ಧಾರವಾಡ: ಇಡೀ ಕರ್ನಾಟಕ ತಲುಪಲಿಲ್ಲ ಆನಂದಕಂದರ ಸಾಹಿತ್ಯ - ಡಾ. ವಿನಯಾ ಒಕ್ಕುಂದ

KannadaprabhaNewsNetwork |  
Published : Apr 17, 2025, 01:15 AM ISTUpdated : Apr 17, 2025, 08:40 AM IST
16ಡಿಡಬ್ಲೂಡಿ7ಕರ್ನಾಟಕ ವಿದ್ಯಾವರ್ಧಕ ಸಂಘವು  ಪಂಡಿತ ಅವಳೀಕರ ಕೊಡಮಾಡಿದ ಬೆಟಗೇರಿ ಕೃಷ್ಣಶರ್ಮ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಆನಂದಕದ ಪ್ರಶಸ್ತಿ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ಇಂದು ಜಾತಿ, ಲಿಂಗ, ವರ್ಣ, ವರ್ಗ, ಭಾಷೆಗಳೆಂಬ ವೈರಸ್‌ಗಳು ಜನರ ಮನಸ್ಸನ್ನು ಒಡೆಯುತ್ತವೆ. ಭಾಷಾ ಬಾಂಧವ್ಯವನ್ನು ಬೆಸೆಯುವ ಕಾರ್ಯವನ್ನು ಡಾ. ಬೆಟಗೇರಿ ಕೃಷ್ಣಶರ್ಮ ಮಾಡಿದರು.

ಧಾರವಾಡ: ಆನಂದಕಂದ ನಾಮಾಂಕಿತ ಸಾಹಿತಿ ಬೆಟಗೇರಿ ಕೃಷ್ಣಶರ್ಮರು ರಚಿಸಿದ ಸಾಹಿತ್ಯ ಇಡೀ ಕರ್ನಾಟಕವನ್ನು ತಲುಪದೇ ಇದ್ದದ್ದು ಖೇದದ ಸಂಗತಿ. ಅವರು ರಚಿಸಿದ ದಾಂಪತ್ಯ ಗೀತೆಗಳಿಗೆ ಸಿಗಬೇಕಾದ ಪ್ರಾಧಾನ್ಯತೆ ಸಿಕ್ಕಿಲ್ಲ. ಅವರು ಹಲವಾರು ಪತ್ರಿಕೆಗಳ ಸಂಪಾದಕರಾಗಿ ಪತ್ರಿಕೋದ್ಯಮಕ್ಕೆ ದಾಖಲೆಯಾದವರು ಎಂದು ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ಅಧ್ಯಕ್ಷೆ ಡಾ. ವಿನಯಾ ಒಕ್ಕುಂದ ಹೇಳಿದರು.

ಅವರು ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯ ಬಲಪಡಿಸಲೆಂದು ಪಂ. ಅವಳೀಕರ ಕೊಡಮಾಡಿದ ಬೆಟಗೇರಿ ಕೃಷ್ಣಶರ್ಮ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಆನಂದಕದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಭಾಷೆ ಬೇರೆ ಇದ್ದರೂ ಭಾವನೆಗಳು ಒಂದೇ ಆಗಿರುತ್ತವೆ. ಕರ್ನಾಟಕ, ಮಹಾರಾಷ್ಟ್ರ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಒಂದೆಯಾಗಿದ್ದು, ಎರಡೂ ಭಾಷೆಗಳಿಂದ ಕೂಡಿದ ಸ್ಥಳ ಕರ್ನಾಟಕ ಎಂದು ಅವರು ನಂಬಿದ್ದರು ಎಂದರು.

ಭಾಷಾ ಬಾಂಧವ್ಯ ಬೆಳೆಸಲಿ: ಇಂದು ಜಾತಿ, ಲಿಂಗ, ವರ್ಣ, ವರ್ಗ, ಭಾಷೆಗಳೆಂಬ ವೈರಸ್‌ಗಳು ಜನರ ಮನಸ್ಸನ್ನು ಒಡೆಯುತ್ತವೆ. ಭಾಷಾ ಬಾಂಧವ್ಯವನ್ನು ಬೆಸೆಯುವ ಕಾರ್ಯವನ್ನು ಡಾ. ಬೆಟಗೇರಿ ಕೃಷ್ಣಶರ್ಮ ಮಾಡಿದರು. 82 ವರ್ಷ ಬದುಕಿದ್ದ ಬೆಟಗೇರಿ ಅವರು ಗೋಕಾಕ, ಬೆಳಗಾವಿ, ಧಾರವಾಡನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು ಎಂದರು.

ಎರಡೂ ಸಂಸ್ಕೃತಿ ಒಂದೆ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೇಡಕಿಹಾಳದ ಕುಸುಮಾವತಿ ಮಿರಜಿ ಕಾಲೇಜಿನ ಮರಾಠಿ ವಿಭಾಗದ ಮುಖ್ಯಸ್ಥ ಡಾ. ಗೋಪಾಲ ಮಹಾಮುನಿ, ಭಾಷಾ ಭಿನ್ನತೆಯಿದ್ದರೂ ಸಂಸ್ಕೃತಿ ಒಂದೇ. ಎರಡೂ ಒಂದೇ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ. ಕರ್ನಾಟಕ ಮಹಾರಾಷ್ಟ್ರ ಭಾಷಾ ಸಮನ್ವಯ ಸಮಿತಿಯ ರಚನೆಯಾಗಬೇಕಾದ ಅಗತ್ಯವಿದೆ. ಇದರಿಂದ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ಮನಸ್ಸು ಜೋಡಿಸಲಿ: ವಿಶ್ರಾಂತ ಕೆ.ಎ.ಎಸ್. ಅಧಿಕಾರಿ ಡಾ. ವಿಜಯಕುಮಾರ ತೊರಗಲ್ ಮಾತನಾಡಿ, ಯಾವುದೇ ಭಾಷೆ ಮನುಸ್ಸುಗಳನ್ನು ಜೋಡಿಸುವ ಕ್ರಿಯೆ ಮಾಡಬೇಕಾಗಿದೆ. ಕರ್ನಾಟಕದ ಆಡಳಿತದ ಬರವಣಿಗೆಯಲ್ಲಿ ಸಾಕಷ್ಟು ಮರಾಠಿ ಪದಗಳ ಬಳಕೆ ಇವತ್ತಿಗೂ ಕೂಡ ಇರುವುದನ್ನು ಕಾಣುತ್ತೇವೆ. ಪಂಡರಪುರದ ವಿಠ್ಠಲ ಭಕ್ತಿ ಪರಂಪರೆಯಿಂದ ಬಾಂಧವ್ಯ ಬೆಸೆಯುವ ಕೊಂಡಿಯಾಗಿದೆ. ಬೆಟಗೇರಿ ಕೃಷ್ಣಶರ್ಮ ಅವರು ಬರೆದಿರುವ ‘ಕನ್ನಡ ಸಂಸ್ಕೃತಿ ಪರಂಪರೆ’ ಎಂಬ ಕೃತಿಯನ್ನು ಎಲ್ಲರೂ ಓದಲೇಬೇಕು. ಅದರಲ್ಲಿ ಇಡೀ ಕರ್ನಾಟಕದ ಸಂಸ್ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಪ್ರೊ. ವಿದ್ಯಾ ಕುಲಕರ್ಣಿ ವಹಿಸಿದ್ದರು. ಆನಂದ ಕಂದ ಗೆಳೆಯರ ಬಳಗದ ರಾಜು ಕುಲಕರ್ಣಿ ಹಾಗೂ ಸಂಗಡಿಗರಿಂದ‘ಆನಂದ ಕಂದರ’ ಗೀತಗಾಯನ ಜರುಗಿತು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ