‘ವಕ್ಫ್ ಆಸ್ತಿ’ ವಿವಾದ ರಾಜ್ಯದ ಇನ್ನೂ ಮೂರು ಜಿಲ್ಲೆಗಳ ರೈತರ ನಿದ್ದೆಗೆಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಕಲಬುರಗಿ, ಗದಗ, ದಾವಣಗೆರೆ, ಬೀದರ್ ಜಿಲ್ಲೆಯ ರೈತರ ಭೂಮಿಯ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಾಗಿರುವುದು ಆಕ್ರೋಶಕ್ಕೆ ಕಾರಣ
ಕಲಬುರಗಿ/ಗದಗ/ಬೀದರ್/ಚಿತ್ರದುರ್ಗ : ವಿಜಯಪುರ, ಯಾದಗಿರಿ, ಧಾರವಾಡ ಜಿಲ್ಲೆಗಳಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿರುವ ‘ವಕ್ಫ್ ಆಸ್ತಿ’ ವಿವಾದ ರಾಜ್ಯದ ಇನ್ನೂ ಮೂರು ಜಿಲ್ಲೆಗಳ ರೈತರ ನಿದ್ದೆಗೆಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಕಲಬುರಗಿ, ಗದಗ, ದಾವಣಗೆರೆ, ಬೀದರ್ ಜಿಲ್ಲೆಯ ರೈತರ ಭೂಮಿಯ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಾಗಿರುವುದು ಅಲ್ಲಿನ ರೈತರಲ್ಲಿ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ, ಚಿತ್ರದುರ್ಗದಲ್ಲಿ ಮಾದಿಗ ಸಮುದಾಯದ ಆಸ್ತಿ ಮೇಲೂ ವಕ್ಫ್ ಕಣ್ಣು ಬಿದ್ದಿದ್ದು, ಚರ್ಮ ಹದ ಮಾಡುವ ಕೇಂದ್ರದ ಆಸ್ತಿ ಬಿಟ್ಟುಕೊಡುವಂತೆ ಪುರಸಭೆಗೆ ವಕ್ಫ್ ಮಂಡಳಿಯಿಂದ ಮನವಿ ಸಲ್ಲಿಸಲಾಗಿದೆ.
ಈ ಮಧ್ಯೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ 70 ಎಕರೆ ಜಮೀನು ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ. ಇದರಿಂದಾಗಿ ರಾಜ್ಯದ 8 ಜಿಲ್ಲೆಗಳಲ್ಲಿ ‘ವಕ್ಫ್ ಆಸ್ತಿ’ ಪ್ರಕರಣ ಬೆಳಕಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.
ಚಿಂಚೋಳಿಯ 60 ರೈತರಿಗೆ ಶಾಕ್:
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ 60 ರೈತರ 436 ಎಕರೆ ಉಳುಮೆ ಭೂಮಿಯಲ್ಲಿ ವಕ್ಫ್ ಬೋರ್ಡ್ ಹೆಸರು ಪ್ರತ್ಯಕ್ಷವಾಗಿದೆ. 2013-14ರಲ್ಲೇ ಅಲ್ಲಿನ ರೈತರ ಪಹಣಿಯಲ್ಲಿ ಹೆಸರು ಬದಲಾವಣೆಯಾಗಿದ್ದು, ಕಳೆದ 10 ವರ್ಷದಿಂದ ಅಲ್ಲಿನ ರೈತರು ಈ ಸಂಬಂಧ ಹೋರಾಟ ನಡೆಸುತ್ತಿದ್ದಾರೆ. ಕನಿಷ್ಠ ಪಕ್ಷ ರೈತರಿಗೆ ನೋಟಿಸ್ ಕೂಡ ನೀಡದೆ ವಕ್ಫ್ ನವರು ಬದಲಾವಣೆ ಮಾಡಿದ್ದಾರೆ ಎಂಬುದು ರೈತರ ಆರೋಪ.
ತಮ್ಮ ಪಹಣಿಯಲ್ಲಿ 11ನೇ ಕಾಲಂನಲ್ಲಿ ವಕ್ಫ್ ಎಂದು ಹೆಸರು ನಮೂದಾಗಿದ್ದರಿಂದ ರೈತರಿಗೆ ತಮ್ಮ ಈ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಆಸ್ತಿ ಅಡಮಾನ ಇಟ್ಟು ಬ್ಯಾಂಕ್ ಸಾಲ ಪಡೆಯಲೂ ಆಗುತ್ತಿಲ್ಲ. ವಕ್ಫ್ ಜಮೀನು ಎಂಬುದು ಪಹಣಿಯಲ್ಲಿ ನಮೂದಾದರೆ ಅಂತಹ ಜಮೀನುಗಳ ಮಾರಾಟ, ಸಾಲ ಪಡೆಯೋದಕ್ಕೆ ಕಾನೂನಿನಲ್ಲಿ ನಿರ್ಬಂಧ ಇರುವುದರಿಂದ ಗಡಿಕೇಶ್ವರ ರೈತರು ತ್ರಿಶಂಕು ಸ್ಥಿತಿ ಎದುರಿಸುತಿದ್ದಾರೆ.ಈ ಮಧ್ಯೆ, ಗದಗ ಜಿಲ್ಲೆಯಲ್ಲಿ 566 ರೈತರ ಜಮೀನು ವಕ್ಫ್ ಆಸ್ತಿಯಾಗಿ 2019ರಲ್ಲಿಯೇ ಖಾತಾ ಬದಲಾವಣೆಯಾಗಿತ್ತು. ಈ ಪೈಕಿ 315 ರೈತರು ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡಿ ತಮ್ಮ ಜಮೀನುಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇನ್ನುಳಿದ 123 ರೈತರ ಆಸ್ತಿಗಳ ಕಾಲಂ ನಂಬರ್ 11ರಲ್ಲಿ ಇಂದಿಗೂ ವಕ್ಫ್ ಎಂದೇ ನಮೂದಾಗಿದೆ.
ಇನ್ನು, ಬೀದರ್ ಜಿಲ್ಲೆಯ ಚಟ್ನಳ್ಳಿ ಗ್ರಾಮದಲ್ಲಿ 960 ರೈತರ ಭೂಮಿಯ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಾಗಿದೆ. 2013ರಲ್ಲಿಯೇ ಈ ಬದಲಾವಣೆಯಾಗಿದ್ದು, ರೈತರು ತಮ್ಮ ಜಮೀನಿಗಾಗಿ ಹೋರಾಟ ನಡೆಸುತ್ತಿದ್ದಾರೆ.ಈ ಮಧ್ಯೆ, ಚಿತ್ರದುರ್ಗ ಜಿಲ್ಲೆಯಲ್ಲೂ ‘ವಕ್ಫ್ ಆಸ್ತಿ’ ಪ್ರಕರಣ ಬೆಳಕಿಗೆ ಬಂದಿದೆ. ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಮಾದಿಗ ಸಮುದಾಯಕ್ಕೆ ಸೇರಿದ ಚರ್ಮ ಹದ ಮಾಡುವ ಕೇಂದ್ರದ ಆಸ್ತಿ ಬಿಟ್ಟುಕೊಡುವಂತೆ ವಕ್ಫ್ ಬೋರ್ಡ್ ನಿಂದ ಚಳ್ಳಕೆರೆ ಪುರಸಭೆಗೆ 2013ರಲ್ಲಿಯೇ ಮನವಿ ಸಲ್ಲಿಸಲಾಗಿದೆ. ಆದರೆ, ಖಾತೆ ಬದಲಾವಣೆಗೆ ಪುರಸಭೆ ನಿರಾಕರಿಸುತ್ತಿದೆ ಎನ್ನಲಾಗಿದೆ.
ಈ ಮಧ್ಯೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಹೊನ್ನಾಳಿ ತಾಲೂಕೊಂದರಲ್ಲಿಯೇ 70 ಎಕರೆ ಜಮೀನು ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾಗಿದೆ. ಸುಂಕದಕಟ್ಟೆ ಗ್ರಾಮದ ಸರ್ವೇ ನಂಬರ್ 22ರಲ್ಲಿ 8 ಎಕರೆ 11 ಗುಂಟೆ ಜಮೀನು ವಕ್ಪ್ ಮಂಡಳಿ ಹೆಸರಿಗೆ ಮಂಜೂರಾಗಿದೆ. ತುಂಗಭದ್ರಾ ನದಿ ಸಮೀಪದಲ್ಲಿ 13 ಎಕರೆ ಹಾಗೂ ರಾಘವೇಂದ್ರ ಸ್ವಾಮಿ ಮಠದ ಸಮೀಪ 12 ಎಕರೆ ಭೂಮಿಯನ್ನು ಯಾರ ಗಮನಕ್ಕೂ ತಾರದೇ ವಕ್ಫ್ ಸಮಿತಿ ಹೆಸರಿಗೆ ಮಾಡಲಾಗಿದೆ ಎಂದು ಆರೋಪಿಸಿದರು.