ಗೊಂದಲ, ಅಪಸ್ವರವಿಲ್ಲದೇ ಸ್ಟಾರ್ ಚಂದ್ರು ಹೆಸರು ಘೋಷಣೆ: ಸಚಿವ

KannadaprabhaNewsNetwork | Published : Mar 10, 2024 1:31 AM

ಸಾರಾಂಶ

ಕಳೆದ 1994ರ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದರು. ಇಡೀ ಜಿಲ್ಲೆಯ ಜನರು ಆಶೀರ್ವದಿಸಿದ್ದರಿಂದ ರಾಜ್ಯ ಮಟ್ಟದಲ್ಲಿ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದೆ. ಜಿಲ್ಲೆಯ ಜನರು ನನ್ನ ಮೇಲಿಟ್ಟಿರುವ ಪ್ರೀತಿ, ನಂಬಿಕೆ ಮತ್ತು ವಿಶ್ವಾಸಕ್ಕೆ ನಾನು ಋಣಿಯಾಗಿರುತ್ತೇನೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಾಂಗ್ರೆಸ್ ನ ಪಟ್ಟಿಯಲ್ಲಿಯೇ ರಾಜ್ಯದ 7 ಲೋಕಸಭಾ ಸ್ಥಾನಗಳ ಪೈಕಿ ಯಾವುದೇ ಗೊಂದಲ, ಅಪಸ್ವರವಿಲ್ಲದೇ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಹೆಸರನ್ನು ಘೋಷಣೆ ಮಾಡಿರುವುದಕ್ಕೆ ಪಕ್ಷದ ವರಿಷ್ಠರು ಮತ್ತು ಎಲ್ಲಾ ಹಿರಿಯ ನಾಯಕರನ್ನು ಅಭಿನಂದಿಸುವುದಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 1994ರ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದರು. ಇಡೀ ಜಿಲ್ಲೆಯ ಜನರು ಆಶೀರ್ವದಿಸಿದ್ದರಿಂದ ರಾಜ್ಯ ಮಟ್ಟದಲ್ಲಿ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದೆ. ಜಿಲ್ಲೆಯ ಜನರು ನನ್ನ ಮೇಲಿಟ್ಟಿರುವ ಪ್ರೀತಿ, ನಂಬಿಕೆ ಮತ್ತು ವಿಶ್ವಾಸಕ್ಕೆ ನಾನು ಋಣಿಯಾಗಿರುತ್ತೇನೆ ಎಂದರು.

ನಾನು ಕೆಲವೇ ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರೂ ಸಹ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ನನ್ನೊಂದಿಗೆ ಕೈಜೋಡಿಸುತ್ತಿರುವುದಕ್ಕೆ ಎಷ್ಟು ಅಭಿನಂದಿಸಿದರೂ ಸಾಲದು ಎಂದು ಹೇಳಿದರು.

ನಾಗಮಂಗಲದ ಪಾಲಿಗೆ ಇದು ಎರಡನೇ ಬಾರಿಗೆ ದೊರಕಿರುವ ಒಂದು ಸುವರ್ಣ ಅವಕಾಶ. ಇಂತಹ ಸನ್ನಿವೇಶದಲ್ಲಿ ಲೋಕಸಭಾ ಕ್ಷೇತ್ರದ ಎಲ್ಲ ಮತದಾರರು ಪಕ್ಷಾತೀತವಾಗಿ ಅಭ್ಯರ್ಥಿ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಅವರನ್ನು ಬೆಂಬಲಿಸಬೇಕಿದೆ. ಜಿಲ್ಲೆಯಾದ್ಯಂತ ನಮ್ಮ ಪಕ್ಷದ ಪರ ಅಲೆ ಇದೆ. ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿ ಕುರಿತು, ಉದ್ಯಮಿ ವೆಂಕಟರಮಣಗೌಡ (ಸ್ಟಾರ್ ಚಂದ್ರು) ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂಬ ಮಾಹಿತಿ ಇಲ್ಲದೆ ಸಂಸದರು ರೀತಿ ಹೇಳಿಕೆ ನೀಡಿರಬಹುದು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಮೈತ್ರಿ ಅಭ್ಯರ್ಥಿ ವಿಷಯದಲ್ಲಿರುವ ಗೊಂದಲವನ್ನು ಮೊದಲು ಬಗೆಹರಿಸಿಕೊಂಡು ಒಂದು ನಿರ್ಣಯಕ್ಕೆ ಬರಲಿ. ಅನಂತರ ಬೇರೆ ಪಕ್ಷದ ಬಗ್ಗೆ ಮಾತನಾಡಲಿ ಎಂದು ಸಂಸದೆ ಸುಮಲತಾ ಅಂಬರೀಷ್‌ಗೆ ಟಾಂಗ್ ಕೊಟ್ಟರು.

ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ. ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಜಿಪಂ. ಮಾಜಿ ಸದಸ್ಯ ಎಂ.ಹುಚ್ಚೇಗೌಡ, ಮುಖಂಡರಾದ ಮಾವಿನಕೆರೆ ಸುರೇಶ್, ಉದಯಕಿರಣ್, ಆರ್.ಕಷ್ಣೇಗೌಡ, ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಸಂಪತ್‌ಕುಮಾರ್, ತಟ್ಟಹಳ್ಳಿ ನರಸಿಂಹಮೂರ್ತಿ, ಶರತ್‌ರಾಮಣ್ಣ, ತ್ಯಾಪೇನಹಳ್ಳಿ ಶ್ರೀನಿವಾಸ್, ಬಿ.ಎನ್.ವನರಾಜ್, ಶಶಿಕುಮಾರ್, ಸುನಿಲ್ ಸೇರಿ ಹಲವರಿದ್ದರು.

Share this article