ಕಡಲತಡಿ ಪ್ರವಾಸೋದ್ಯಮಕ್ಕೆ ಬೇಡವಾದ ಆ್ಯಂಗ್ಲಿಂಗ್‌ ಕಾರ್ನಿವಲ್‌!

KannadaprabhaNewsNetwork | Published : May 20, 2025 1:33 AM
ಮಂಗಳೂರಿನ ಗಿಫ್ಟೆಡ್ ಇಂಡಿಯಾ ಕಂಪನಿ ಆಯೋಜನೆಯಲ್ಲಿ 2017ರ ಡಿಸೆಂಬರ್‌ನಲ್ಲಿ ಪ್ರಥಮ ಬಾರಿಗೆ ಇಲ್ಲಿನ ಪಣಂಬೂರು ಬೀಚ್‌ ಎರಡು ದಿನಗಳ ಆ್ಯಂಗ್ಲಿಂಗ್‌ ಕಾರ್ನಿವಲ್‌ಗೆ ತೆರೆದುಕೊಂಡಿತ್ತು. ಇದರಲ್ಲಿ ಭಾರತ, ಮಲೇಶಿಯಾ, ಒಮಾನ್‌ ಸೇರಿದಂತೆ ನಾಲ್ಕು ರಾಷ್ಟ್ರಗಳಿಂದ 40 ಮಂದಿ ಆ್ಯಂಗ್ಲಲರ್‌ಗಳು (ಗಾಳ ಹಾಕುವವರು) ಆಗಮಿಸಿದ್ದರು. 2018ರ ನವೆಂಬರ್‌ನಲ್ಲಿ ಎರಡನೇ ವರ್ಷದ ಆ್ಯಂಗ್ಲಿಂಗ್‌ ಕಾರ್ನಿವಲ್‌ ಮಂಗಳೂರಲ್ಲಿ ಆಯೋಜನೆಗೊಂಡಿತ್ತು. ಅದರಲ್ಲಿ ಭಾರತ ಸೇರಿ 10 ರಾಷ್ಟ್ರಗಳ 148 ಮಂದಿ ಭಾಗವಹಿಸಿದ್ದರು.
Follow Us

ಆತ್ಮಭೂಷಣ್‌ಕನ್ನಡಪ್ರಭ ವಾರ್ತೆ ಮಂಗಳೂರು

ಕಡಲತಡಿಯ ಪ್ರವಾಸೋದ್ಯಮ ಆಕರ್ಷಿಸಲು ಜಿಲ್ಲಾಡಳಿತ ಏರ್ಪಡಿಸುವ ಗಾಳಿಪಟ ಸ್ಪರ್ಧೆ, ಸರ್ಫಿಂಗ್‌ ಸಾಲಿಗೆ ಸೇರಿದ್ದ ಜನಪ್ರಿಯವಾದ ಸ್ಪರ್ಧೆ ‘ಆ್ಯಂಗ್ಲಿಂಗ್‌ ಕಾರ್ನಿವಲ್‌’ ಸದ್ಯ ಸದ್ದಿಲ್ಲದೆ ತೆರೆಮರೆಗೆ ಸರಿದಿದೆ. ಏಳು ವರ್ಷಗಳಿಂದ ಸ್ಥಗಿತಗೊಂಡಿದ್ದ ಆ್ಯಂಗ್ಲಿಂಗ್‌ ಕಾರ್ನಿವಾಲ್‌ನ್ನು ಮರು ಆಯೋಜಿಸುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಒತ್ತಾಯಿಸುತ್ತಾ ಬರುತ್ತಿದ್ದರೂ ಕಡಲತಡಿಯ ಪ್ರವಾಸೋದ್ಯಮ ಗಾಳಕ್ಕೆ ಮಾತ್ರ ಆ್ಯಂಗ್ಲಿಂಗ್‌ ಕಾರ್ನಿವಾಲ್‌ ಬೀಳಲೇ ಇಲ್ಲ!

ಮಂಗಳೂರಿನ ಗಿಫ್ಟೆಡ್ ಇಂಡಿಯಾ ಕಂಪನಿ ಆಯೋಜನೆಯಲ್ಲಿ 2017ರ ಡಿಸೆಂಬರ್‌ನಲ್ಲಿ ಪ್ರಥಮ ಬಾರಿಗೆ ಇಲ್ಲಿನ ಪಣಂಬೂರು ಬೀಚ್‌ ಎರಡು ದಿನಗಳ ಆ್ಯಂಗ್ಲಿಂಗ್‌ ಕಾರ್ನಿವಲ್‌ಗೆ ತೆರೆದುಕೊಂಡಿತ್ತು. ಇದರಲ್ಲಿ ಭಾರತ, ಮಲೇಶಿಯಾ, ಒಮಾನ್‌ ಸೇರಿದಂತೆ ನಾಲ್ಕು ರಾಷ್ಟ್ರಗಳಿಂದ 40 ಮಂದಿ ಆ್ಯಂಗ್ಲಲರ್‌ಗಳು (ಗಾಳ ಹಾಕುವವರು) ಆಗಮಿಸಿದ್ದರು. 2018ರ ನವೆಂಬರ್‌ನಲ್ಲಿ ಎರಡನೇ ವರ್ಷದ ಆ್ಯಂಗ್ಲಿಂಗ್‌ ಕಾರ್ನಿವಲ್‌ ಮಂಗಳೂರಲ್ಲಿ ಆಯೋಜನೆಗೊಂಡಿತ್ತು. ಅದರಲ್ಲಿ ಭಾರತ ಸೇರಿ 10 ರಾಷ್ಟ್ರಗಳ 148 ಮಂದಿ ಭಾಗವಹಿಸಿದ್ದರು. ಈ ಸ್ಪರ್ಧೆಗಳು ಪಣಂಬೂರಿನ ಎನ್‌ಎಂಪಿಎ ಬ್ರೇಕ್‌ ವಾಟರ್‌ ಬಳಿ ನಡೆಯುತ್ತಿತ್ತು. ಇವುಗಳಿಗೆ ತಲಾ 15 ಲಕ್ಷ ರು. ವೆಚ್ಚವಾಗಿದ್ದು, ಸಂಘಟಕರೇ ಭರಿಸಿದ್ದರು.

ಏನಿದು ಆ್ಯಂಗ್ಲಿಂಗ್‌ ಕಾರ್ನಿವಲ್‌?:

ಆ್ಯಂಗ್ಲಿಂಗ್‌ ಕಾರ್ನಿವಲ್‌ ಎಂದರೆ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ. ಗಾಳ ಹಾಕುವ ಸ್ಟಿಕ್‌ನ್ನು ಹಿಡಿದುಕೊಂಡು ನದಿ ತಟದಲ್ಲಿ ಕುಳಿತು ಮೀನಿಗೆ ಗಾಳ ಹಾಕುತ್ತಾ ಕೂರಬೇಕು. ಮೀನು ಗಾಳಕ್ಕೆ ಸಿಕ್ಕಿದಾಗ ಅದನ್ನು ಮೇಲಕ್ಕೆ ಎಳೆದು ತೂಕ ಮಾಡಿ ಮರಳಿ ನೀರಿಗೆ ಬಿಡಬೇಕು. ಜಾಸ್ತಿ ಮೀನು ಹಿಡಿದವರಿಗೆ 50 ಸಾವಿರ ರು. ವರೆಗೆ ಬಹುಮಾನ ಇರುತ್ತದೆ. ಈ ಸ್ಪರ್ಧೆಯಲ್ಲಿ ಯಾವುದೇ ಕಾರಣಕ್ಕೂ ಹಿಡಿದ ಮೀನನ್ನು ಉಪಯೋಗಿಸಲು ಆಸ್ಪದ ಇಲ್ಲ. ಮೀನು ಗಾಳಕ್ಕೆ ಸಿಲುಕಲು ಸ್ಟಿಕ್‌ನ ಕೊನೆಯಲ್ಲಿ ಕೃತಕ ವಸ್ತು ಇರಿಸುತ್ತಾರೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ, ಮಧ್ಯಾಹ್ನ 12ರಿಂದ ಸಂಜೆ 6 ಗಂಟೆ ವರೆಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ಇರುತ್ತದೆ.

ಆ್ಯಂಗ್ಲಿಂಗ್‌ ನಡೆಸುವುದರಿಂದ ಪರಿಸರಕ್ಕೆ ಹಾನಿ ಇಲ್ಲ, ತಾಳ್ಮೆ, ಸಹನೆಯಿಂದ ಮೀನನ್ನು ಗಾಳಕ್ಕೆ ಹಾಕುವ ಗುರಿ ತಲುಪುದು ಈ ಸ್ಪರ್ಧೆಯ ನಿಯಮ.

.....................

ದೇಶದಲ್ಲೇ ಮಂಗ್ಳೂರು ಹಾಟ್‌ಸ್ಪಾಟ್‌

ಆ್ಯಂಗ್ಲಿಂಗ್‌ ಕಾರ್ನಿವಲ್‌ನ್ನು ಎಲ್ಲೆಂದರಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಗಾಳಕ್ಕೆ ಪ್ರಶಸ್ತ ಸ್ಥಳ ಹಾಗೂ ಹೇರಳ ಮೀನು ಸಿಗುವ ಜಾಗವೇ ಆಗಬೇಕು. ಇಂತಹ ಸೂಕ್ತ ಸ್ಥಳ ಇರುವುದು ಮಂಗಳೂರು ಕಡಲತೀರದಲ್ಲಿ. ಆ್ಯಂಗ್ಲಿಂಗ್‌ ತಜ್ಞರ ಪ್ರಕಾರ ಇಡೀ ದೇಶದಲ್ಲಿ ಪಣಂಬೂರು ಬ್ರೇಕ್‌ವಾಟರ್‌ನಂತಹ ಸ್ಥಳ ಆ್ಯಂಗ್ಲಿಂಗ್‌ಗೆ ಬೇರೆ ಸಿಗದು. ಈ ಬ್ರೇಕ್‌ವಾಟರ್‌ ನವಮಂಗಳೂರು ಬಂದರು ಪ್ರಾಧಿಕಾರಕ್ಕೆ ಸೇರಿರುವುದರಿಂದ ಅದರ ಅನುಮತಿ ಅತ್ಯಗತ್ಯ. ಆ್ಯಂಗ್ಲಿಂಗ್‌ನಿಂದ ಪರಿಸರ, ಜೀವಿ ಹಾನಿ ಆಗದಿದ್ದರೂ ಎನ್‌ಎಂಪಿಎ ಆರಂಭದಲ್ಲಿ ಕೇವಲ 40 ಮಂದಿ ಸ್ಪರ್ಧಿಗಳಿಗೆ ಮಾತ್ರ ಅವಕಾಶ ಕಲ್ಪಿಸಿತ್ತು.

...................

ಕಳೆದ ಏಳು ವರ್ಷಗಳಿಂದ ಆ್ಯಂಗ್ಲಿಂಗ್‌ ಕಾರ್ನಿವಲ್‌ ಸ್ಥಗಿತಗೊಂಡಿದೆ. ಪ್ರವಾಸೋದ್ಯಮ ಉತ್ತೇಜನ ಸಲುವಾಗಿ ಆ್ಯಂಗ್ಲಿಂಗ್‌ ಕಾರ್ನಿವಲ್‌ನ್ನು ಮತ್ತೆ ಆಯೋಜನೆ ಮಾಡಬೇಕು. ಸರ್ಕಾರ ಅನುದಾನ ನೀಡಬೇಕು. ಆಗ ಮಾತ್ರ ಪರಿಸರಸ್ನೇಹಿ ಆ್ಯಂಗ್ಲಿಂಗ್‌ ಸ್ಪರ್ಧೆ ಮುಂದುವರಿಸಲು ಸಾಧ್ಯ.

-ಅನೂಪ್‌ ಕಾಂಚನ್‌, ಸ್ಥಾಪಕ, ಗಿಫ್ಟೆಡ್‌ ಇಂಡಿಯಾ ಕಂಪನಿ ಸಂಸ್ಥೆ.