ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ವಾಹನಗಳ ಸಂಖ್ಯೆ ಹಾಗೂ ವಾಹನ ಚಾಲನಾ ಪರವಾನಗಿ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಕಚೇರಿಗೆ ವಾಹನ ಚಾಲನಾ ಪರೀಕ್ಷಾ ಪಥವನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ತಾಲೂಕಿನ ಗಬ್ಬೂರು ಕ್ರಾಸ್‌ನಲ್ಲಿ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಇಡಿ ಜಿಲ್ಲೆಗೆ ಇರುವ ನವನಗರ ಸಾರಿಗೆ ಕಚೇರಿಗೆ ಜನ ದಟ್ಟನೆಯಿಂದಾಗಿ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಿತ್ತು. ಹೀಗಾಗಿ ಶಾಸಕ ಪ್ರಸಾದ ಅಬ್ಬಯ್ಯ ಪ್ರಸ್ತಾವನೆಯಂತೆ ಈ ನೂತನ ಕಚೇರಿಯನ್ನು ₹8 ಕೋಟಿ ವೆಚ್ಚದಲ್ಲಿ ಮಂಜೂರಾತಿ ನೀಡಿ ಈಗ ಉದ್ಘಾಟನೆಯಾಗಿದೆ. ವಾಹನ ಪರೀಕ್ಷಾ ಪಥಕ್ಕೆ ಬೇಕಾದ ಅಗತ್ಯ ಜಾಗ ಗುರುತಿಸಿದಲ್ಲಿ ಇಲಾಖೆಯಿಂದ ಶೀಘ್ರವೇ ಅನುಮೋದನೆ ನೀಡಲಾಗುವುದು ಎಂದರು.ವಾಹನ ಚಾಲನಾ ಕಾರ್ಡ್ ವಿತರಣೆ, ಪೂರೈಕೆಯಲ್ಲಿ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಒಂದು ದೇಶ ಒಂದು ಕಾರ್ಡ್ ಹೊಸ ಯೋಜನೆಯ ಅಡಿ ಇನ್ನು 3 ತಿಂಗಳಲ್ಲಿ ದೇಶದಲ್ಲಿ ಒಂದೇ ಬಗೆಯ ವಾಹನ ಚಾಲನಾ ಕಾರ್ಡ ಒದಗಿಸಲಾಗುತ್ತಿದೆ. ಇದರಿಂದ ಈ ಸಮಸ್ಯೆ ಬಗೆಹರಿಯಲಿದೆ. ರಾಜ್ಯದ 7 ಕಡೆ ನೂತನವಾಗಿ ಸ್ವಯಂ ಚಾಲಿತ ಚಾಲನಾ ಪಥಗಳನ್ನು ನಿರ್ಮಿಸಲಾಗುತ್ತಿದ್ದು, ಯಾರು ವಾಹನ ಸರಿಯಾಗಿ ಚಲಾಯಿಸುತ್ತಾರೆ ಅವರಿಗೆ ಅಟೋಮೆಟಿಕ್ ಗುಣಾಂಕಗಳು ದೊರೆಯುತ್ತದೆ. ಇದರಿಂದಾಗಿ ಪಾರದರ್ಶಕವಾದ ಕೆಲಸ ನಡೆಸಲು ಸಹಕಾರಿಯಾಗಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಸಾರಿಗೆ ಸಂಸ್ಥೆಯಲ್ಲಿ 9 ಸಾವಿರ ಸಿಬ್ಬಂದಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ವಿವಿಧೆಡೆ ಚಾಲನಾ ಪಥದ ಸಿವಿಲ್ ಕಾಮಕಾರಿಗಳು ಪ್ರಗತಿಯಲ್ಲಿದ್ದು, ಶೀಘ್ರವೇ ಪೂರ್ಣಗೊಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಸುಮಾರು 5 ಸಾವಿರಕ್ಕೂ ಅಧಿಕ ಹೊಸ ಬಸ್ಸುಗಳನ್ನು ಖರೀದಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಇದೀಗ 800ಕ್ಕೂ ಅಧಿಕ ಬಸ್ಸುಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತವಾಗಿ ಧಾರವಾಡ ಜಿಲ್ಲೆಗೆ ಇತ್ತೀಚೆಗೆ 50 ಬಸ್ಸುಗಳನ್ನು ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಬಸ್ಸುಗಳನ್ನು ನೀಡಲಾಗುವುದು, ಸಾರಿಗೆ ಸಚಿವರು ಉತ್ತರ ಕರ್ನಾಟಕ ಭಾಗಕ್ಕೆ ಸಾರಿಗೆ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನವನಗರ ಪ್ರಾದೇಶಿಕ ಸಾರಿಗೆ ಕಚೇರಿಗೆ ದಟ್ಟನೆಯಾಗುತ್ತಿರುವ ಹಿನ್ನಲೆಯಲ್ಲಿ ಈ ನೂತನ ಕಚೇರಿ ಆರಂಭಿಸಲಾಗಿದ್ದು ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಒಂದು ಎಕರೆ 20 ಗುಂಟೆಯಲ್ಲಿ ಈ ಕಚೇರಿಯನ್ನು ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಿ ತಮ್ಮ ಅವಧಿಯಲ್ಲೆ ಉದ್ಘಾಟಿಸಿದ ಸಾರಿಗೆ ಸಚಿವರ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ಶಕ್ತಿ ಯೋಜನೆಗೆ ನಿಜವಾದ ಶಕ್ತಿ ತುಂಬಿದ್ದಾರೆ ಎಂದರು.
ಪ್ರಾದೇಶಿಕ ಸಾರಿಗೆ ಆಯುಕ್ತ ಡಾ. ಮಾರುತಿ ಸಾಂಬ್ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ವಿಭಾಗದ ಸಾರಿಗೆ ಜಂಟಿ ನಿರ್ದೇಶಕಿ ಓಂಕಾರೇಶ್ವರಿ ಎಂ.ಟಿ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್, ಸದಾನಂದ ಡಂಗನವರ, ಮೋಹನ ಅಸುಂಡಿ, ಮಹೇಂದ್ರ ಸಿಂಘಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ, ಮೋಹನ ಅಸುಂಡಿ, ಸುವರ್ಣ ಕಲಕುಂಟ್ಲಾ, ದೊರಾಜ್ ಮಣಿಕಂಟ್ಲಾ ಸೇರಿದಂತೆ ಹಲವರಿದ್ದರು.