ಕನ್ನಡಪ್ರಭ ವಾರ್ತೆ ಕೆ.ಆರ್. ನಗರಮಾ. 8 ರಿಂದ ಏ. 4 ರವರೆಗೆ ತಾಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ನಡೆಯಲಿರುವ ಸಿದ್ದಪ್ಪಾಜಿಯವರ ವಾರ್ಷಿಕ ಜಾತ್ರೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಡಿ. ರವಿಶಂಕರ್ ಸೂಚಿಸಿದರು.
ಕಪ್ಪಡಿ ಕ್ಷೇತ್ರದ ಗದ್ದುಗೆಯ ಆವರಣದಲ್ಲಿ ನಡೆದ ಜಾತ್ರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಮಟ್ಟದ ಅಧಿಕಾರಿಗಳು ಈ ವಿಚಾರದಲ್ಲಿ ಪರಸ್ಪರ ಸಮನ್ವಯತೆ ಸಾಧಿಸಿ ಅಗತ್ಯ ಮೂಲಭೂತ ಸವಲತ್ತುಗಳನ್ನು ಒದಗಿಸಲು ಜಾಗೃತೆಯಿಂದ ಕೆಲಸ ಮಾಡಬೇಕೆಂದರು.ಈ ಬಾರಿ ಬೊಪ್ಪೇಗೌಡನಪುರದ ಮಠಾಧಿಪತಿಗಳಾದ ಎಂ.ಎಲ್. ವರ್ಚಸ್ವಿ ಶ್ರೀಕಂಠಸಿದ್ದಲಿಂಗ ರಾಜೇ ಅರಸ್ ಅವರ ನೇತೃತ್ವದಲ್ಲಿ ಜಾತ್ರಾ ವಿಧಿ ವಿಧಾನ ಮತ್ತು ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಜಾತ್ರೆಯ ಯಶಸ್ಸಿಗೆ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ಜತೆಗೆ ಸಾರ್ವಜನಿಕರು ತಮ್ಮ ಸಹಕಾರ ನೀಡಬೇಕೆಂದು ಕೋರಿದರು.
ಕುಡಿಯುವ ನೀರು ಸರಬರಾಜು, ತಾತ್ಕಾಲಿಕ ಶೌಚಾಲಯ, ವಾಹನಗಳ ಪಾರ್ಕಿಂಗ್, ಸ್ವಚ್ಛತೆ, ಪೊಲೀಸ್ ಬಂದೋಬಸ್ತ್ ಸೇರಿದಂತೆ ಜಾತ್ರೆಗೆ ಬರುವವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನು ಎಲ್ಲರೂ ಮಾಡಬೇಕೆಂದು ಆದೇಶಿಸಿದರು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.ಪ್ರಮುಖವಾಗಿ ನದಿ ದಂಡೆಯಲ್ಲಿ ಮಹಿಳೆಯರು ವಸ್ತ್ರ ಬದಲಿಸುವ ತಾತ್ಕಾಲಿಕ ಕೊಠಡಿ ನಿರ್ಮಾಣ ಮಾಡುವುದರೊಂದಿಗೆ ಜಾತ್ರೆಯ ಸಮಯದಲ್ಲಿ ಸಾಧ್ಯವಾದಷ್ಟು ಕಾವೇರಿ ನದಿಯಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಸಲಹೆ ನೀಡಿದರು. ಈ ಬಾರಿ ದೇವಾಲಯದ ಸಿಬ್ಬಂದಿ ಮತ್ತು ಮಾಧ್ಯಮದವರಿಗೆ ಪಾಸ್ ವಿತರಣೆ ಮಾಡಬೇಕೆಂದು ತಿಳಿಸಿದರು.
ಕಪ್ಪಡಿ ಕ್ಷೇತ್ರದ ಉಸ್ತುವಾರಿ ಲಿಂಗರಾಜು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್. ನಾಗೇಂದ್ರ, ನಿರ್ದೇಶಕ ರಾಜಶೇಖರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಧು ಜಾತ್ರೆ ಉತ್ತಮವಾಗಿ ನಡೆಯುವ ಸಂಬಂಧ ಸಲಹೆ ನೀಡಿದರು.ಹೆಬ್ಬಾಳು ಗ್ರಾಪಂ ಅಧ್ಯಕ್ಷೆ ಆಶಾ ರಮೇಶ್, ಉಪಾಧ್ಯಕ್ಷ ಎಚ್.ಕೆ. ನಾಗೇಶ್, ಸದಸ್ಯ ವೆಂಕಟರಾಮ್, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎನ್. ಪ್ರಸನ್ನಕುಮಾರ್, ತಾಲೂಕು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಪಿ. ಶಂಭುಲಿಂಗಪ್ಪ, ಉದ್ಯಮಿ ಪಿ.ಕೆ.ಎಂ. ರವಿ, ಮುಖಂಡ ಸೋಮಣ್ಣ, ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಪಂ ಇಒ ಜಿ.ಕೆ. ಹರೀಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್. ರಾಜರಾಮ್ ವೈಲಾಯ, ಎಲ್. ವಿನೀತ್, ಅರ್ಕೇಶ್ ಮೂರ್ತಿ, ಸುಮಿತ, ಸಾರಿಗೆ ಘಟಕ ವ್ಯವಸ್ಥಾಪಕ ಪಿ.ಮಹೇಶ್ ಇದ್ದರು.