ನಾಗರಾಜ ಗದ್ದಿ
ಕನ್ನಡಪ್ರಭ ವಾರ್ತೆ ಕಾಳಗಿತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ, ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಕೋರವಾರ ಅಣವೀರಭದ್ರೇಶ್ವರ ಸ್ವಾಮಿಯ ಜಾತ್ರೆ ಇಂದಿನಿಂದ ಎರಡು ದಿನಗಳ ಬಹು ವಿಜೃಂಭಣೆಯಿಂದ ನಡೆಯುತ್ತಿದೆ.
ಮಾ.10ರಂದು ಬೆಳಗ್ಗೆ ಸ್ವಾಮಿಯ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ವಿವಿಧ ಬಗೆಯ ಪೂಜಾ ಕೈಂಕರ್ಯಗಳು ಅರ್ಚಕ ಧನಂಜಯ ಹಿರೇಮಠ ರವರ ವೈದಿಕತ್ವದಲ್ಲಿ ನಡೆಯುತ್ತವೆ. ಸಂಜೆ 6 ಗಂಟೆಗೆ ಅಗ್ನಿಕುಂಡಕ್ಕೆ ಹೋಮಹವನ ಪೂಜೆ ಸಲ್ಲಿಸಿ ಅಗ್ನಿ ಪುಟು ಮಾಡುವರು. ನಂತರ ಕಾಳಗಿ ತಹಸೀಲ್ದಾರ ಘಮಾವತಿ ರಾಠೋಡ ದಾಸೋಹಕ್ಕೆ ಚಾಲನೆ ನೀಡುವರು. ರಾತ್ರಿ 11 ಗಂಟೆಗೆ, ಪಟ್ಟದ ಪುರವಂತ ಸೋಮೇಶ ಕಂಠಿ ರವರ ನೇತೃತ್ವದಲ್ಲಿ, ಅಣವೀರಭದ್ರೇಶ್ವರ ಪಲ್ಲಕ್ಕಿ, ಸಹಸ್ರಾರು ಪುರವಂತರ ವೀರಗಾಸೆ ನೃತ್ಯದೊಂದಿಗೆ, ಸಹಸ್ರಾರು ಭಕ್ತರು ಅಗ್ನಿಪ್ರವೇಶ ಮಾಡುವರು.ಮಾ.11ರಂದು, ಬೆಳಗ್ಗೆ ಗರ್ಭಗುಡಿಯ ಅಣೀರುದ್ರ ದೇವರ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ ಹಲವಾರು ಬಗೆಯ ಪೂಜೆ ಮಾಡುವರು. ಸಂಜೆ 4 ಗಂಟೆಗೆ ಕೊರವಾರದ ಗ್ರಾಮದ ಪ್ರತಿಷ್ಠಿತ ಮನೆತನ ಬಸವಲಿಂಗ ರವರ ಮನೆತನದಿಂದ ನಂದಿಧ್ವಜ ಮತ್ತು ಕುಂಭ, ರಥೋತ್ಸವದ ಕಳಶವನ್ನು ತೆಗೆದುಕೊಂಡು, ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬಿದಿಗಳಲ್ಲಿ ಬಾಜಾ ಭಜಂತ್ರಿ ಮಂಗಳ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ತೆರಳುವರು.
ರಾತ್ರಿ 8 ಗಂಟೆಗೆ, ವಿದ್ಯುತ್ ದೀಪ ಫಲಪುಷ್ಪಗಳಿಂದ ಅಲಂಕೃತಗೊಂಡಗೊಂಡ ಸ್ವಾಮಿಯ ರಥೋತ್ಸವಕ್ಕೆ ತಹಸೀಲ್ದಾರ, ದೇವಸ್ಥಾನ ಕಾರ್ಯದರ್ಶಿ, ಅರ್ಚಕರು, ಪಟ್ಟದ ಪುರವಂತರ ವೀರಗಾಸೆ ನೃತ್ಯದೊಂದಿಗೆ ಚಾಲನೆ ನೀಡುವರು. ಮಾ.12ರಂದು ಬೆ.8ಕ್ಕೆ ಪೈಲ್ವಾನರ ಜಂಗಿ ಕುಸ್ತಿ, ವಿವಿಧ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ದೇವಸ್ಥಾನದ ಕಾರ್ಯದರ್ಶಿ ಸಿದ್ಧಲಿಂಗ ಹೇಳಿದ್ದಾರೆ.ದೇವಸ್ಥಾನದ ಹಿನ್ನೆಲೆ: 700 ವರ್ಷಗಳ ಹಿಂದೆ ಕಲಬುರಗಿಯ ಪ್ರತಿಷ್ಠಿತ ನವಣಿ ರುದ್ರಪ್ಪ ಸಾಹುಕಾರರು ಮುತ್ತು, ರತ್ನ ವ್ಯಾಪಾರಕ್ಕಾಗಿ ಹೈದ್ರಾಬಾದಿಗೆ ದೇವಸ್ಥಾನದ ಮಾರ್ಗದಿಂದ ತೆರಳಿದ್ದರು, ಸಾಹುಕಾರ ಮರಳಿ ಬರುವ ಸಂಧರ್ಭದಲ್ಲಿ ಅಣವೀರಭದ್ರೇಶ್ವರ ಸ್ವಾಮಿಯು ಮಾರುವೇಶದಲ್ಲಿ ಸಾಹುಕಾರನಿಗೆ ಪರೀಕ್ಷಿಸಿದರು.
ಕುದುರೆಯ ಮೇಲೆ ತುಂಬಾ ಬಟ್ಟೆಯ ಗಂಟುಗಳು ತೆಗೆದುಕೊಂಡು ಹೊಗುತ್ತಿರುವೆ ಏನವು? ಎಂದು ಕೇಳಿದಾಗ, ಗಂಟುಗಳಲ್ಲಿ ಕಲ್ಲಿದ್ದಲಿದೆ ಎಂದು ನವಣಿ ಸಾವುಕಾರ ಉತ್ತರಿಸಿದ. ಮನೆಗೆಹೋಗಿ ಮುತ್ತು ರತ್ನಗಳ ಗಂಟನ್ನು ತೆಗೆದುಕೊಂಡು ನೋಡಿದಾಗ ಕಲ್ಲಿದ್ದಲಾಗಿದ್ದವು.ಇದು ಅಣವೀರರ ಪವಾಡವೆಂದು ಅರಿವಾಯಿತು. ಸಾವುಕಾರ ನೇರ ಸ್ವಾಮಿ ಅಣವೀರಭದ್ರೇಶ್ವರಲ್ಲಿ ಹೋಗಿ ನಿಂತ, ವ್ಯಾಪಾರದ ಮುತ್ತು ರತ್ನಗಳನ್ನು ಕಲ್ಲಿದ್ದಲಾದ ಮಾಹಿತಿ ನೀಡುತ್ತಾ ಉದ್ಧರಿಸೆಂದು ಕೋರಿದ. ಕಲ್ಲಿದ್ದಲು ಮುತ್ತುಗಳಾಗಿ ಕಂಡಾಗ ಅಲ್ಲೇ ಸಾಹುಕಾರರು ಅಣವೀರ ಭದ್ರರ ಭ‍್ಯ ಮಂದಿರ ನಿರ್ಮಿಸಿದರು ಎಂದು ಹೇಳಲಾಗುತ್ತದೆ.
ಭಕ್ತಿಯಿಂದ ಬಂಡೆಪ್ಪ ಗೆದ್ದ: ಹೆಬ್ಬಾಳದ ಜೇಡರ ಬಂಡೆಪ್ಪ ಭಕ್ತನೆಂಬುವನು ಭಕ್ತಿಯಿಂದ ಹಲಕರ್ಟಿ ವೀರಭದ್ರ ಸ್ವಾಮಿಗೆ ನೈವೇದ್ಯ ತೆಗೆದುಕೊಂಡು ಬರಿಗಾಲಲ್ಲೇ ಹೋಗುತ್ತಿದ್ದಾಗ, ದೇವಸ್ಥಾನಕ್ಕೆ ತೆರಳುವ ಸಂಧರ್ಭದಲ್ಲಿ ಮಾರ್ಗಮಧ್ಯದಲ್ಲಿ ಕಾಗಿಣ ನದಿ ಭೋರ್ಗರೆಯುತ್ತಿತ್ತು. ಭಕ್ತನಿಗೆ ಸ್ವಾಮಿಯಲ್ಲಿ ತೆರಳಲು ಅಡ್ಡಿಯಾಯಿತು. ಆಗ ಸ್ವಾಮಿಯು ಪ್ರತ್ಯಕ್ಷರಾದಾಗ ಮನೆಯಲ್ಲೇ ನೆಲೆಸೆಂದು ಭಕ್ತನಿಗೆ ಜಾಂಗಟೆ ಸಪ್ಪಳ ಕೆಳದಾಯಿತು, ಭಕ್ತ ಹಿಂತಿರುಗಿ ನೋಡಿದ. ಸ್ವಾಮಿಯು ಅಣೀ ಪರ್ವತದಲ್ಲಿ ನೆಲೆನಿಂತು ಬೇಡಿದ ಭಕ್ತರ ಇಷ್ಟಾರ್ಥ ಪೂರೈಸುತ್ತಿದ್ದಾರೆ.ಬಸ್ ಸೌಲಭ್ಯ: ಅಸಂಖ್ಯಾತ ಭಕ್ತರ ದಂಡು ಸೇರುವ ಸಿದ್ದಿಯ ಜಾತ್ರೆ ಇದಾಗಿದೆ. ಭಕ್ತಾದಿಗಳು ಅಗ್ನಿಹಾಯುವ ಸಂಧರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ಭಕ್ತರು ಸಾವಧಾನದಿಂದ ಸರತಿಸಾಲಿನಲ್ಲಿ ಭಕ್ತಿಯ ಪರಾಕಾಷ್ಠೇ ಮೆರೆಯಬೇಕು. ತಾಲ್ಲೂಕು ಆಡಳಿತ ಗೃಹ ಇಲಾಖೆ, ಸರಕಾರದ ವಿವಿಧ ಇಲಾಖೆಯಿಂದ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಕಲಬುರಗಿ ಇತರೆ ಸ್ಥಳಗಳಿಂದ ಬರುವ ಭಕ್ತರಿಗೆ ಬಸ್ ಸೌಲಭ್ಯವಿದೆ ಎಂದು ಕಾಳಗಿ ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ.