ಬಿಜೆಪಿ ಕಾರ್ಯಕರ್ತರಿಗೆ ಕಿರಿಕಿರಿ: ಪೊಲೀಸ್‌ ಅಧಿಕಾರಿ ತರಾಟೆಗೆ

KannadaprabhaNewsNetwork | Published : Nov 13, 2023 1:15 AM

ಸಾರಾಂಶ

ಬಿಜೆಪಿ ಕಾರ್ಯಕರ್ತರಿಗೆ ಅನವಶ್ಯಕವಾಗಿ ಕಿರಿಕಿರಿ ಮಾಡಲಾಗುತ್ತಿದೆ ಎಂಬ ಆರೋಪದ ಕೇಳಿ ಬಂದ ಹಿನ್ನೆಲೆಯಲ್ಲಿ ಧಾರವಾಡ ಶಹರ ಪೊಲೀಸ್‌ ಠಾಣೆ ಪಿಐ ಎನ್‌.ಸಿ. ಕಾಡದೇವರಮಠ ಅವರನ್ನು ಕಾರ್ಯಕರ್ತರ ಎದುರಿನಲ್ಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬಿಜೆಪಿ ಕಾರ್ಯಕರ್ತರಿಗೆ ಅನವಶ್ಯಕವಾಗಿ ಕಿರಿಕಿರಿ ಮಾಡಲಾಗುತ್ತಿದೆ ಎಂಬ ಆರೋಪದ ಕೇಳಿ ಬಂದ ಹಿನ್ನೆಲೆಯಲ್ಲಿ ಧಾರವಾಡ ಶಹರ ಪೊಲೀಸ್‌ ಠಾಣೆ ಪಿಐ ಎನ್‌.ಸಿ. ಕಾಡದೇವರಮಠ ಅವರನ್ನು ಕಾರ್ಯಕರ್ತರ ಎದುರಿನಲ್ಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆಯಿತು.

ಇಲ್ಲಿಯ ಮಯೂರ ಎಸ್ಟೇಟ್‌ನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಾ ಬಿಜೆಪಿ ಕಾರ್ಯಕರ್ತರಿಗೆ ಅನವಶ್ಯಕವಾಗಿ ಕಿರಿಕಿರಿ ನೀಡುತ್ತಿರುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ, ಠಾಣೆ ಎದುರು ಸಾವಿರಾರು ಜನರ ನೇತೃತ್ವದಲ್ಲಿ ಸ್ವತಃ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇಸ್ಟೀಟ್‌ ಆಟಕ್ಕೆ ಪರವಾನಗಿ ಕೇಳಿದ್ದರೆ, ಆ ಬಗ್ಗೆ ಮಾಹಿತಿ ನೀಡಿ. ಅಲ್ಲದೇ, ಒಂದು ವೇಳೆ ಕಾನೂನುಬಾಹಿರವಾಗಿ ಇಸ್ಟೀಟ್‌ ಜೂಜಾಟ ಆಡುತ್ತಿದ್ದ ಸಾಕ್ಷ್ಯ ಸಮೇತವಾಗಿ ಹಿಡಿದು ಕಾನೂನು ಕ್ರಮ ತೆಗೆದುಕೊಳ್ಳಿ. ಆದರೆ, ಠಾಣೆಗೆ ಕರೆದು ಯಾವ ಆಧಾರದ ಮೇಲೆ ಹೊಡೆದೀರಿ ಎಂದು ಪ್ರಶ್ನಿಸಿದರು.

ಈ ರೀತಿ ನಮ್ಮ ಕಾರ್ಯಕರ್ತರಿಗೆ ಹೊಡೆಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಬೆದರಿಕೆ ಹಾಕುವುದು ಮಾಡಿದ್ದೇ ಆದರೆ, ನಿಮ್ಮ ಠಾಣೆ ಎದುರಿನಲ್ಲಿನೇ ನಾನೇ ಕಾರ್ಯಕರ್ತರೊಂದಿಗೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಗಿದ್ದೇನು?:

ಧಾರವಾಡದ ಗೊಲ್ಲರ ಕಾಲನಿಯ ರವಿ ಗೊಲ್ಲರ ಎಂಬಾತನ ಮೇಲೆ ನಾಲ್ಕು ವರ್ಷಗಳ ಹಿಂದೆ ಧಾರವಾಡ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಇತ್ತೀಚೆಗೆ ಆತನ ವಿರುದ್ಧ ರೌಡಿಶೀಟರ್‌ ದೂರು ದಾಖಲು ಮಾಡಿ, ಆತನಿಗೆ ಸಹಿ ಮಾಡುವಂತೆ ಪೊಲೀಸರು ಒತ್ತಾಯಿಸಿದ್ದರಂತೆ. ಶನಿವಾರ ಮತ್ತೆ ಪೊಲೀಸರು, ರವಿಯನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ. ಈ ವೇಳೆ ಪೊಲೀಸರು ವಿಚಾರಣೆಯ ನೆಪದಲ್ಲಿ ರವಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಆತನನ್ನು ಪೊಲೀಸ್‌ ಆಯುಕ್ತರ ಕಚೇರಿಗೆ ಕರೆದುಕೊಂಡು ಹೋಗಿ ಮತ್ತೊಂದು ಕೇಸ್‌ ದಾಖಲಿಸಲು ಮುಂದಾಗಿದ್ದರು. ಹೀಗಾಗಿ, ನಾವು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗಮನಕ್ಕೆ ತಂದಿದ್ದೇವು ಎಂದು ರವಿ ಸಹೋದರ ರಾಜೇಶ ಗೊಲ್ಲರ ಮಾಹಿತಿ ನೀಡಿದರು.

ಕಾನೂನು ಪರಿಪಾಲನೆ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅನಿವಾರ್ಯ. ಆದರೆ ಇಂತಹ ವಿಚಾರದಲ್ಲಿ ಶಹರ ಪೊಲೀಸ್‌ ಠಾಣೆ ಪಿಐ ಎನ್‌.ಸಿ. ಕಾಡದೇವರಮಠ ಅವರು ತಪ್ಪು ಮಾಡಿದ್ದರೆ, ಕೇಂದ್ರ ಸಚಿವರು ಖುದ್ದು ಕರೆಯಿಸಿ ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಆದರೆ ರೌಡಿಶೀಟರ್‌, ಬಿಜೆಪಿ ಕಾರ್ಯಕರ್ತರು ಮತ್ತು ಇತರರು ಇರುವಾಗಲೇ ಅವರೆದುರು ಪೊಲೀಸ್‌ ಅಧಿಕಾರಿಯೊಬ್ಬರನ್ನು ತರಾಟೆ ತೆಗೆದುಕೊಂಡಿದ್ದು ಸರಿಯಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ದೀಪಾವಳಿ ಶುಭಾಶಯ ಕೋರಲು ಬಂದ ಧಾರವಾಡ ಶಹರ ಠಾಣೆ ಪಿಐ ಎನ್‌.ಸಿ. ಕಾಡದೇವರಮಠ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರೌಡಿಶೀಟರ್‌ರೊಬ್ಬರ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಕಾರ್ಯಕರ್ತರ ಎದುರು ತರಾಟೆಗೆ ತೆಗೆದುಕೊಂಡು ಅವಮಾನಿಸಿದ್ದು ಖಂಡನೀಯ. ಕೂಡಲೇ ಸಚಿವರು ತಮ್ಮ ತಪ್ಪನ್ನು ತಿದ್ದಿಕೊಂಡು ಸಾರ್ವಜನಿಕರ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿಮಠ ಆಗ್ರಹಿಸಿದ್ದಾರೆ.

Share this article