ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಉಂಟಾಗಿದೆ

KannadaprabhaNewsNetwork |  
Published : Jan 08, 2024, 01:45 AM IST
ಬಸವರಾಜ ಬೊಮ್ಮಾಯಿ | Kannada Prabha

ಸಾರಾಂಶ

ರಾಜ್ಯದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಉಳಿದಿಲ್ಲ, ಪ್ರಜಾಪ್ರಭುತ್ವ ಉಳಿಯುತ್ತಿಲ್ಲ. ಇದು ದಬ್ಬಾಳಿಕೆಯ ಸರ್ಕಾರ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ಮೇಲೆ ಕೇಸ್ ಹಾಕಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ

ಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಉಳಿದಿಲ್ಲ, ಪ್ರಜಾಪ್ರಭುತ್ವ ಉಳಿಯುತ್ತಿಲ್ಲ. ಇದು ದಬ್ಬಾಳಿಕೆಯ ಸರ್ಕಾರ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ಮೇಲೆ ಕೇಸ್ ಹಾಕಿದ್ದಾರೆ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಕರಸೇವಕರ ಮೇಲೆ ಕೇಸ್ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಶ್ರೀಕಾಂತ್ ಪೂಜಾರಿ ಅವರನ್ನು ಒಳಗಡೆ ಹಾಕಿರುವುದಕ್ಕೆ ಅವರ ಮೇಲೆ ಕೇಸ್‌ಗಳೇ ಇಲ್ಲ. ಇದೆಲ್ಲ ಯಾರ ಆದೇಶದ ಮೇಲೆ ನಡೆದಿದೆ? ರಾಜಕೀಯ ದ್ವೇಷಕ್ಕೆ ಪೊಲೀಸ್ ಇಲಾಖೆ ಬಳಕೆ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ಭಯ, ಅಶಾಂತಿ ಸೃಷ್ಟಿ ಮಾಡಿದ್ದಾರೆ. ಇದು ಬಹಳ ದುರ್ದೈವದ ಸಂಗತಿ. ಸಾಮರಸ್ಯ ಇರುವ ರಾಜ್ಯದಲ್ಲಿ ಓಟಿನ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಮರ್ಜೆನ್ಸಿ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.

ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಕೇಸ್‌ನಲ್ಲಿ ಅಮಾಯಕರನ್ನು ಕೈಬಿಡುವ ಡಿಕೆಶಿ ನಿಲುವು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಮಾಯಕರು ಅಂತ ತೀರ್ಮಾನ ಮಾಡುವವರು ಯಾರು? ಅಂದು ಗಲಭೆ ನಡೆದಾಗ ಎರಡು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು ಅಮಾಯಕರಾ? ಒಂದು ರೀತಿಯಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಎಸೆಯುವ ಶಕ್ತಿಗೆ ಅಮಾಯಕರು ಅಂತ ಕರೆಯುತ್ತಿದ್ದಾರೆ. ಪೊಲೀಸರ ಕ್ರಮ ಸರಿ ಇದೆ ಎಂದು ಇವರೇ ಒಪ್ಪಿದ್ದಾರೆ. ಸಚಿವ ಸಂಪುಟದಲ್ಲಿ ವರದಿ ಒಪ್ಪಿ, ಈಗ ಅಮಾಯಕರಿದ್ದಾರೆ ಅಂದರೆ ಹೇಗೆ? ಕಾಂಗ್ರೆಸ್‌ನವರದ್ದು ದ್ವಂದ್ವ ಧೋರಣೆಯನ್ನು ಇದು ತೋರಿಸುತ್ತದೆ. ಇದು ಓಲೈಕೆ ರಾಜಕಾರಣ. ಅಮಾಯಕರು ಎಂದು ಕೋರ್ಟ್ ತೀರ್ಮಾನ ಮಾಡಲಿ. ಡಿಜೆ ಹಳ್ಳಿ ಕೆಜಿ ಹಳ್ಳಿ ಕೇಸ್ ವೀಕ್ ಮಾಡುತ್ತಿದ್ದಾರೆ. ದುಷ್ಟಶಕ್ತಿಗೆ ಪಾರಾಗಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಮ ಮಂದಿರ ಕ್ರೆಡಿಟ್ ಕೇವಲ ಮೋದಿಗ್ಯಾಕೆ ಎಂಬ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇರೆಯವರು ಕ್ರೆಡಿಟ್ ತಗೊಳೋಕೆ ತಯಾರಿಲ್ಲ, ನಾವೇನು ಮಾಡೋಣ? ಬಿ.ಕೆ. ಹರಿಪ್ರಸಾದ್ ಹೇಳಿಕೆ ಬಗ್ಗೆ ಅವರ ಗೃಹ ಸಚಿವರೇ ಹೇಳುತ್ತಿದ್ದಾರೆ. ಗೋದ್ರಾ ಮಾದರಿ ಗಲಾಟೆ ಆಗಲಿದೆ ಅಂತ ಹರಿಪ್ರಸಾದ್ ಹೇಳಿದ್ದಾರೆ. ಹರಿಪ್ರಸಾದ್ ಸಾಕ್ಷಿ ಸಮೇತ ಕೊಡಬೇಕಿತ್ತು. ಮೊದಲು ಹರಿಪ್ರಸಾದ್ ಮೇಲೆ ಸಮನ್ಸ್ ಜಾರಿ ಮಾಡಲಿ, ಅದೇ ಬಿಜೆಪಿಯವರು ಹೀಗೆ ಹೇಳಿದ್ದರೆ ಬಿಡುತ್ತಿದ್ದರಾ ಎಂದು ಪ್ರಶ್ನಿಸಿದರು.

ಲೋಕಸಭೆಗೆ ಸ್ಪರ್ಧಿಸಲ್ಲ:

ರಾಷ್ಟ್ರ ರಾಜಕಾರಣ ಪ್ರವೇಶ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅ‍ವರು, ನಾನು ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ. ನನ್ನ ಮುಂದೆ ಯಾರೂ ಹೇಳಿಲ್ಲ. ಈ ಬಗ್ಗೆ ಮಾತನಾಡಿಯೂ ಇಲ್ಲ. ಉಹಾಪೋಹದ ಪ್ರಶ್ನೆಗೆ ನಾನು ಉತ್ತರ ಕೊಡುವುದಿಲ್ಲ. ಸ್ಪರ್ಧಿಸುತ್ತೇನೆ ಎಂದು ನಾನು ಹೇಳಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ