ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರಕ್ಕೆ ಮತ್ತೊಂದು ಉಪಚುನಾವಣೆ!

KannadaprabhaNewsNetwork | Published : Jun 5, 2024 12:31 AM

ಸಾರಾಂಶ

ಚನ್ನಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕ್ಷೇತ್ರದ ಶಾಸಕರೂ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದು, ಆ ಮೂಲಕ ಚನ್ನಪಟ್ಟಣ ಕ್ಷೇತ್ರಕ್ಕೆ ಮತ್ತೊಂದು ಉಪಚುನಾವಣೆ ಎದುರಾಗುವಂತೆ ಮಾಡಿದ್ದಾರೆ.

ಚನ್ನಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕ್ಷೇತ್ರದ ಶಾಸಕರೂ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದು, ಆ ಮೂಲಕ ಚನ್ನಪಟ್ಟಣ ಕ್ಷೇತ್ರಕ್ಕೆ ಮತ್ತೊಂದು ಉಪಚುನಾವಣೆ ಎದುರಾಗುವಂತೆ ಮಾಡಿದ್ದಾರೆ.

ಈ ಹಿಂದೆ ಕುಮಾರಸ್ವಾಮಿ ರಾಜೀನಾಮೆಯ ಕಾರಣಕ್ಕೆ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಸೇರಿ ಮೂರು ಬಾರಿ ಉಪಚುನಾವಣೆ ನಡೆದಿತ್ತು. ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಅವರು, ಚನ್ನಪಟ್ಟಣ ಕ್ಷೇತ್ರದ ಶಾಸಕ ಕ್ಷೇತ್ರಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದ್ದು, ನಾಲ್ಕನೇ ಬಾರಿ ಉಪಚುನಾವಣೆ ಹೇರಿದಂತಾಗಿದೆ.

ಎಚ್‌ಡಿಕೆ ಕಾರಣಕ್ಕೆ ಮೂರು ಉಪಚುನಾವಣೆ:

೨೦೦೮ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಕುಮಾರಸ್ವಾಮಿ, ೨೦೦೯ರಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆಗ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ ಅವರು ಉಪಚುನಾವಣೆ ಎದುರಾಗುವಂತೆ ಮಾಡಿದರು. ತಾವು ತೆರವು ಮಾಡಿದ ಕ್ಷೇತ್ರಕ್ಕೆ ಸ್ವಪಕ್ಷದಿಂದ ಕೆ.ರಾಜು ಅವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡಿದ್ದರು.

ಇನ್ನು ೨೦೧೩ರಲ್ಲಿ ತಮ್ಮ ಲೋಕಸಭಾ ಸದಸ್ಯತ್ವ ಇನ್ನು ಒಂದು ವರ್ಷ ಅವಧಿ ಉಳಿದಿರುವ ಸಂದರ್ಭದಲ್ಲೇ ಎದುರಾದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಗೆಲುವು ಸಾಧಿಸಿದ ನಂತರ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣಕ್ಕೆ ಮತ್ತೊಂದು ಉಪಚುನಾವಣೆ ಎದುರಾಗಿತ್ತು. ಆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಕೆ.ಸುರೇಶ್ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು.

೨೦೧೮ರಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ:

೨೦೧೮ರಲ್ಲಿ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲೂ ಎಚ್.ಡಿ.ಕುಮಾರಸ್ವಾಮಿ ಏಕಕಾಲಕ್ಕೆ ಸ್ಪರ್ಧೆ ಮಾಡಿದರು. ಆ ಚುನಾವಣೆಯಲ್ಲಿ ಅವರು ಎರಡು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದ್ದು, ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮತ್ತೊಂದು ಉಪಚುನಾವಣೆ ಎದುರಾಗುವಂತೆ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವಿದ್ದ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿತಾಕುಮಾರಸ್ವಾಮಿ ಗೆಲುವು ಸಾಧಿಸಿದ್ದರು.

ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು, ಸಂಸದರಾಗಿ ಮುಂದುವರಿಯಲು ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದ್ದು, ಮತ್ತೊಂದು ಉಪಚುನಾವಣೆಗೆ ಬೊಂಬೆನಾಡು ಸಜ್ಜಾಗುವಂತೆ ಮಾಡಿದ್ದಾರೆ.

ಬಾಕ್ಸ್..................

ಚನ್ನಪಟ್ಟಣಕ್ಕೂ ಉಪಚುನಾವಣೆಗೂ ನಂಟು!

ಬೊಂಬೆನಾಡು ಖ್ಯಾತಿಯ ಚನ್ನಪಟ್ಟಣಕ್ಕೂ ಉಪಚುನಾವಣೆಗೂ ಒಂದು ರೀತಿಯ ಬಿಡಿಸಲಾಗದ ನಂಟು. ಕ್ಷೇತ್ರ ಬೊಂಬೆಗಳಿಗೆ ಖ್ಯಾತವೆತ್ತಂತೆಯೇ ಉಪಚುನಾವಣೆಗಳಿಗೂ ಖ್ಯಾತಿ ಪಡೆದಿದೆ.

೧೯೯೯ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಸಿ.ಪಿ.ಯೋಗೇಶ್ವರ್ ಮೊದಲ ವಿಧಾನಸಭೆ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದರು. ಇನ್ನು ೨೦೦೪ ಹಾಗೂ ೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಸಹ ಗೆಲುವು ಸಾಧಿಸಿ ಹ್ಯಾಟ್ರಿಕ್ ಶಾಸಕ ಎನ್ನಿಸಿಕೊಂಡರು. ೨೦೦೯ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾದ ಸಿಪಿವೈ ೨೦೦೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾದರು. ತಮ್ಮ ರಾಜೀನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ ಕ್ಷೇತ್ರದ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಹುರಿಯಾಳಾಗಿ ಸ್ಪರ್ಧಿಸಿದ ಅವರು ಜೆಡಿಎಸ್ ಅಭ್ಯರ್ಥಿ ಎಂ.ಸಿ.ಅಶ್ವತ್ಥ್ ವಿರುದ್ಧ ಸೋಲನುಭವಿಸಿದರು.

ಆ ನಂತರ ರಾಜ್ಯ ರಾಜಕೀಯದಲ್ಲಿ ನಡೆದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಚನ್ನಪಟ್ಟಣ ಶಾಸಕ ಎಂ.ಸಿ.ಅಶ್ವತ್ಥ್ ಆಪರೇಷನ್ ಕಮಲಕ್ಕೆ ಒಳಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಶ್ವತ್ಥ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ೨೦೧೧ರಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಸಿಪಿವೈ ಆ ಚುನಾವಣೆ ಜೆಡಿಎಸ್ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಅವರನ್ನು ಪರಾಭವಗೊಳಿಸಿದರು. ಒಂದೇ ವಿಧಾನಸಭೆ ಅವಧಿಯಲ್ಲಿ ಆಪರೇಷನ್ ಕಮಲದ ಕಾರಣಕ್ಕೆ ಎರಡು ಬಾರಿ ಉಪಚುನಾವಣೆ ಎದುರಿಸಿದ ಕಳಂಕಕ್ಕೆ ಕ್ಷೇತ್ರ ಪಾತ್ರವಾಗಿತ್ತು.

ಬಾಕ್ಸ್..........

ಮೂರನೇ ಬಾರಿ ಲೋಕಸಭೆಗೆ ಎಚ್‌ಡಿಕೆ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರಿಗೆ ಇದು ಮೂರನೇ ಲೋಕಸಭಾ ಚುನಾವಣೆ ಗೆಲುವಾಗಿದೆ. ತಮ್ಮ ರಾಜಕೀಯ ಜೀವನದಲ್ಲಿ ೬ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಎಚ್‌ಡಿಕೆ ೩ ಬಾರಿ ಗೆಲುವು ಸಾಧಿಸಿದ್ದರೆ, ಮೂರು ಬಾರಿ ಸೋಲಿನ ರುಚಿ ಕಂಡಿದ್ದಾರೆ. ೧೯೯೬ರಲ್ಲಿ ಆಗಿನ ಕನಕಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ ಕುಮಾರಸ್ವಾಮಿ ಮೊದಲ ಪ್ರಯತ್ನಲ್ಲೇ ೫ ಬಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎಂ.ವಿ.ಚಂದ್ರಶೇಖರ್ ಮೂರ್ತಿ ಅವರನ್ನು ಪರಾಭವಗೊಳಿಸಿ ಸಂಸತ್ ಪ್ರವೇಶಿಸಿದರು.

ಆ ನಂತರ ೧೯೯೮ ಮತ್ತು ೧೯೯೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಜನತಾದಳ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರಾದರೂ ಎರಡೂ ಚುನಾವಣೆಯಲ್ಲಿ ಸೋಲು ಅನುಭವಿಸಿ, ಮೂರನೇ ಸ್ಥಾನಕ್ಕೆ ತೃಪ್ತರಾದರು. ೨೦೦೯ರಲ್ಲಿ ಕನಕಪುರ ಕ್ಷೇತ್ರ ಮರುವಿಂಗಡನೆಯ ನಂತರ ರಚಿತಗೊಂಡ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೊದಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಎಚ್‌ಡಿಕೆ ಬಿಜೆಪಿಯ ಸಿ.ಪಿ.ಯೋಗೇಶ್ವರ್ ವಿರುದ್ಧ ಗೆಲುವು ಸಾಧಿಸಿದರು.

೨೦೧೪ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರಾಂತರ ಮಾಡಿದ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಂ.ವೀರಪ್ಪ ಮೋಯ್ಲಿ ವಿರುದ್ಧ ಸೋಲು ಅನುಭವಿಸಿದ್ದು, ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು. ಇದೀಗ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿ ಸಂಸತ್ ಪ್ರವೇಶಿಸಿದ್ದಾರೆ. ಪೊಟೋ೪ಸಿಪಿಟ೧:

ಎಚ್.ಡಿ.ಕುಮಾರಸ್ವಾಮಿ.

Share this article