ಹುಬ್ಬಳ್ಳಿ : ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಸಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಕೊಲೆ ನಗರದಲ್ಲಿ ನಡೆದಿದೆ. ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯ ಮನೆಗೆ ನುಗ್ಗಿದ ಭಗ್ನಪ್ರೇಮಿಯೊಬ್ಬ ಮಲಗಿದ್ದ ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಬೆಳಗಿನ ಜಾವ ಸಂಭವಿಸಿದೆ.
ನಗರದ ವೀರಾಪುರ ಓಣಿ ನಿವಾಸಿ ಅಂಜಲಿ ಮೋಹನ ಅಂಬಿಗೇರ (20) ಹತ್ಯೆಗೀಡಾದ ಯುವತಿ. ಪಕ್ಕದ ರಾಮಾಪುರ ಓಣಿಯ ನಿವಾಸಿ, ಆಟೋ ಚಾಲಕ ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ್ (21) ಕೊಲೆ ಮಾಡಿದ ಆರೋಪಿ. ಈತ ಕೊಲೆ ಮಾಡಿ ಓಡಿಹೋಗುತ್ತಿರುವ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಪರಾರಿಯಾಗಿರುವ ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಇದು ಇಡೀ ನಗರವನ್ನೇ ಬೆಚ್ಚಿ ಬೀಳಿಸಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಏ.18ರಂದು ಇಲ್ಲಿನ ಬಿವಿಬಿ ಎಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಡಹಗಲೇ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಪ್ರೀತಿ ನಿರಾಕರಿಸಿದ್ದಕ್ಕೆ ಫಯಾಜ್ ಎಂಬಾತ ಚಾಕುವಿನಿಂದ ಬರ್ಬರವಾಗಿ ಇರಿದು ಹತ್ಯೆಗೈದಿದ್ದ. ಇದು ರಾಷ್ಟ್ರಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಚುನಾವಣೆ ವೇಳೆ ಭಾರೀ ಚರ್ಚೆಗೂ ಕಾರಣವಾಗಿತ್ತು. ಈ ಘಟನೆಗೆ ತಿಂಗಳು ತುಂಬುವ ಮುನ್ನವೇ ಅದೇ ರೀತಿಯ ಮತ್ತೊಂದು ಹತ್ಯೆ ನಡೆದಿರುವುದು ಮಹಾನಗರವನ್ನು ಬೆಚ್ಚಿ ಬೀಳಿಸಿದೆ.
ಮನೆಗೆ ನುಗ್ಗಿದ ಪಾತಕಿ: ವಿಶ್ವನಾಥ ಕಳೆದೊಂದು ವರ್ಷದಿಂದ ಅಂಜಲಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಅಂಜಲಿ ಪ್ರೀತಿ ನಿರಾಕರಿಸಿದ್ದಕ್ಕೆ ಬುಧವಾರ ಬೆಳ್ಳಂಬೆಳ್ಳಗ್ಗೆ 5.10ಕ್ಕೆ ನಗರದ ವೀರಾಪೂರ ಓಣಿ ಬಳಿಯ ಗುಡಿ ಓಣಿಯಲ್ಲಿನ ಅಂಜಲಿ ನಿವಾಸಕ್ಕೆ ಬಂದು ಬಾಗಿಲು ಬಡಿದಿದ್ದಾನೆ. ಎಲ್ಲರೂ ನಿದ್ದೆಯಲ್ಲಿದ್ದುದರಿಂದ ಯಾರೂ ಬಾಗಿಲು ತೆಗೆದಿರಲಿಲ್ಲ. ಬಳಿಕ ಮತ್ತೊಮ್ಮೆ ಜೋರಾಗಿ ಬಾಗಿಲು ಬಡಿದ ಹಿನ್ನೆಲೆಯಲ್ಲಿ ಅಂಜಲಿಯ ಕಿರಿಯ ಸಹೋದರಿ ಬಾಗಿಲು ತೆರೆದಿದ್ದಾಳೆ.
ಆಗ ಆಕೆಯನ್ನು ಪಕ್ಕಕ್ಕೆ ತಳ್ಳಿಕೊಂಡು ಮನೆಯೊಳಗೆ ನುಗ್ಗಿದ ಆಗಂತುಕ, ನಿದ್ದೆಯಲ್ಲಿದ್ದ ಅಂಜಲಿಗೆ ಯರ್ರಾಬಿರ್ರಿಯಾಗಿ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆ, ಕಿವಿ, ಎದೆ ಸೇರಿ ವಿವಿಧೆಡೆ ಬರ್ಬರವಾಗಿ ಚುಚ್ಚಿದ್ದಾನೆ. ಈತನ ಕೃತ್ಯ ನೋಡಿ ದಿಗ್ಭ್ರಮೆಗೊಂಡ ಅಂಜಲಿ ಸಹೋದರಿ ಹಾಗೂ ಅಜ್ಜಿ ಜೋರಾಗಿ ಚೀರಾಡಿದ್ದಾರೆ. ಅಷ್ಟೊತ್ತಿಗೆ ಆರೋಪಿ ವಿಶ್ವನಾಥ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಈ ಗದ್ದಲ ಕೇಳಿ ಅಕ್ಕಪಕ್ಕದವರು ಬಂದು ನೋಡುವಷ್ಟರಲ್ಲಿ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿ ಅಲ್ಲೇ ಕೊನೆಯುಸಿರೆಳೆದಿದ್ದಳು. ವಿಷಯ ಕಾಡ್ಗಿಚ್ಚಿನಂತೆ ಹಬ್ಬಿ ಅಂಜಲಿ ಮನೆ ಬಳಿ ಜನಸಾಗರವೇ ಸೇರಿದೆ. ವಿಷಯ ಪೊಲೀಸರಿಗೆ ಗೊತ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ಗೆ ಸಾಗಿಸಿದರು.
ಸಿಸಿ ಕ್ಯಾಮೆರಾದಲ್ಲಿ ಸೆರೆ: ಅಂಜಲಿ ಮನೆಗೆ ಹೋಗುವಾಗ ಸಿಸಿಕ್ಯಾಮೆರಾ ತಪ್ಪಿಸಿ ಹೋಗಿದ್ದ ಆರೋಪಿ, ಕೊಲೆ ಮಾಡಿ ವಾಪಸ್ ಬರುವಾಗ ಗಡಿಬಿಡಿಯಲ್ಲಿ ಸಿಸಿ ಕ್ಯಾಮೆರಾ ಇದ್ದ ಜಾಗದಿಂದಲೇ ಓಡಿ ಹೋಗಿದ್ದಾನೆ. ಈ ದೃಶ್ಯವೆಲ್ಲ ಸ್ಪಷ್ಟವಾಗಿ ಸೆರೆಯಾಗಿದೆ.
ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಅಂಜಲಿಯನ್ನು ಪ್ರೀತಿಸುವಂತೆ ಗಿರೀಶ್ ಪದೇ ಪದೆ ಕಾಡಿಸುತ್ತಿದ್ದ. ಆಕೆ ನಿರಾಕರಿಸಿದ್ದರಿಂದ ಕೋಪಗೊಂಡು ಬೆಳ್ಳಂಬೆಳಗ್ಗೆ ಮನೆಗೆ ಬಂದು ಈ ಕೃತ್ಯ ಎಸಗಿದ್ದಾನೆಂದು ಅಂಜಲಿ ಸಹೋದರಿ ಯಶೋದಾ ಅಂಬಿಗೇರ ದೂರಿನಲ್ಲಿ ತಿಳಿಸಿದ್ದಾರೆ.
ವಿಶೇಷ ತಂಡ: ಈ ಸಂಬಂಧ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಅನಾಥೆ ಅಂಜಲಿ: ಅಂಜಲಿ ತಂದೆ-ತಾಯಿಗೆ ಅಂಜಲಿ ಸೇರಿ ಮೂವರು ಹೆಣ್ಮಕ್ಕಳು. ಅಂಜಲಿ ತಾಯಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾಳೆ. ತಂದೆ ಮೋಹನ ಕೂಡ ಇವರನ್ನು ಅಜ್ಜಿ ಮನೆಯಲ್ಲೇ ಬಿಟ್ಟು ಎಲ್ಲೋ ಹೋಗಿದ್ದಾನೆ. ಅಜ್ಜಿಯೇ ಈ ಮೂವರು ಹೆಣ್ಮಕ್ಕಳನ್ನು ಸಾಕುತ್ತಿದ್ದರು. ಅಜ್ಜಿ ಮನೆ ಮನೆಗೆ ಹೋಗಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರೆ, ಅಂಜಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಳು.
ಕ್ರಿಮಿನಲ್ ವಿಶ್ವನಾಥ: ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ ಆಟೋ ಚಾಲಕ. ಈತನ ಕುಟುಂಬಸ್ಥರು ಯಲ್ಲಾಪುರ ಓಣಿಯಲ್ಲಿದ್ದರು. ಈತನಿಗೆ ಅಪರಾಧಿಕ ಹಿನ್ನೆಲೆಯಿದೆ. ಮನೆಯಲ್ಲಿ ಯಾರೂ ಈತನನ್ನು ಅಷ್ಟೊಂದು ಇಷ್ಟಪಡುತ್ತಿರಲಿಲ್ಲ. ಹೀಗಾಗಿ ಈತ ರಾಮಾಪುರ ಓಣಿಯಲ್ಲಿ ಬಾಡಿಗೆ ಕೋಣೆ ಹಿಡಿದು ವಾಸವಾಗಿದ್ದನಂತೆ. ಇತ್ತೀಚೆಗೆ ಕಡಪಟ್ಟಿ ಹಳ್ಯಾಳದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶಶಿಧರ ಅಲಿಯಾಸ್ ಶೇಷ್ಯಾ ಹಾಗೂ ವಿಶ್ವನಾಥನ ನಡುವೆ ಗಾಢವಾದ ಸ್ನೇಹವಿತ್ತು. ವಿಶ್ವನಾಥನ ಮೇಲೂ ವಿವಿಧ ಠಾಣೆಗಳಲ್ಲಿ ಸಣ್ಣ ಪುಟ್ಟ ಪ್ರಕರಣಗಳು ದಾಖಲಾಗಿವೆ.