ಧೂಳು, ಬಿಸಿಲಲ್ಲಿ ಪಾಠ ಆಲಿಸುವ ಅಂಗನವಾಡಿ ಮಕ್ಕಳು

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಅಂಗನವಾಡಿ ಪಕ್ಕದಲ್ಲಿಯೇ ರೈಲ್ವೆ ನಿಲ್ದಾಣ ಕಾಮಗಾರಿ ನಡೆದಿರುವುದರಿಂದ ವಿಪರೀತ ಧೂಳು ಬರುತ್ತಿದೆ. ಹೀಗಾಗಿ, ಇಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ವಿಪರೀತ ಧೂಳು, ಬಿಸಿಲಿನಿಂದಾಗಿ ಇಲ್ಲಿಯ ಅಂಗನವಾಡಿ ಕಂದಮ್ಮಗಳು ನಲುಗುತ್ತಿವೆ.

ಕೊಪ್ಪಳ ರೈಲ್ವೆ ಸ್ಟೇಷನ್ ಬಳಿಯ ಸರ್ಕಾರಿ ಅಂಗನವಾಡಿ ಕೇಂದ್ರದಲ್ಲಿನ ಕಂದಮ್ಮಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.ಅಂಗನವಾಡಿ ಕಟ್ಟಡ ಶಿಥಿಲಗೊಂಡಿರುವುದರಿಂದ ಚಾವಣಿಯ ಪದರು ಕಿತ್ತು ಬೀಳುತ್ತಿದೆ. ಇದರಿಂದ ಮಕ್ಕಳ ಪ್ರಾಣಕ್ಕೆ ಅಪಾಯ ಎದುರಾಗಿದೆ ಎಂದು ಅಂಗನವಾಡಿ ಮಕ್ಕಳನ್ನು ಅಂಗಳದಲ್ಲಿಯೇ ಕೂಡಿಸಿ ಪಾಠ ಮಾಡಲಾಗುತ್ತಿದೆ.ಹೀಗಾಗಿ, ಮಕ್ಕಳು ಅನಿವಾರ್ಯವಾಗಿ ಅಂಗಳದಲ್ಲಿಯೇ ಚಾಪೆ ಮೇಲೆ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಇದೆ. ಇಡೀ ದಿನ ಮಕ್ಕಳು ಉರಿಬಿಸಿಲಿನಲ್ಲಿಯೇ ಕುಳಿತುಕೊಳ್ಳುತ್ತಿರುವುದರಿಂದ ಅನೇಕ ಮಕ್ಕಳು ಸುಸ್ತಾಗಿದ್ದಾರೆ.ಮಕ್ಕಳು ಗೈರು:ಅಂಗನವಾಡಿ ಕಟ್ಟಡ ಶಿಥಿಲಗೊಂಡು ಮಕ್ಕಳು ಅಂಗಳದಲ್ಲಿಯೇ ಪಾಠ ಮಾಡಬೇಕಾಗಿರುವುದರಿಂದ ಅನೇಕ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ.ಬಿಸಿಲಿನಲ್ಲಿ ಮಕ್ಕಳು ಕುಳಿತುಕೊಳ್ಳುವುದಾದರೂ ಹೇಗೆ? ಮಕ್ಕಳು ಸುಸ್ತಾಗುತ್ತಿದ್ದಾರೆ, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ, ನಾವು ಮಕ್ಕಳನ್ನು ಕಳುಹಿಸುವುದನ್ನೇ ಬಿಟ್ಟಿದ್ದೇವೆ ಎನ್ನುತ್ತಾರೆ ಹೆಸರು ಹೇಳಲು ಬಯಸದ ಪಾಲಕರು.ಜತೆಗೆ ಅಂಗನವಾಡಿ ಪಕ್ಕದಲ್ಲಿಯೇ ರೈಲ್ವೆ ನಿಲ್ದಾಣ ಕಾಮಗಾರಿ ನಡೆದಿರುವುದರಿಂದ ವಿಪರೀತ ಧೂಳು ಬರುತ್ತಿದೆ. ಹೀಗಾಗಿ, ಇಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.ಅಂಗನವಾಡಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಬಂಧ ಇಲ್ಲದಂತೆ ವರ್ತಿಸುತ್ತಿದೆ.2-3 ವರ್ಷದ ಮಕ್ಕಳನ್ನು ಇಡೀ ದಿನ ಬಿಸಿಲಿನಲ್ಲಿ ಕೂಡಿಸುವುದು ಎಷ್ಟು ಸರಿ ಎನ್ನುವ ಕನಿಷ್ಠ ಕನಿಕರವೂ ಇಲ್ಲವೇ ಎನ್ನುವ ಪ್ರಶ್ನೆಗೆ ಇಲಾಖೆಯ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.ಸುಮಾರು 30ಕ್ಕೂ ಹೆಚ್ಚು ಅಂಗನವಾಡಿ ಮಕ್ಕಳು ಇದ್ದರೂ ಈಗ ಅಂಗನವಾಡಿಗೆ ಬರುತ್ತಿರುವುದು ಕೇವಲ 8-10 ಮಕ್ಕಳು ಮಾತ್ರ. ಬಂದ ಮಕ್ಕಳು ಇಡೀ ದಿನ ಬಿಸಿಲಿನಲ್ಲಿ ಕುಳಿತುಕೊಳ್ಳಲು ಆಗದೇ ಸುಸ್ತಾಗಿ ಮನಗೆ ವಾಪಸ್ ಹೋಗುತ್ತಾರೆ.ಇದೆಲ್ಲ ಗೊತ್ತಿದ್ದರೂ ಅಂಗನವಾಡಿ ಶಿಕ್ಷಕಿ, ಸಹಾಯಕಿಯರು ಅಸಹಾಯಕರಾಗಿದ್ದಾರೆ. ಕಟ್ಟಡದ ಒಳಗೆ ಕೂಡಿಸಿದರೆ ಉದುರಿ ಬೀಳುವ ಕಟ್ಟಡದ ಚಾವಣಿಯ ಪದರ ಬೀಳುತ್ತಾ ಜೀವಭಯ ಹೆಚ್ಚಿಸಿದೆ.ಅಂಗನವಾಡಿ ಮಕ್ಕಳನ್ನು ಅಂಗಳಲ್ಲಿಯೇ ಕೂಡಿಸುವುದು ಎಷ್ಟು ಸರಿ? ಇಂಥ ಬಿಸಿಲು, ಚಳಿಯಲ್ಲಿ ಮಕ್ಕಳ ಆರೋಗ್ಯದ ಸ್ಥಿತಿ ಏರು-ಪೇರಾಗುವುದಿಲ್ಲವೇ? ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹ. -ಬಸವರಾಜ ಶೀಲವಂತರ, ಹೋರಾಟಗಾರನಮ್ಮ ಮಕ್ಕಳನ್ನು ಹೀಗೆ ಅಂಗಳದಲ್ಲಿ ಕೂಡಿಸುತ್ತಿದ್ದಾರೆ. ಇದರಿಂದ ಮಕ್ಕಳು ನಿತ್ಯವೂ ಗೋಳಾಡುತ್ತಿವೆ. ವಿಧಿಯಿಲ್ಲದೇ ಕಳುಹಿಸುತ್ತಿದ್ದೇವೆ. -ಹೆಸರು ಹೇಳಲು ಬಯಸದ ಪಾಲಕ

Share this article