆದ ಮೂರು ತಿಂಗಳಿಂದ ವೇತನ ಸಿಕ್ಕಿಲ್ಲ. ಕಾರ್ಮಿಕ ಕಾಯ್ದೆ ಪ್ರಕಾರ ಪ್ರತಿ ತಿಂಗಳ 10 ತಾರೀಕಿನೊಳಗೆ ವೇತನ ಪಾವತಿಸಬೇಕು. ಆರೋಗ್ಯ ಇಲಾಖೆ ಮುಂಗಡ ನೀಡಿದರೂ ಸಂಸ್ಥೆ ನೌಕರರ ಖಾತೆಗೆ ಜಮೆ ಮಾಡುತ್ತಿಲ್ಲ. ಹೀಗಾದರೆ ಸರ್ಕಾರ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ.-ಮಲ್ಲಿಕಾರ್ಜುನ ಮೈಸೂರು, ಅಧ್ಯಕ್ಷರು, ಅಖಿಲ ಕರ್ನಾಟಕ 108 ನೌಕರರ ಹಿತರಕ್ಷಣಾ ಸಂಘ-------
ಜುಲೈನಿಂದ ಸೆಪ್ಟೆಂಬರ್ ವರೆಗೆ ಮುಂಗಡ ಮೊತ್ತವನ್ನು ಜುಲೈನಲ್ಲೇ ಬಿಡುಗಡೆಗೊಳಿಸಲಾಗಿದೆ. ಈಗ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗಿನ ಮುಂಗಡ ಮೊತ್ತವನ್ನೂ ನೀಡಲಾಗಿದೆ. ಇನ್ನು ಆರೋಗ್ಯ ಕವಚ ನಿರ್ವಹಿಸುತ್ತಿರುವ ಜಿವಿಕೆ-ಇಎಂಆರ್‌ಐ ಸಂಸ್ಥೆಯವರು ನೌಕರ ಖಾತೆಗೆ ವೇತನ ಮೊತ್ತ ಜಮಾ ಮಾಡಬೇಕಿದೆ. ಆರೋಗ್ಯ ಇಲಾಖೆಯಿಂದ ಸಂಸ್ಥೆಗೆ ಯಾವುದೇ ಬಾಕಿ ಇರುವುದಿಲ್ಲ.-ಪ್ರಭು ಗೌಡ, ಉಪ ನಿರ್ದೇಶಕರು, ತುರ್ತು ವೈದ್ಯಕೀಯ ಸೇವೆ, ಆರೋಗ್ಯ ಇಲಾಖೆ ಬೆಂಗಳೂರು