ನೈತಿಕ ಮೌಲ್ಯ ಬೋಧಿಸಿದ ಅಣ್ಣಿಗೇರಿ ಗುರುಗಳು

KannadaprabhaNewsNetwork |  
Published : Apr 06, 2024, 12:54 AM ISTUpdated : Apr 06, 2024, 12:55 AM IST
ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ಇಂದು ದೊಡ್ಡ ದೊಡ್ಡ ಉನ್ನತ ಹುದ್ದೆಯಲ್ಲಿರುವದು ಅಣ್ಣಿಗೇರಿ ಗುರುಗಳ ಬೋಧನೆಗೆ ಹಿಡಿದ ಕೈಗನ್ನಡಿ

ಗದಗ: ಶಿಕ್ಷಣ ತಜ್ಞ ಬಿ.ಜಿ.ಅಣ್ಣಿಗೇರಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ಹೇಳುವ ಮೂಲಕ ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ನೈತಿಕ ಮೌಲ್ಯ ರೂಢಿಸಿದ ಮೇರು ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂದು ಡಿಡಿಪಿಐ ಎಂ.ಎ. ರಡ್ಡೇರ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ನಗರದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮ ಹಾಗೂ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಸಹಯೋಗದಲ್ಲಿ 8,9 ಹಾಗೂ 10ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಉಚಿತ ಟ್ಯೂಶನ್ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.

ಬಿ.ಜಿ. ಅಣ್ಣಿಗೇರಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಅತ್ಯುನ್ನತ ಸೇವೆಗೈದವರು. ತಾವಿರುವ ಕೊಠಡಿಯಲ್ಲಿ ತಮ್ಮೊಂದಿಗೆ ಇದ್ದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಪಾಠ ಹೇಳಿ ಕೊಡುವದನ್ನು ಪ್ರಾರಂಭಿಸಿದರು. ಇದು ಕಾಲ ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಾ ಬಂತು.ಇಲ್ಲಿ ಪಾಠ ಹೇಳಿಸಿಕೊಂಡವರು ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಅತ್ಯುತ್ತಮ ಫಲಿತಾಂಶ ಕಂಡುಕೊಂಡರು.ಇಲ್ಲಿ ಟ್ಯೂಶನ್ ಹೇಳಿಸಿಕೊಂಡವರು ಇಂದು ದೊಡ್ಡ ದೊಡ್ಡ ಉನ್ನತ ಹುದ್ದೆಯಲ್ಲಿರುವದು ಅಣ್ಣಿಗೇರಿ ಗುರುಗಳ ಬೋಧನೆಗೆ ಹಿಡಿದ ಕೈಗನ್ನಡಿ ಎಂದರು.

ಅಣ್ಣಿಗೇರಿ ಅವರೊಂದಿಗೆ ಇತರ ಶಿಕ್ಷಕ, ಶಿಕ್ಷಕಿಯರು ಬೇರೆ ಬೇರೆ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತ ಬಂದರು ಅಣ್ಣಿಗೇರಿ ಅವರ ಅಗಲುವಿಕೆಯ ಬಳಿಕ ಈ ಆಶ್ರಮಕ್ಕೊಂದು ಹೊಸ ಆಯಾಮ ನೀಡಲಾಗಿದೆ. ಶಿಕ್ಷಣ ಪ್ರೇಮಿಗಳು ಒಗ್ಗೂಡಿ ಗುರುಕುಲ ಆಶ್ರಮ ಪರಂಪರೆ ಮುಂದುವರೆಸುವ ಮೂಲಕ ಅಣ್ಣಿಗೇರಿ ಗುರುಗಳ ಕನಸ್ಸು, ಪರಂಪರೆ ಮುಂದುವರೆಸಿದ್ದು ಅಭಿನಂದನೀಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ.ಎಸ್.ಎಸ್ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಚೇರಮನ್ ಆನಂದ ಪೋತ್ನೀಸ್ ಮಾತನಾಡಿ, ಈ ಗುರುಕುಲ ಆಶ್ರಮದಲ್ಲಿ ಶ್ರದ್ಧೆ ಮತ್ತು ನಿಷ್ಠೆಯಿಂದ ಪರಿಶ್ರಮದೊಂದಿಗೆ ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವದು ಎಂದರು.

ಮುಖ್ಯ ಅತಿಥಿ ಆಶ್ರಮದ ಹಳೇಯ ವಿದ್ಯಾರ್ಥಿ ಹುಬ್ಬಳ್ಳಿ ಕೆಎಂಸಿ ಯ ಹಿರಿಯ ವೈದ್ಯಾಧಿಕಾರಿ ಡಾ.ಶರಣಬಸವ ಚೌಕಿಮಠ ಮಾತನಾಡಿ, ಟ್ಯೂಶನ್ ಇಂದು ಕಮರ್ಶಿಯಲ್ ಆಗಿ ಹಣ ಗಳಿಸುವ ವೃತ್ತಿಯಾಗಿದೆ.ಇಂತಹ ಸಂದರ್ಭದಲ್ಲೂ ಆಶ್ರಮದಲ್ಲಿ ಅನುಭವಿಕ ಶಿಕ್ಷಕರು ಮಕ್ಕಳಿಗೆ ಉಚಿತ ಬೋಧನೆಗೆ ಮುಂದಾಗಿರುವದು ಅಭಿನಂದನೀಯ ಎಂದರು.

ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಅಣ್ಣಿಗೇರಿ ಗುರುಗಳ ಕನಸು ಸಂಕಲ್ಪಗಳನ್ನು ಸಾಕಾರಗೊಳಿಸುವ ನಿಟ್ಟಿಯಲ್ಲಿ ಪ್ರತಿಷ್ಠಾನವು ಬದ್ಧತೆಯಿಂದ ಕಾರ್ಯ ಮಾಡುತ್ತಿದೆ. ಸರ್ವರ ಸಹಾಯ, ಸಹಕಾರದೊಂದಿಗೆ ಗುರುಕುಲ ಪದ್ಧತಿ ಮುಂದುವರೆಸಿ ಈ ಭಾಗದಲ್ಲಿ ಕಲಿಸುವಿಕೆ ಮತ್ತು ಕಲಿಯುವಿಕೆಯಲ್ಲಿ ಸುಧಾರಣೆ ತರಲು ಪ್ರಯತ್ನಿಸಲಾಗುವದು. ಒಟ್ಟಾರೆ ಈ ಭಾಗದ ಮಕ್ಕಳ ಭವಿಷ್ಯ ಸುಂದರವಾಗಿ ರೂಪುಗೊಳ್ಳುವಂತಾಗಬೇಕು ಎಂದರು.

ಶಂಕ್ರಪ್ಪ ಅಣ್ಣಿಗೇರಿ, ಬಸವರಾಜ ಬಿಂಗಿ, ಸಿದ್ಧು ಕವಲೂರ, ಕೃಷ್ಣರಡ್ಡಿ ಗಿರಡ್ಡಿ, ಜಿ.ಎಂ. ಫಿರಂಗಿ ಉಪಸ್ಥಿತರಿದ್ದರು. ಪಾವಣಿ ಮುನವಳ್ಳಿ ಪ್ರಾರ್ಥಿಸಿದರು, ಎಸ್.ಜಿ. ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳಕಪ್ಪ ಕುರ್ತಕೋಟಿ ನಿರೂಪಿಸಿದರು, ಶಿವಾನಂದ ಕಟ್ಟಿ ವಂದಿಸಿದರು. ವಿಜಯಲಕ್ಷ್ಮೀ ಅಂಗಡಿ ಪ್ರಸಾದ ಸೇವೆ ವಹಿಸಿಕೊಂಡಿದ್ದರು. ಶಿಕ್ಷಕರಾದ ಪ್ರಸನ್ನಕುಮಾರ, ಅರುಣಕುಮಾರ ಹಾದಿ, ಮಂಜುಳಾ, ಜ್ಯೋತಿ ವಡಗೇರಿ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪಾಲಕ, ಪೋಷಕರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ