ಅಂಜುಮನ್‌ ಚುನಾವಣೆ: ತುರುಸಿನ ಮತದಾನ

KannadaprabhaNewsNetwork | Published : Feb 19, 2024 1:35 AM

ಸಾರಾಂಶ

ಅಂಜುಮನ್ ಸಂಸ್ಥೆ ಚುನಾವಣೆಗೆ ಸಂಜೆ 6 ಗಂಟೆಯ ವರೆಗೆ ತುರುಸಿನಿಂದ ಮತದಾನ ನಡೆಯಿತು.

ಹುಬ್ಬಳ್ಳಿ:ಇಲ್ಲಿನ ಪ್ರತಿಷ್ಠಿತ ಹುಬ್ಬಳ್ಳಿ ಅಂಜುಮನ್‌ ಎ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಶೇ. 71ರಷ್ಟು ಮತದಾನವಾಗಿದೆ.

ಬೆಳಗ್ಗೆ 8 ಗಂಟೆಯಿಂದ ಇಲ್ಲಿನ ಘಂಟಿಕೇರಿಯ ನೆಹರು ಕಾಲೇಜು ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ ನಡೆಯಿತು.

ಒಟ್ಟು 40 ಬೂತ್‌ಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಯಿತು. ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ 19 ಬೂತ್‌ ಹಾಗೂ ನೆಹರು ಕಾಲೇಜಿನಲ್ಲಿ 21 ಬೂತ್‌ ತೆರೆಯಲಾಗಿತ್ತು. ಮತ ಎಣಿಕೆಗಾಗಿ ಒಟ್ಟು 240 ಸಿಬ್ಬಂದಿ ನಿಯೋಜಿಸಲಾಗಿತ್ತು.

ಚುನಾವಣಾ ಕಣದಲ್ಲಿ ನಾಲ್ಕು ಬಣಗಳಿದ್ದು, ತೀವ್ರ ಪೈಪೋಟಿ ಏರ್ಪಟ್ಟಿತು. ಮತದಾನ ಕೇಂದ್ರ ಮುಂಭಾಗದಲ್ಲಿ 4 ಬಣಗಳ ಕೌಂಟರ್ ನಿರ್ಮಿಸಲಾಗಿದ್ದು, ಆಯಾ ಬಣದ ಬೆಂಬಲಿಗರು ಪ್ರಚಾರ ನಡೆಸಿದರು. ಸಂಜೆ 6 ಗಂಟೆಯ ವರೆಗೆ ಮತದಾನ ನಡೆಯಿತು. ಒಟ್ಟು 11,903 ಮತದಾರರ ಪೈಕಿ 8491 (ಶೇ. 71) ಮತಗಳು ಚಲಾವಣೆಯಾಗಿವೆ‌. ಸಂಜೆ 7 ಗಂಟೆಯಿಂದ ಆರಂಭವಾದ ಮತ ಎಣಿಕಾ ಕಾರ್ಯ ತಡರಾತ್ರಿಯ ವರೆಗೆ ನಡೆಯಿತು.

121 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಯ ಆಡಳಿತ ಮಂಡಳಿಯ ಅಧಿಕಾರಕ್ಕಾಗಿ ಇದೇ ಮೊದಲ ಬಾರಿಗೆ 4 ಬಣಗಳು ಚುನಾವಣಾ ಕಣದಲ್ಲಿವೆ. ಈ ಹಿಂದೆ 3 ಬಣಗಳ ನಡುವೆ ಪೈಪೋಟಿ ನಡೆದಿತ್ತು. ಟ್ರ್ಯಾಕ್ಟರ್‌ ಚಿಹ್ನೆಯ ಅಡಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಬಣ, ಆಟೋ ಚಿಹ್ನೆಯ ಅಡಿ ನಿಕಟಪೂರ್ವ ಅಧ್ಯಕ್ಷ ಯೂಸುಫ್‌ ಸವಣೂರ ಬಣ, ಪೆನ್‌ ನಿಬ್‌ ಚಿಹ್ನೆಯ ಅಡಿ ಮಜರ್‌ ಖಾನ್‌ ಬಣ ಹಾಗೂ ಹೆಲಿಕಾಪ್ಟರ್‌ ಚಿಹ್ನೆಯ ಅಡಿ ಎನ್‌.ಡಿ. ಗದಗಕರ ಬಣ ಸ್ಪರ್ಧೆಯಲ್ಲಿದ್ದವು. ಪ್ರತಿ ಬಣದಲ್ಲಿ 52 ಅಭ್ಯರ್ಥಿಗಳು ಕಣದಲ್ಲಿದ್ದು, ಅಧ್ಯಕ್ಷ ಸ್ಥಾನದ ಮೂವರು ಪಕ್ಷೇತರ ಅಭ್ಯರ್ಥಿಗಳು ಸೇರಿ 211 ಮಂದಿ ಸ್ಪರ್ಧೆಯಲ್ಲಿದ್ದರು.

ಸಂಸ್ಥೆಯ ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ಆಸ್ಪತ್ರೆ ಮಂಡಳಿ ಕಾರ್ಯದರ್ಶಿ, 7 ಶಿಕ್ಷಣ ಮಂಡಳಿ ಸದಸ್ಯರು, 4 ಆಸ್ಪತ್ರೆ ಮಂಡಳಿ ಸದಸ್ಯರು, 10 ಪೋಷಕ ಸದಸ್ಯರು ಹಾಗೂ 25 ಸಾಮಾನ್ಯ ಸದಸ್ಯರೆಂದು ಒಟ್ಟು 52 ಮಂದಿಯನ್ನು ಆಯ್ಕೆ ಮಾಡಬೇಕಿದೆ. ಒಬ್ಬ ಮತದಾರ ನಾಲ್ಕು ಬಣಗಳಲ್ಲಿರುವ 52 ಮಂದಿಗೆ ಮತ ಚಲಾಯಿಸಿದರು.

ಅಭ್ಯರ್ಥಿಗಳ ಬೆಂಬಲಿಗರು, ಆಟೋ, ಕಾರು, ಬೈಕ್‌ಗಳ ಮೂಲಕ ಮತದಾರರನ್ನು ಬೂತ್‌ಗೆ ಕರೆತಂದು ನಿರ್ದಿಷ್ಟ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಹೇಳುತ್ತಿದ್ದರು. ಬೆಳಗ್ಗೆಯಿಂದ ಸಂಜೆ 4.30ರ ವೇಳೆಗೆ ಕೇವಲ ಶೇ. 58ರಷ್ಟು ಮತದಾನವಾಗಿತ್ತು. ಸಮಯ ಕಳೆದಂತೆ ಬೂತ್‌ಗಳಿಗೆ ಹೆಚ್ಚಿನ ಮತದಾರರು ಆಗಮಿಸುತ್ತಿದ್ದರು. ಸರದಿಯಲ್ಲಿ ನಿಂತು ಮತಚಲಾಯಿಸಿದರು. ಹಿರಿಯರು ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಿದರು. ಬಳಿಕ ಹಂತ ಹಂತವಾಗಿ ಚುರುಕು ಪಡೆದ ಮತದಾನ ಮಧ್ಯಾಹ್ನ ಹೊತ್ತಿಗೆ ಶೇ. 50ರಷ್ಟಾಗಿತ್ತು. ಸಂಜೆ 6.30ಗಂಟೆಯ ವರೆಗೆ ಮತದಾನ ನಡೆಯಿತು.

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎ.ಎಂ. ಹಿಂಡಸಗೇರಿ ಅವರು ಮುತುವಲ್ಲಿಗಳು, ವೌಲ್ವಿಗಳು ಹಾಗೂ ಬೆಂಬಗಲಿಗರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಎನ್.ಡಿ. ಗದಗಕರ ಬಣದಲ್ಲಿ ಗುರುತಿಸಿಕೊಂಡಿರುವ ಪಾಲಿಕೆ ಸದಸ್ಯ ನಜೀರ್ ಅಹ್ಮದ ಹೊನ್ಯಾಳ, ಯುಸೂಫ ಸವಣೂರು, ಅಲ್ತಾಫ ಕಿತ್ತೂರ ಸಹ ಮತ ಚಲಾಯಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

Share this article