ಹುಬ್ಬಳ್ಳಿ: ಇಲ್ಲಿನ ವೀರಾಪುರ ಓಣಿಯ ನಿವಾಸಿ ಅಂಜಲಿ ಅಂಬಿಗೇರ (20) ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು 48 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದಾವಣಗೆರೆಯಲ್ಲಿ ಬಂಧಿಸಿರುವ ಪೊಲೀಸರು ರಾತ್ರಿಯೇ ಹುಬ್ಬಳ್ಳಿಗೆ ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಟೋ ಚಾಲಕ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ (21) ಬಂಧಿತ ಆರೋಪಿ. ಬುಧವಾರ ಬೆಳಗ್ಗೆ ವೀರಾಪುರ ಓಣಿಯಲ್ಲಿರುವ ಅಂಜಲಿ ಮನೆಗೆ ನುಗ್ಗಿ ನಾಲ್ಕೈದು ಬಾರಿ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಈತನ ಚಲನವಲನಗಳು ಹುಬ್ಬಳ್ಳಿ ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಜಾಡು ಹಿಡಿದು ದಾವಣೆಗೆರೆ, ಶಿವಮೊಗ್ಗ, ಮೈಸೂರು ಸೇರಿದಂತೆ ವಿವಿಧೆಡೆ ಪೊಲೀಸರ ತಂಡ ತೆರಳಿ ಶೋಧ ಕಾರ್ಯ ನಡೆಸಿತ್ತು. ಆರೋಪಿಯು ದಾವಣಗೆರೆಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಯನ್ನು ತಡರಾತ್ರಿಯೇ ಹುಬ್ಬಳ್ಳಿಗೆ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾಳೆ ಪ್ರತಿಭಟನೆ:
ಅಂಜಲಿ ಅಂಬಿಗೇರ ಕೊಲೆ ಖಂಡಿಸಿ ಮೇ 18ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪ್ರಧಾನ ಕಾರ್ಯದರ್ಶಿ ಮಾರುತಿ ಕಬ್ಬೇರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿ, ಶಾಂತಬೀಷ್ಮ ಚೌಡಯ್ಯ ಶ್ರೀಗಳು ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ. ಇವರೊಂದಿಗೆ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ವೀರಾಪುರ ಓಣಿಯ ಅಂಜಲಿ ಅಂಬಿಗೇರ ಅವರ ಮನೆಯಿಂದ ಘಂಟಿಕೇರಿ ಓಣಿ, ಮಂಗಳವಾರಪೇಟೆ, ಶಾಹ ಬಜಾರ್, ದುರ್ಗದಬೈಲ್, ಶಹರ ಪೊಲೀಸ್ ಠಾಣೆ, ಮ್ಯಾದಾರ ಓಣಿ, ತುಳಜಾಭವಾನಿ ದೇವಸ್ಥಾನ, ದಾಜಿಬಾನಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕಿತ್ತೂರು ಚೆನ್ನಮ್ಮ ವೃತ್ತ ತಲುಪಲಿದೆ. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.