ತಾಲೂಕು ಶಾಮಿಯಾನ, ಡೆಕೋರೇಷನ್, ಧ್ವನಿ ಮತ್ತು ಬೆಳಕು ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನಮ್ಮ ಸಂಘ ಯಾವುದೇ ಜಾತಿ, ಧರ್ಮ, ಪಕ್ಷವಿಲ್ಲದ ಸಂಘಟನೆಯಾಗಿದೆ ಎಂದು ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಆರ್. ಲಕ್ಷ್ಮಣ್ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾಲ್ ಪಕ್ಕದಲ್ಲಿ ತಾಲೂಕು ಶಾಮಿಯಾನ, ಡೆಕೋರೇಷನ್, ದ್ವನಿ ಮತ್ತು ಬೆಳಕು ಮಾಲೀಕರ ಸಂಘದ ಆಶ್ರಯದಲ್ಲಿ ನಡೆದ 68 ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ನಮ್ಮ ಸಂಘಗಳು ರಾಜ್ಯದ ಪ್ರತಿ ತಾಲೂಕುಗಳಲ್ಲೂ ಇದೆ. ಪ್ರತಿ ವರ್ಷ ರಾಜ್ಯೋತ್ಸವ ನಡೆಸುತ್ತಿದ್ದೇವೆ. ನಮ್ಮ ಸಂಘಕ್ಕೆ ಶೃಂಗೇರಿ ಕ್ಷೇತ್ರದಲ್ಲಿ ನಿವೇಶನ ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.ಮುಖ್ಯ ಅತಿಥಿಯಾಗಿದ್ದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಯಾವುದೇ ಕಾರ್ಯಕ್ರಮ ನಡೆದರೂ ಶಾಮಿಯಾನ, ಮೈಕ್, ಬೆಳಕು ಇರಲೇ ಬೇಕಾಗಿದೆ. ಶಾಮಿಯಾನ ಸಂಘಟನೆಗಳು ಜಾತ್ಯಾತೀತ, ರಾಜಕೀಯೇತರ ಸಂಘಟನೆಯಾಗಿದ್ದು ಸರ್ಕಾರದಿಂದ ಯಾವ ರೀತಿಯ ಸಹಕಾರ ನೀಡಬಹುದು ಎಂಬ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸುತ್ತೇನೆ. ಪ್ರತಿಯೊಬ್ಬರಿಗೂ ಸೂರು ನೀಡಬೇಕು ಎಂಬುದು ಸರ್ಕಾರದ ಗುರಿ ಎಂದರು. ರಾಜ್ಯ ಶಾಮಿಯಾನ ಕ್ಷೇಮಾಭಿವೃದ್ಧಿ ಸಂಘದ ಸ್ಥಾಪಕ ಅಧ್ಯಕ್ಷ ಮಹಮ್ಮದ್ ಮುಲ್ಲಾ ಮಾತನಾಡಿ, ನಮ್ಮ ಸಂಘಟನೆ 2004 ರಲ್ಲಿ ಪ್ರಥಮ ಬಾರಿಗೆ ಪ್ರಾರಂಭವಾಯಿತು. 2019 ರಿಂದ ರಾಜ್ಯಾದ್ಯಂತ ವಿಸ್ತರಣೆ ಮಾಡಿದ್ದು ಪ್ರಥಮವಾಗಿ 12 ಜಿಲ್ಲೆಗಳಲ್ಲಿ ಸಂಘಟಿಸಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಾವೇಶ ನಡೆಸಲಿದ್ದೇವೆ ಎಂದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಶಾಮಿಯಾನ ಸಂಘದ ನೂತನ ಅಧ್ಯಕ್ಷ ಡಿ.ಐ.ಬಾಬು ವಹಿಸಿದ್ದರು. .ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಎಚ್.ನಾಗಾರ್ಜುನ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಟಿ.ಬಿ. ರಾಘವೇಂದ್ರ, ಶಾಮಿಯಾನ ಸಂಘದ ರಾಜ್ಯ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಶಫಿವುಲ್ಲಾ ಖಾನ್, ಜಿಲ್ಲಾಧ್ಯಕ್ಷ ಮಜೀದ್ ತಾಜ್, ತಾಲೂಕು ಕನ್ನಡ ಸಾಹಿತ್ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಶಾಮಿಯಾನ ಸಂಘದ ಪದಾಧಿಕಾರಿಗಳಾದ ಸುರೇಂದ್ರ ಆಚಾರ್, ನಿಸಾರ್ ಅಹಮ್ಮದ್, ಪ್ರಸನ್ನ, ಜಂಸಿದ್, ಅಹಮ್ಮದ್ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ನಡೆಯಿತು. ಸಂಘದ ಹಿರಿಯ ಸದಸ್ಯರಾದ ಕೆ.ಎ. ಅಹಮ್ಮದ್, ಅಬ್ದುಲ್ ಗನಿ ಅವರನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ಚಿಟ್ಟಿಕೊಡಿಗೆಯ ಡಿಎಸ್‌ಎಸ್ ಸೆಂಟ್ ಬೆನರಿಟ್ ಹೋಂ ನ ಸಿಸ್ಟರ್ ಅನೆಟ್, ಅರಳಿಕೊಪ್ಪದ ದಿವ್ಯ ಕಾರುಣ್ಯ ಆನಂದ ಆಶ್ರಮದ ಮುಖ್ಯಸ್ಥ ಆನಂದಸ್ವಾಮಿ ಹಾಗೂ ಸರ್ಕಾರಿ ಆಸ್ಪತ್ರೆ ಶುಶ್ರೂಷಕಿ ಸಿಸ್ಟರ್ ಜಾಸ್ಮಿನ್‌ರನ್ನು ಸನ್ಮಾನಿಸಲಾಯಿತು. ನಂತರ ಬೆಂಗಳೂರಿನ ನವೀನ್ ಡ್ಯಾನ್ಸ್ ಅಕಾಡೆಮಿ ಮಾಸ್ಟರ್ ನವೀನ್ ತಂಡದಿಂದ ನೃತ್ಯ ಹಾಗೂ ರಾಗಮಯೂರಿ ಅಕಾಡೆಮಿಯಿಂದ ಭರತ ನಾಟ್ಯ ನಡೆಯಿತು.ಬೆಳಿಗ್ಗೆ ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ, ಎಸ್.ಎಲ್ ವಿ. ಆಪ್ಟಿಕಲ್ಸ್ ನ ಯಶಸ್ವಿನಿ ಅವರಿಂದ ನೇತ್ರ ಪರೀಕ್ಷೆ ನಡೆಯಿತು. ಮದ್ಯಾಹ್ನ ಬಿ.ಎಚ್.ಕೈಮರದಿಂದ ನರಸಿಂಹರಾಜಪುರದವರೆಗೆ ಮೆರವಣಿಗೆ ನಡೆಯಿತು.